ಅಲಿಗಢ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನದ ಮೇಲೆ ಅದರ ಸಂಸ್ಥಾಪಕರ ರಾಜಕೀಯ ನಿಷ್ಠೆ ಪರಿಣಾಮ ಬೀರದು: ಸುಪ್ರೀಂ

ಸಂಸ್ಥಾಪಕರು ಮಹಾತ್ಮ ಗಾಂಧಿ ಅಥವಾ ಖಿಲಾಫತ್ ಚಳವಳಿ ಜೊತೆ ಕೈಜೋಡಿಸಿದ್ದರೂ ಆ ವಿಚಾರ ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನದ ಮೇಲೆ ಯಾವುದೇ ಪರಿಣಾಮ ಬೀರದು ಎಂದ ಪೀಠ.
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌

ಬ್ರಿಟಿಷರ ಕಾಲದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಸಂಸ್ಥಾಪಕರು ಮಾಡಿಕೊಂಡಿದ್ದ ರಾಜಕೀಯ ಹೊಂದಾಣಿಕೆ ಈಗ ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನ ನಿರ್ಧರಿಸುವುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ [ತನ್ನ ರಿಜಿಸ್ಟ್ರಾರ್‌ ಫೈಜಾನ್ ಮುಸ್ತಫಾ ಅವರ ಮೂಲಕ ಅಲಿಗಢ ವಿಶ್ವವಿದ್ಯಾಲಯ ಮತ್ತು ನರೇಶ್‌ ಅಗರ್‌ವಾಲ್‌ ಇನ್ನಿತರರ ನಡುವಣ ಪ್ರಕರಣ].

ವಿವಿಯ ಸಂಸ್ಥಾಪಕರು ಮಹಾತ್ಮ ಗಾಂಧಿ ಅಥವಾ ಖಿಲಾಫತ್ ಅವರೊಂದಿಗೆ ಮೈತ್ರಿ ಮಾಡಿಕೊಂಡಿರಬಹುದಾದರೂ ಅದು ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸೂರ್ಯಕಾಂತ್, ಜೆ ಬಿ ಪರ್ದಿವಾಲಾ, ದೀಪಂಕರ್ ದತ್ತಾ,  ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ತಿಳಿಸಿತು.

ಎಎಂಯು ಸಂಸ್ಥಾಪಕರು ಬ್ರಿಟಿಷರಿಗೆ ನಿಷ್ಠರು ಎಂದು ಪ್ರತಿಯೊಬ್ಬ ಇತಿಹಾಸಕಾರರೂ ಬಣ್ಣಿಸಿದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.

ಆಗ ಸಿಜೆಐ "(ಸಂಸ್ಥಾಪಕರ ) ಎರಡು ಬಣಗಳಿದ್ದವು ಎಂದಿಟ್ಟುಕೊಳ್ಳೋಣ. ಗಾಂಧೀಜಿಯವರಿಗೆ ಇಲ್ಲವೇ ಜಾಮಿಯಾದಿಂದ ಕವಲೊಡೆದ ಖಿಲಾಫತ್‌ಗೆ ನಿಷ್ಠರಾಗಿದ್ದವರು ಇರಬಹುದು. ಅವರ ನಿಷ್ಠೆ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನದ ಮೇಲೆ ಬದಲಾವಣೆ ಬೀರದು, ಇಲ್ಲವೇ ಅಂದಿನ ಕಾರ್ಯಾಂಗವನ್ನು ಅವರು ಬೆಂಬಲಿಸಿದ್ದರು ಅಥವಾ ವಿರೋಧಿಸಿದ್ದರು ಎಂಬುದು ಆಧರಿಸಿ ಪರಿಣಾಮ ಬೀರುತ್ತದೆ ಎಂದರ್ಥವಲ್ಲ" ಎಂದು ನುಡಿದರು.

ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸೂರ್ಯಕಾಂತ್, ಜೆಬಿ ಪರ್ದಿವಾಲಾ, ದೀಪಂಕರ್ ದತ್ತಾ,  ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ
ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಸೂರ್ಯಕಾಂತ್, ಜೆಬಿ ಪರ್ದಿವಾಲಾ, ದೀಪಂಕರ್ ದತ್ತಾ, ಮನೋಜ್ ಮಿಶ್ರಾ ಹಾಗೂ ಸತೀಶ್ ಚಂದ್ರ ಶರ್ಮಾ

ಸಂಸದೀಯ ಕಾಯಿದೆ ಮೂಲಕ ಸ್ಥಾಪನೆಯಾದ ಕೇಂದ್ರ ಅನುದಾನಿತ ವಿಶ್ವವಿದ್ಯಾಲಯವನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ಕರೆಯಬಹುದೇ ಎಂಬುದು ಪ್ರಕರಣದ ಪ್ರಮುಖ ಪ್ರಶ್ನೆಯಾಗಿದೆ.

1968ರಲ್ಲಿ ಎಸ್ ಅಜೀಜ್ ಬಾಷಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎಎಂಯುವನ್ನು ಕೇಂದ್ರೀಯ ವಿಶ್ವವಿದ್ಯಾಲಯ ಎಂದು ಪರಿಗಣಿಸಿತ್ತು. ಇದೇ ಪ್ರಕರಣದಲ್ಲಿ, ಭಾರತೀಯ ಸಂವಿಧಾನದ 29 ಮತ್ತು 30ನೇ ವಿಧಿಗಳ ಅಡಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಆದರೆ 1981ರಲ್ಲಿ ಎಎಂಯು ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ಉಳಿಸಿಕೊಳ್ಳಲಾಗಿತ್ತು. ಇದನ್ನು ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಹೀಗೆ ತಿದ್ದುಪಡಿ ತಂದದ್ದು ಅಸಾಂವಿಧಾನಿಕ ಎಂದು ಅದು 2006ರಲ್ಲಿ ತಳ್ಳಿಹಾಕಿತು. ಹೀಗಾಗಿ ಎಎಂಯು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ವಿಶೇಷ ಎಂದರೆ 2016ರಲ್ಲಿ ಕೇಂದ್ರ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ಹಿಂಪಡೆಯಿತು. ಪ್ರಕರಣದ ಅಂತಿಮ ವಿಚಾರಣೆ ಕಳೆದ ಜನವರಿ 9ರಂದು ಪ್ರಾರಂಭವಾಗಿತ್ತು. ಶಿಕ್ಷಣ ಸಂಸ್ಥೆಯನ್ನು ಕಾನೂನಿನಿಂದ ನಿಯಂತ್ರಿಸಲಾಗುತ್ತದೆ ಎಂಬ ಕಾರಣಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಅನುಭವಿಸುವುದನ್ನು ತಡೆಯಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಜನವರಿ 10ರಂದು ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಶಿಕ್ಷಣದ ವಿಚಾರದಲ್ಲಿ ಭಾರತದಲ್ಲಿ ಮುಸ್ಲಿಮರ ಸ್ಥಿತಿ ಪರಿಶಿಷ್ಟ ಜಾತಿಗಳಿಗಿಂತ ಕೆಟ್ಟದಾಗಿದ್ದು ಶಿಕ್ಷಣದ ಮೂಲಕ ಮಾತ್ರ ಅವರ ಸಬಲೀಕರಣ ಸಾಧ್ಯ ಎಂದಿದ್ದರು.

ಮಂಗಳವಾರ, ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಹಿರಿಯ ವಕೀಲ ರಾಜೀವ್ ಧವನ್, ವಕೀಲ ಎಂ ಆರ್ ಶಂಶಾದ್, ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ಇಂದು (ಬುಧವಾರ) ಕೂಡ ಮುಂದುವರೆದಿದೆ.

Related Stories

No stories found.
Kannada Bar & Bench
kannada.barandbench.com