ಗೋಧ್ರೋತ್ತರ ಗಲಭೆ: 19 ಮಂದಿ ಕೊಲೆ ಆರೋಪಿಗಳನ್ನು ಖುಲಾಸೆಗೊಳಿಸಿದ ಗುಜರಾತ್‌ ನ್ಯಾಯಾಲಯ

ಸಂತ್ರಸ್ತರ ಮೃತ ದೇಹಗಳು ದೊರೆತಿಲ್ಲ ಎಂದು ಅಪರಾಧದ ಘಟಿಸಿರುವಿಕೆಯನ್ನು ನಿರೂಪಿಸುವ ಅಗತ್ಯ ತತ್ವದ ಆಧಾರದಲ್ಲಿ 19 ಮಂದಿಯನ್ನು ಸಾಕ್ಷ್ಯ ಕೊರತೆಯ ಕಾರಣ ನೀಡಿ ನ್ಯಾಯಾಲಯವು ಖುಲಾಸೆಗೊಳಿಸಿದೆ.
Post-Godhra Riots
Post-Godhra Riots

ಗುಜರಾತ್‌ ಹತ್ಯಾಕಾಂಡ ಮತ್ತು ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇಬ್ಬರು ಮಕ್ಕಳನ್ನು ಒಳಗೊಂಡು 17 ಮಂದಿ ಮುಸ್ಲಿಮರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ 19 ಮಂದಿ ಆರೋಪಿಗಳನ್ನು ಗುಜರಾತ್‌ನ ಪಂಚಮಹಲ್‌ನ ಸತ್ರ ನ್ಯಾಯಾಲಯವು ಈಚೆಗೆ ಖುಲಾಸೆಗೊಳಿಸಿದೆ.

ಘಟನೆಯ ಸ್ಥಳದಲ್ಲಿ ಸಂತ್ರಸ್ತರ ಮೃತ ದೇಹಗಳು ದೊರೆತಿಲ್ಲ ಎಂದು ಹೇಳಿರುವ ನ್ಯಾಯಾಲಯವು ಅಪರಾಧ ಘಟಿಸಿರುವಿಕೆ ನಿರೂಪಿಸುವ ತತ್ವದ (ಕಾರ್ಪಸ್‌ ಡೆಲಿಕ್ಟಿ) ಆಧಾರದಲ್ಲಿ 19 ಮಂದಿಯನ್ನು ಸಾಕ್ಷ್ಯ ಕೊರತೆಯ ಕಾರಣ ನೀಡಿ ಖುಲಾಸೆಗೊಳಿಸಿದೆ. ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಹರ್ಷ ತ್ರಿವೇದಿ ಅಪರಾಧ ಘಟಿಸಿರುವಿಕೆಯನ್ನು ನಿರೂಪಿಸಬೇಕಾದ್ದು ಕೊಲೆ ತನಿಖೆಯಲ್ಲಿ ಪ್ರಮುಖ ವಿಚಾರ ಎಂದು ಹೇಳಿದ್ದಾರೆ.

“ಕೊಲೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲು ಮೃತದೇಹ ಅಥವಾ ಮೃತದೇಹದ ಸಾಕ್ಷ್ಯವು ಪೊಲೀಸರಿಗೆ ಲಭ್ಯವಾಗಬೇಕು. ಯಾರೋ ಒಬ್ಬರು ನಾಪತ್ತೆಯಾದರೆ ಪೊಲೀಸರ ಬಳಿ ಮೃಹದೇಹವಿಲ್ಲದಿದ್ದರೆ ಅಥವಾ ಕನಿಷ್ಠ ಪಕ್ಷ ಮೃತದೇಹದ ಸಾಕ್ಷ್ಯ ಲಭ್ಯವಾಗದಿದ್ದರೆ ಪೊಲೀಸರು ಹೇಗೆ ತಾನೆ ಮುಂದುವರಿಯಲು ಅಥವಾ ಕೆಲಸ ಮಾಡಲು ಸಾಧ್ಯ. ಅಪರಾಧ ಘಟಿಸಿರುವಿಕೆ ನಿರೂಪಿಸುವುದು (ಕಾರ್ಪಸ್‌ ಡೆಲಿಕ್ಟಿ) ಸಾಧ್ಯವಾಗದಿದ್ದರೆ ಯಾರನ್ನೂ ಅಪರಾಧಿ ಎಂದು ಘೋಷಿಸಲಾಗದು ಎಂಬುದು ಸಾಮಾನ್ಯ ತತ್ವ. ಹಾಲಿ ಪ್ರಕರಣದಲ್ಲಿ ಸುಟ್ಟ ಮೂಳೆಯ ತುಂಡುಗಳಿಂದ (ನಾಪತ್ತೆಯಾದ ವ್ಯಕ್ತಿಗಳು ಎನ್ನಲಾದ ಆರೋಪ) ವಂಶವಾಹಿ ಚಿತ್ರಣದ ಫಲಿತಾಂಶ ಪಡೆಯಲಾಗದು ಎಂದ ಮೇಲೆ ಸ್ವಯಂಚಾಲಿತವಾಗಿ ಅಪರಾಧ ಘಟಿಸಿರುವಿಕೆ ನಿರೂಪಣಾ ತತ್ವವನ್ನು ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಹದಿನೇಳು ಮಂದಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡಲು ಮೃತದೇಹಗಳನ್ನು ಸುಟ್ಟಿರುವ ಆರೋಪದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಗುಜರಾತ್‌ನಲ್ಲಿ ಸಂಭವಿಸಿದ್ದ ಗೋಧ್ರೋತ್ತರ ಕೋಮು ಗಲಭೆಯ ಸಂದರ್ಭದಲ್ಲೇ 2002ರ ಫೆಬ್ರವರಿ 28ರಂದು ದೆಲೋಲ್‌ ಗ್ರಾಮದಲ್ಲಿ ಸಂತ್ರಸ್ತರನ್ನು ಕೊಲ್ಲಲಾಗಿತ್ತು. ಪಂಚಮಹಲ್‌ನ ಗೋಧ್ರಾ ಪಟ್ಟಣದ ಸಮೀಪ 2002ರ ಫೆಬ್ರವರಿ 27ರಂದು ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿದ್ದರಿಂದ ಗಲಭೆ ಆರಂಭವಾಗಿತ್ತು. ಘಟನೆಯಲ್ಲಿ 59 ಮಂದಿ ಸಾವನ್ನಪ್ಪಿದ್ದರು. ರೈಲಿನಲ್ಲಿದ್ದ ಹೆಚ್ಚಿನವರು ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರಾಗಿದ್ದರು.

Related Stories

No stories found.
Kannada Bar & Bench
kannada.barandbench.com