ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌ ಅವರನ್ನು ಪಾಕಿಸ್ತಾನಿ ಎಂದ ಆರೋಪ: ಬಿಜೆಪಿಯ ರವಿಕುಮಾರ್‌ಗೆ ಹೈಕೋರ್ಟ್‌ ತರಾಟೆ

ರಾಜಕಾರಣಿಗಳು ನೀಡುವ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳು ವ್ಯಾಪಕವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಹೈಕೋರ್ಟ್‌.
ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌ ಅವರನ್ನು ಪಾಕಿಸ್ತಾನಿ ಎಂದ ಆರೋಪ: ಬಿಜೆಪಿಯ ರವಿಕುಮಾರ್‌ಗೆ ಹೈಕೋರ್ಟ್‌ ತರಾಟೆ
Published on

ಕಲಬುರ್ಗಿಯಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌ ಅವರನ್ನು ಭಾರತೀಯರೋ ಅಥವಾ ಪಾಕಿಸ್ತಾನಿಯೋ ಎಂದಿದ್ದ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎನ್‌ ರವಿಕುಮಾರ್‌ ವಿರುದ್ಧ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣ ರದ್ದತಿ ಕೋರಿ ರವಿಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನಾಗರಿಕ ಸೇವೆಯಲ್ಲಿರುವ ಅಧಿಕಾರಿಯು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಾರೆ ಎಂದು ಹೇಳಿಕೆ ನೀಡುವುದನ್ನು ಸಹಿಸಲಾಗದು ಎಂದಿತು.

Justice M Nagaprasanna
Justice M Nagaprasanna

“ಫೌಜಿಯಾ ಅವರು ಕರ್ನಾಟಕದ ಐಎಎಸ್‌ ಅಧಿಕಾರಿ. ಇದನ್ನು ಒಪ್ಪಲಾಗದು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಇದು ಅತಿಯಾಯಿತು. ಇದನ್ನು ಕ್ಷಮಿಸಲಾಗದು. ನೀವು ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡಿದ್ದೀರಾ? ಇದಕ್ಕೆ ಅವಕಾಶ ನೀಡಲ್ಲ” ಎಂದು ನ್ಯಾಯಾಲಯ ಹೇಳಿತು.

“ನಿಮ್ಮ ನಾಲಿಗೆಯ ಮೇಲೆ ಎಚ್ಚರಿಕೆ ಇರಲಿ. ಇಂಥ ಕ್ಷುಲ್ಲಕ ಪ್ರಕರಣಗಳಿಂದಾಗಿ ಕೊಲೆ ಮತ್ತು ಸುಲಿಗೆಯಂಥ ಪ್ರಕರಣಗಳು ಹತ್ತು ವರ್ಷಗಳಿಂದ ಬಾಕಿ ಉಳಿದಿವೆ. ನಿಮ್ಮ ನಾಲಿಗೆಯ ಮೇಲೆ ಎಚ್ಚರಿಕೆ ಇಲ್ಲದೇ ಇರುವುದರಿಂದ ಪ್ರಕರಣಗಳು ಏರುಗತಿಯಲ್ಲಿವೆ” ಎಂದಿತು.

“ಯಾವುದೇ ಪಕ್ಷವಾಗಿರಲಿ, ನೀವೆಲ್ಲರೂ ಇದೆಲ್ಲವನ್ನೂ ನಿಲ್ಲಿಸಬೇಕು. ಬರೀ ಕೆಸರೆರಚುವುದೇ ಆಗಿದ್ದು, ಯಾರೂ ನೀತಿ-ನಿರೂಪಣೆಗಳ ಬಗ್ಗೆ ಮಾತನಾಡುತ್ತಿಲ್ಲ. ನೀವೇನು ಮಾತನಾಡುತ್ತಿದ್ದೀರಿ ಎಂಬುದರ ಮೇಲೆ ಜನರಿಗೆ ಆಸಕ್ತಿ ಇಲ್ಲ. ಬದಲಿಗೆ ಅವರ ಕಲ್ಯಾಣದ ಮೇಲೆ ಅವರಿಗೆ ಆಸಕ್ತಿ” ಎಂದು ನ್ಯಾಯಾಲಯ ಹೇಳಿತು.

2025ರ ಮೇನಲ್ಲಿ ಕಲಬುರ್ಗಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಎನ್‌ ರವಿಕುಮಾರ್‌ ಅವರು ಫೌಜಿಯಾ ಅವರನ್ನು ಕುರಿತು ಜಿಲ್ಲಾಧಿಕಾರಿ ಭಾರತೀಯರೋ ಅಥವಾ ಪಾಕಿಸ್ತಾನಿಯೋ ಎಂದಿದ್ದರು. ಇದರ ಬೆನ್ನಿಗೇ ರವಿಕುಮಾರ್‌ ಕ್ಷಮೆ ಕೋರಿದ್ದರು.

“ಧರ್ಮದ ಆಧಾರದ ಮೇಲೆ ಐಎಎಸ್‌ ಅಧಿಕಾರಿಯ ಕಡೆಗೆ ಹೇಗೆ ಬೆರಳು ಮಾಡುತ್ತೀರಿ? ನಾವು ಯಾತ್ರೆಯ ಬಗ್ಗೆ ಮಾತನಾಡುತ್ತಿಲ್ಲ. ಇಂಥ ಹೇಳಿಕೆಗಳನ್ನು ನೀಡಬಾರದು” ಎಂದಿತು.

ರವಿಕುಮಾರ್‌ ಪರ ವಕೀಲ ಎಂ ವಿನೋದ್‌ ಕುಮಾರ್‌ ಅವರು “ಬಿಜೆಪಿ ನಾಯಕನನ್ನು ಬಂಧಿಸಿದ್ದಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ರವಿಕುಮಾರ್‌ ಆಕ್ಷೇಪಾರ್ಹವಾದ ಮಾತುಗಳನ್ನಾಡಿದ್ದಾರೆ. ಇದರಲ್ಲಿ ದುರುದ್ದೇಶವಿರಲಿಲ್ಲ” ಎಂದರು.

ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಮತ್ತು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಅನೂಪ್‌ ಕುಮಾರ್‌ ಅವರು “ರವಿಕುಮಾರ್‌ ಅವರಿಗೆ ಅಹವಾಲುಗಳಿದ್ದರೆ ಮುಖ್ಯ ಕಾರ್ಯದರ್ಶಿಗೆ ದೂರು ನೀಡಬಹುದಿತ್ತೇ ವಿನಾ ಸಾರ್ವಜನಿಕವಾಗಿ ಇಂಥ ಹೇಳಿಕೆ ನೀಡಬಾರದಿತ್ತು” ಎಂದರು.

“ರಾಷ್ಟ್ರೀಯ ಬಾವುಟ ಹಿಡಿಯುವುದು ತಪ್ಪೇ? ನಿಮ್ಮ ಸಮಸ್ಯೆಯೇನು? ರವಿಕುಮಾರ್‌ ಹೇಳಿಕೆ ಸರಿಯಲ್ಲ ಎಂದಾದರೆ ನಿಮ್ಮ ನಡೆಯವೂ ಸರಿಯಲ್ಲ. ಪ್ರತಿಭಟನೆಯ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜ ಹಿಡಿದುಕೊಂಡುವುದನ್ನು ತಡೆದರೆ ಅದಕ್ಕೆ ದಂಡ ವಿಧಿಸಲಾಗುವುದು. ಅದರ ಅರ್ಥ ನೀವು ಅಂಥ ಹೇಳಿಕೆ ನೀಡಬಹುದು ಎಂದಲ್ಲ” ಎಂದಿತು.

“ದಾಖಲೆಗಳನ್ನು ಸಲ್ಲಿಸಿ. ಏನು ಮನವಿ ನೀಡಲಾಗಿದೆ. ಯಾವ ಪ್ರತಿಭಟನೆಗೆ ಅವರು ಅನುಮತಿ ಕೋರಿದ್ದಾರೆ. ಮನವಿಯಲ್ಲಿ ರಾಷ್ಟ್ರಧ್ವಜ ಕೊಂಡೊಯ್ಯುತ್ತೇವೆ ಎಂದು ಬರೆದಿದ್ದು, ಅದನ್ನು ಕೊಂಡೊಯ್ಯಲು ತಡೆದಿದ್ದರೆ ಪರಿಶೀಲಿಸಲಾಗುವುದು. ಈ ರೀತಿ ಮಾಡಿರುವುದಕ್ಕೆ ನಿಮ್ಮನ್ನು ಬಿಡುವುದಿಲ್ಲ” ಎಂದ ನ್ಯಾಯಾಲಯವು, ವಿಚಾರಣೆಯನ್ನು ಆಗಸ್ಟ್‌ 20ಕ್ಕೆ ಮುಂದೂಡಿತು.

Kannada Bar & Bench
kannada.barandbench.com