ಪೋಶ ಕಾರು ಅಪಘಾತ: ಅಪ್ರಾಪ್ತ ಆರೋಪಿಯ ಬಿಡುಗಡೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಂಬಂಧಿಯಿಂದ ಅರ್ಜಿ

ತುರ್ತು ಪರಿಹಾರ ನೀಡಲು ನಿರಾಕರಿಸಿದ ನ್ಯಾಯಾಲಯ ಜೂನ್ 20ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.
ಪೋಶ ಕಾರು ಅಪಘಾತ: ಅಪ್ರಾಪ್ತ ಆರೋಪಿಯ ಬಿಡುಗಡೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಂಬಂಧಿಯಿಂದ ಅರ್ಜಿ

ಪುಣೆ ಪೋಶ ಕಾರು ಅಪಘಾತ ಪ್ರಕರಣದ ಅಪ್ರಾಪ್ತ ಆರೋಪಿಯನ್ನು ಬಾಲ ನ್ಯಾಯ ಮಂಡಳಿಯ (ಜೆಜೆಬಿ) ನಿಗಾ ಗೃಹದಲ್ಲಿ ಕಾನೂನುಬಾಹಿರವಾಗಿ ಮತ್ತು ನಿರಂಕುಶವಾಗಿ ಬಂಧಿಸಿಡಲಾಗಿದೆ ಎಂದು ದೂರಿ ಆರೋಪಿಯ ಚಿಕ್ಕಮ್ಮ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಅಪ್ರಾಪ್ತ ಅರೋಪಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ವಕೀಲ ಸ್ವಪ್ನಿಲ್ ಅಂಬೂರೆ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.

ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠದೆದುರು ಶುಕ್ರವಾರ ಪ್ರಕರಣದ ವಿಚಾರಣೆ ನಡೆಯಿತು.

ಜೆಜೆಬಿ ಪರ ವಾದ ಮಂಡಿಸಿದ ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾಂವ್ಕರ್ ಅವರು ಈ ಮನವಿಗೆ ವಿರೋಧ ವ್ಯಕ್ತಪಡಿಸಿದರು. ನ್ಯಾಯಾಲಯದ ಆದೇಶದಂತೆ ಅಪ್ರಾಪ್ತ ಆರೋಪಿಯನ್ನು ನಿಗಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಅರ್ಜಿದಾರೆ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬಾದ್ ಪೊಂಡಾ, ಅಪ್ರಾಪ್ತ ಆರೋಪಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಪ್ರಾರ್ಥಿಸಿದರು. ಅರ್ಜಿಗೆ ಕೆಲ ತಿದ್ದುಪಡಿ ಮಾಡಲು ಪೋಂಡಾ ಅವರಿಗೆ ವಿಭಾಗೀಯ ಪೀಠ ಅವಕಾಶ ನೀಡಿತಾದರೂ ಮನವಿ ಆಲಿಸದೆ ತುರ್ತು ಪರಿಹಾರ ನೀಡಲು ನಿರಾಕರಿಸಿತು. ಪ್ರಕರಣವನ್ನು ಜೂನ್ 20ಕ್ಕೆ ಮುಂದೂಡಿತು.

 ಅಪ್ರಾಪ್ತ ವಯಸ್ಕನ ಬಂಧನ ಮತ್ತು ಕಸ್ಟಡಿ ಅವಧಿ ವಿಸ್ತರಿಸಿ ಬಾಲಾಪರಾಧಿ ನ್ಯಾಯ ಮಂಡಳಿ ನೀಡಿದ ಆದೇಶಗಳನ್ನು ರದ್ದುಗೊಳಿಸಬೇಕು. ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯಡಿಯಲ್ಲಿ ಸೂಚಿಸಲಾದ ರೀತಿಯಲ್ಲಿ ಅಪ್ರಾಪ್ತ ವಯಸ್ಕನನ್ನು ರಕ್ಷಿಸುವ ಅಗತ್ಯವಿದ್ದು ಅವನು ಘೋರ ಅಪರಾಧಿಯಾಗಿ ಬದಲಾಗದಂತೆ ನೋಡಿಕೊಳ್ಳಬೇಕಿದೆ ಎಂದು ಅರ್ಜಿದಾರೆ ತಿಳಿಸಿದ್ದಾರೆ.

ಪುಣೆಯ ಪ್ರಮುಖ ಬಿಲ್ಡರ್‌ನ ಮಗನಾದ ಅಪ್ರಾಪ್ತ ಆರೋಪಿಯು, ಕಲ್ಯಾಣಿನಗರ ಪ್ರದೇಶದಲ್ಲಿ ತನ್ನ ಪೋಶ ಕಾರನ್ನು ಮೋಟಾರ್‌ಸೈಕಲ್‌ಗೆ ಗುದ್ದಿದ್ದರಿಂದ ಇಬ್ಬರ ಪ್ರಾಣಕ್ಕೆ ಎರವಾಗಿದ್ದ. ಅಪಘಾತಕ್ಕೂ ಮುನ್ನ ಆತ ಪಬ್‌ನಲ್ಲಿ ಮದ್ಯಪಾನ ಮಾಡಿದ್ದ ಅಂಶ ಬೆಳಕಿಗೆ ಬಂದಿತ್ತು.

Kannada Bar & Bench
kannada.barandbench.com