ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೂರೈಸುವ ಪೌಷ್ಟಿಕಾಂಶಯುಕ್ತ ಆಹಾರದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿಯ ವರದಿಯನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದರ ಕುರಿತು ಎರಡು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಂಗೀತಾ ಗದುಗಿನ್ ಹಾಗೂ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
“ತಾಂತ್ರಿಕ ಸಮಿತಿಯ ವರದಿಯನ್ನು ಪರಿಗಣಿಸುವಾಗ 2021ರ ಮೇ 5 ಮತ್ತು 2020ರ ಮೇ 20ರ ಆಕ್ಷೇಪಾರ್ಹ ಆದೇಶ ಹಿಂಪಡೆದಿರುವುದನ್ನು ಪರಿಗಣಿಸಬಾರದು” ಎಂದು ಪೀಠವು ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “2021ರ ಮೇ 5ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಿರುವುದು ಮತ್ತು 2021ರ ಆಗಸ್ಟ್ 19ರ ತಾಂತ್ರಿಕ ಸಮಿತಿ ವರದಿಯ ಸ್ಥಿತಿಗತಿ ಹಾಗೂ 2020ರ ಡಿಸೆಂಬರ್ 14ರಂದು ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿರುವ ವಿಚಾರದಲ್ಲಿ ಪಾಲನೆಯಾಗಿರುವ ಅಂಶಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಬೇಕು ಎಂದು ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಆದೇಶಿಸಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿಯ ವರದಿ ಒಪ್ಪುವುದು ಅಥವಾ ತಿರಸ್ಕರಿಸುವ ಕುರಿತು ರಾಜ್ಯ ಸರ್ಕಾರವು ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದರು.
ಸಂಬಂಧಿತ ಮನವಿಯೊಂದರಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರು “ತಾಂತ್ರಿಕ ಸಮಿತಿಯ ವರದಿ ಒಪ್ಪುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಾಕಷ್ಟು ಸಮಯ ತೆಗೆದುಕೊಂಡಿದೆ. ಆಕ್ಷೇಪಾರ್ಹವಾದ ಹಿಂಪಡೆಯಲಾದ ಆದೇಶಗಳ ಪ್ರಭಾವಕ್ಕೆ ಒಳಗಾಗದೆ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು” ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ತಾಂತ್ರಿಕ ಸಮಿತಿ ವರದಿ ಒಪ್ಪುವುದಕ್ಕೆ ಸಂಬಂಧಿಸಿಂತೆ ನಿರ್ಧಾರ ಕೈಗೊಳ್ಳುವಂತೆ ಆದೇಶಿಸಿ, ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿದೆ.