ರಾಜಕೀಯ ಹಸ್ತಕ್ಷೇಪ, ಸ್ವಾಯತ್ತತೆಯ ಕೊರತೆಯಿಂದ ನಮ್ಮ ಸಂಸ್ಥೆಗಳ ಕೆಲಸದ ಮೇಲೆ ಪರಿಣಾಮ: ನ್ಯಾ. ಪಿ ಎಸ್‌ ನರಸಿಂಹ

ನಮ್ಮ ಸಂಸ್ಥೆಗಳನ್ನು ಕಾರ್ಯೋನ್ಮುಖವಾಗಿಸುವುದು ಸಂವಿಧಾನವನ್ನು ಎತ್ತಿಹಿಡಿಯುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಅವರು ಪ್ರತಿಪಾದಿಸಿದರು.
Justice PS Narasimha
Justice PS Narasimha
Published on

ಸಾಂವಿಧಾನಿಕ ಸಂಸ್ಥೆಗಳನ್ನು ಬಲಪಡಿಸಲು ಸಮಯ ಮತ್ತು ಶ್ರಮ ವ್ಯಯಿಸದೆ ಸಂವಿಧಾನದ ಆಶಯ ಮತ್ತು ಪೀಠಿಕೆಯಲ್ಲಿನ ಉದ್ದೇಶಗಳನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಪಿ ಎಸ್ ನರಸಿಂಹ ತಿಳಿಸಿದರು.

ನ್ಯಾ. ಇ ಎಸ್ ವೆಂಕಟರಾಮಯ್ಯ ಅವರ ಸ್ಮರಣಾರ್ಥ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Also Read
ಕಾರ್ಯಾಂಗ ತನ್ನ ಎಲ್ಲೆ ಮೀರಿದ್ದಕ್ಕೆ 'ಬುಲ್ಡೋಜರ್ ನ್ಯಾಯʼ ಉದಾಹರಣೆ: ನ್ಯಾ. ಬಿ ವಿ ನಾಗರತ್ನ

ನಮ್ಮ ಸಂಸ್ಥೆಗಳನ್ನು ಕಾರ್ಯೋನ್ಮುಖವಾಗಿಸುವುದು ಸಂವಿಧಾನವನ್ನು ಎತ್ತಿಹಿಡಿಯುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಅವರು ಪ್ರತಿಪಾದಿಸಿದರು.

ರಾಜಕೀಯ ಹಸ್ತಕ್ಷೇಪ ಮತ್ತು ಆರ್ಥಿಕ ಮತ್ತು ನಿರ್ಧಾರಾತ್ಮಕ ಸ್ವಾಯತ್ತತೆಯ ಕೊರತೆ ಸೇರಿದಂತೆ ವಿವಿಧ ಅಂಶಗಳು ಸಾಂಸ್ಥಿಕ ಕಾರ್ಯಚಟುವಟಿಕೆಗೆ ಅಡ್ಡಿಯಾಗುತ್ತಿವೆ ಎಂದು ಅವರು ವಿಷಾದಿಸಿದರು.

ಸಾಂವಿಧಾನಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ನಾವು ಸಮಯ ಮತ್ತು ಶ್ರಮ ವ್ಯಯಿಸದೇ ಹೋದರೆ ಸಂವಿಧಾನದ ಆಶಯ ಮತ್ತು ಪೀಠಿಕೆಯಲ್ಲಿನ ಉದ್ದೇಶಗಳನ್ನು ಸಾಕಾರಗೊಳಿಸಲು ಆಗದು. ಸಂವಿಧಾನವನ್ನು ಕಾರ್ಯಪ್ರವೃತ್ತವಾಗಿಸುವ ಏಕೈಕ ಮಾರ್ಗವೆಂದರೆ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಕಾರ್ಯೋನ್ಮುಖವಾಗಿಸುವುದಾಗಿದೆ ಎಂದು ಅವರು ವಿವರಿಸಿದರು.

ನ್ಯಾಯಮೂರ್ತಿ ನರಸಿಂಹ ಅವರು ಸಾಂಸ್ಥಿಕ ಪರಿವರ್ತನೆಗೆ ಅಗತ್ಯವಾದ ಐದು ಮಾದರಿ ಬದಲಾವಣೆಗಳನ್ನು ವಿವರಿಸಿದರು. ವ್ಯಕ್ತಿಗತ ಯತ್ನದಿಂದ ಸಾಮೂಹಿಕ ಪ್ರಯತ್ನಗಳೆಡೆಗೆ, ವಿವೇಚನೆಯಿಂದ ಹೊಣೆಗಾರಿಕೆಯಡೆಗೆ, ಗೌಪ್ಯತೆಯಿಂದ ಪಾರದರ್ಶಕತೆ ಕಡೆಗೆ, ಅಧಿಕಾರದಿಂದ ಜವಾಬ್ದಾರಿಯತ್ತ, ಮತ್ತು ಪ್ರತಿಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆಯಿಂದ ವಿಚಾರಶೀಲ, ಸಮತೋಲಿತ ಆಯ್ಕೆಗಳತ್ತ ಚಲಿಸುವ ಅಗತ್ಯವಿದೆ ಎಂದು ಅವರು ಹೇಳಿದರು.  

ಸಂವಿಧಾನದಲ್ಲಿ ಕಲ್ಪಿಸಿರುವಂತೆ ಸಂಸ್ಥೆಗಳು ಕಾರ್ಯನಿರ್ವಹಿಸಲು ಈ ಬದಲಾವಣೆಗಳು ನಿರ್ಣಾಯಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಥೆಗಳು ಕಳಪೆಯಾಗಿ ಕಾರ್ಯನಿರ್ವಹಿಸಲು ಸಾಮರ್ಥ್ಯದ ವೈಫಲ್ಯ, ಮೂಲಸೌಕರ್ಯ ಕೊರತೆ, ಸಂಸ್ಥೆಗಳಿಗೆ ಸ್ವಾಯತ್ತ ಅಧಿಕಾರ ಇಲ್ಲದಿರುವಿಕೆ, ನಿರ್ಧಾರಗಳನ್ನು ಜಾರಿಗೊಳಿಸುವಲ್ಲಿನ ಸೋಲು, ಅನಪೇಕ್ಷಿತ ರಾಜಕೀಯ ಹಸ್ತಕ್ಷೇಪ ಹಾಗೂ ಸಂಸ್ಥೆಗಳ ನಡುವಿನ ಅತಿಕ್ರಮಣಕಾರಿ ನಿರ್ಧಾರಗಳು ಕಾರಣಗಳು ಎಂದು ಅವರು ಹೇಳಿದರು.

Also Read
ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಹೋದರೆ ಜನ ʼಗುಂಪು ನ್ಯಾಯʼದ ಮೊರೆ ಹೋಗಬಹುದು: ನ್ಯಾ. ಬಿ ಆರ್ ಗವಾಯಿ ಆತಂಕ

ಸಾಂಸ್ಥಿಕ ಕಾರ್ಯಕ್ಷಮತೆಯ ಬಗ್ಗೆ ನಿರಂತರ ಸಂವಾದಗಳು ನಡೆಯಬೇಕಿದೆ ಎಂದ ಅವರು ಚರ್ಚೆಗಳು ಕಾನೂನು ಪಾಂಡಿತ್ಯಕ್ಕೆ ಸೀಮಿತವಾಗದೆ ದೇಶದ ಪ್ರಜಾಸತ್ತಾತ್ಮಕ ಸಂವಿಧಾನದ ಪ್ರಾಯೋಗಿಕ ಕಾರ್ಯನಿರ್ವಹಣೆಗೆ ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನ್ಯಾ. ಇ ಎಸ್ ವೆಂಕಟರಾಮಯ್ಯ ಅವರ ಪುತ್ರಿ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌, ಕಾನೂನು ಶಾಲೆಯ ಕುಲಪತಿ ಸುಧೀರ್‌ ಕೃಷ್ಣಸ್ವಾಮಿ, ಕುಲಸಚಿವ ನಿಗಮ್‌ ನುಗ್ಗೆಹಳ್ಳಿ ಇನ್ನಿತರರು ಭಾಗವಹಿಸಿದ್ದರು.

Kannada Bar & Bench
kannada.barandbench.com