
“ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರನಾದ ನಾನು ಮೆರಿಟ್ ವಿದ್ಯಾರ್ಥಿ. ರಾಜಕೀಯದಲ್ಲಿ ಬೇಗ ಬೆಳೆದಿದ್ದು, ನನಗೆ ಮುಳುವಾಗಿದೆ. ಆದರೆ, ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇನೆ” ಎಂಬ ಅಪರಾಧಿ ಪ್ರಜ್ವಲ್ ರೇವಣ್ಣ ಅವರ ವಾದ ಆಲಿಸಿದ ನ್ಯಾಯಾಲಯವು ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತೀರ್ಪನ್ನು ಮಧ್ಯಾಹ್ನ 2.45ಕ್ಕೆ ಪ್ರಕಟಿಸುವುದಾಗಿ ಆದೇಶಿಸಿದೆ.
47 ವರ್ಷದ ಮನೆಕೆಲಸದ ಮಹಿಳೆಯ ಮೇಲೆ ಪದೇಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶುಕ್ರವಾರ ಪ್ರಜ್ವಲ್‌ರನ್ನು ದೋಷಿ ಎಂದು ಘೋಷಿಸಿದ್ದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣ ನಿಗದಿ ಪಡಿಸುವುದಕ್ಕೂ ಮುನ್ನ ಎರಡೂ ಪಕ್ಷಕಾರರ ನಡುವಿನ ವಾದಗಳನ್ನು ಆಲಿಸಿದರು.
ಇದರ ಭಾಗವಾಗಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯಕ್ ಮತ್ತು ಬಿ ಎನ್ ಜಗದೀಶ್ ಹಾಗೂ ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರ ವಾದ ಮಂಡಿಸಿದರು. ಅಂತಿಮವಾಗಿ ಪ್ರಜ್ವಲ್‌ಗೂ ತಮ್ಮ ಅನಿಸಿಕೆ ಹೇಳಿಕೊಳ್ಳಲು ನ್ಯಾಯಾಲಯ ಅವಕಾಶ ಕಲ್ಪಿಸಿತು.
ಈ ಸಂದರ್ಭದಲ್ಲಿ ಪ್ರಜ್ವಲ್ “ನಾನು ಒಮ್ಮೆ ಸಂಸದನಾಗಿ ಕೆಲಸ ಮಾಡಿದ್ದೇನೆ. ಸಂಸದನಾಗಿದ್ದಾಗ ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಯಾರೂ ಆರೋಪಿಸಿರಲಿಲ್ಲ. ಆದರೆ, ಚುನಾವಣೆಯ ಸಂದರ್ಭದಲ್ಲಿ ಈ ಆರೋಪ ಮಾಡಿದ್ದಾರೆ. ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಆರು ತಿಂಗಳಿಂದ ತಂದೆ-ತಾಯಿಯನ್ನು ನೋಡಿಲ್ಲ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರನಾದ ನಾನು ಮೆರಿಟ್ ವಿದ್ಯಾರ್ಥಿ. ರಾಜಕೀಯದಲ್ಲಿ ನಾನು ಬೇಗ ಬೆಳೆದಿದ್ದು, ನನಗೆ ಮುಳುವಾಯಿತು” ಎಂದು ಗದ್ಗದಿತರಾದರು.
ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್ ಪರ ಬಿ ಎನ್ ಜಗದೀಶ್ ಅವರು “ಜೀವನೋಪಾಯಕ್ಕಾಗಿ ಮನೆಕೆಲಸಕ್ಕೆ ಸೇರಿದ ಅನಕ್ಷರಸ್ಥೆಯ ಮೇಲೆ ಪ್ರಜ್ವಲ್ ಪದೇಪದೇ ಪ್ರಜ್ವಲ್ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವೇಳೆ ಸೆರೆ ಹಿಡಿದಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಮಾನಸಿಕವಾಗಿ ಹಿಂಸೆ ಅನುಭವಿಸಿ, ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದರು. ಸಾಕಷ್ಟು ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪ್ರಜ್ವಲ್ ವಿಡಿಯೋ ಮಾಡಿದ್ದಾನೆ. ಈತ ಚಟಗಾರನಾಗಿದ್ದು, ಆತನ ವಿರುದ್ದ ಇನ್ನೂ ಮೂರು ಅತ್ಯಾಚಾರ ಪ್ರಕರಣ ಬಾಕಿ ಇವೆ. ಹೀಗಾಗಿ, ಪ್ರಜ್ವಲ್‌ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಸಂದೇಶ ರವಾನಿಸಬೇಕು” ಎಂದು ಕೋರಿದರು.
“ಸಂತ್ರಸ್ತ ಮಹಿಳೆಯನ್ನು ಅಪಹರಿಸಿ ಪ್ರಕರಣವನ್ನು ದಿಕ್ಕುತಪ್ಪಿಸುವ ಯತ್ನ ನಡೆದಿತ್ತು. ಅಪರಾಧಿ ಪ್ರಜ್ವಲ್ ತನ್ನ ಕೃತ್ಯಕ್ಕೆ ಪಶ್ಚಾತಾಪ ವ್ಯಕ್ತಪಡಿಸಿಲ್ಲ. ಸಮಾಜದಲ್ಲಿ ತಮಗಿದ್ದ ಸ್ಥಾನಮಾನವನ್ನು ದುರ್ಬಳಕೆ ಮಾಡಿಕೊಂಡು ಈ ಘೋರ ಅಪರಾಧ ಎಸಗಿದ್ದಾನೆ. ಸಂತ್ರಸ್ತೆ ಪರಿಪರಿಯಾಗಿ ಬೇಡಿಕೊಂಡರೂ ಆಕೆಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಲಾಗಿದೆ. ಇದು ಪ್ರಜ್ವಲ್ ವಿಕೃತ ಮನಸ್ಥಿತಿಗೆ ದ್ಯೋತಕವಾಗಿದೆ. ಹೀಗಾಗಿ, ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಸಂದೇಶ ರವಾನಿಸಬೇಕು” ಎಂದು ಮನವಿ ಮಾಡಿದರು.
ಈ ವಾದ ವಿಸ್ತರಿಸಿದ ಇನ್ನೊಬ್ಬ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್ ಅವರು “ಅತ್ಯಂತ ಎಳೆಯ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರಜ್ವಲ್ ಎಸಗಿರುವ ಕೃತ್ಯ ಹೀನವಾದುದು. ಹೀಗಾಗಿ, ಪ್ರಜ್ವಲ್‌ಗೆ ದುಬಾರಿ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸಬೇಕು. ದಂಡದ ಪೈಕಿ ಹೆಚ್ಚಿನ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ವಿಡಿಯೋ ವೈರಲ್ ಆದುದರಿಂದ ಸಂತ್ರಸ್ತೆಯು ಸಾಮಾಜಿಕವಾಗಿ ಮುಜುಗರ, ಅವಮಾನ ಅನುಭವಿಸಿದ್ದಾರೆ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು” ಎಂದು ಕೋರಿದರು.
ಪ್ರಜ್ವಲ್ ಪರ ಹಿರಿಯ ವಕೀಲ ನಳಿನಾ ಮಾಯೇಗೌಡ ಅವರು “ಪ್ರಜ್ವಲ್ ಹಣ ಮಾಡಬೇಕು ಎಂದು ರಾಜಕೀಯಕ್ಕೆ ಬಂದಿರಲಿಲ್ಲ. ಜನಸೇವೆಗೆ ಅವರು ರಾಜಕಾರಣಕ್ಕೆ ಬಂದಿದ್ದರು. 2024ರ ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಅಶ್ಲೀಲ ವಿಡಿಯೋಗಳನ್ನು ಬಹಿರಂಗಗೊಳಿಸಲಾಗಿದೆ. ಪ್ರಜ್ವಲ್ ರಾಜಕೀಯ ಹಿನ್ನೆಲೆಯನ್ನು ಶಿಕ್ಷೆ ವಿಧಿಸಲು ಪರಿಗಣಿಸಬಾರದು. ಸಂಸದರಾಗಿ ಪ್ರಜ್ವಲ್ ಮಾಡಿರುವ ಕೆಲಸಕ್ಕೆ ಚ್ಯುತಿಯಾಗಬಾರದು. ಆತನಿಗೆ ಕೇವಲ 34 ವರ್ಷವಷ್ಟೆ. ಸಂತ್ರಸ್ತೆಯು ಸಮಾಜದಿಂದ ತಿರಸ್ಕೃತವಾಗಿಲ್ಲ. ಆಕೆ ಕುಟುಂಬದ ಜೊತೆ ಜೀವನ ಮುಂದುವರಿಸಿದ್ದಾರೆ. ಪ್ರಜ್ವಲ್‌ಗೆ ನಷ್ಟವಾಗಿದ್ದು, ತೇಜೋವಧೆಯಾಗಿದೆ” ಎಂದರು.
“ಕಳೆದ ಒಂದು ವರ್ಷ ನಾಲ್ಕು ತಿಂಗಳಿಂದ ಪ್ರಜ್ವಲ್ ಜೈಲಿನಿಲ್ಲಿದ್ದಾನೆ. ಇನ್ನೂ ಯುವಕನಾಗಿರುವ ಪ್ರಜ್ವಲ್ ಜೀವನಕ್ಕೆ ಮುಳುವಾಗುವಂಥ ಶಿಕ್ಷೆ ನೀಡಬಾರದು. ಸಂತ್ರಸ್ತೆಗಿಂತ ಅಪರಾಧಿ ಪ್ರಜ್ವಲ್‌ಗೆ ಸಾಕಷ್ಟು ಹಾನಿಯಾಗಿದೆ. ಪ್ರಜ್ವಲ್ ರಾಜಕೀಯ ಭವಿಷ್ಯ ಹಾಳು ಮಾಡಲು ಈ ಕುತಂತ್ರ ನಡೆಸಲಾಗಿದೆ” ಎಂದರು.
“ಸಂತ್ರಸ್ತೆ ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ” ಎಂಬರ್ಥದ ನಳಿನಾ ಮಾಯೇಗೌಡ ಅವರ ವಾದಕ್ಕೆ ಆಕ್ಷೇಪಿಸಿದ ಜಗದೀಶ್ ಅವರು “ಈ ರೀತಿಯ ವಾದ ಸರಿಯಲ್ಲ. ಸಂತ್ರಸ್ತೆ ಅಪಾರ ಹಾನಿ ಅನುಭವಿಸಿದ್ದಾರೆ” ಎಂದು ಆಕ್ಷೇಪಿಸಿದರು.