ಸುಪ್ರೀಂ ಕೋರ್ಟ್ ತೀರ್ಪನ್ನು ಟೀಕಿಸಿ ಪೋಸ್ಟರ್ ಹಾಕುವುದು ದ್ವೇಷ ಪ್ರಚೋದನೆ ಅಲ್ಲ: ಹೈಕೋರ್ಟ್

ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂಬ ಕಾರಣಕ್ಕೆ ಐಪಿಸಿ ಸೆಕ್ಷನ್ 153ಎ, 295ಎ ಅಡಿ ಅಪರಾಧ ಹೊರಿಸಲಾಗದು ಎಂದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್; 13 ಆರೋಪಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು.
Karnataka High Court
Karnataka High Court
Published on: 

ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ‘ನ್ಯಾಯ ನಿರಾಕರಣೆಯಾಗಿದೆ, ನ್ಯಾಯಕ್ಕಾಗಿ ಧ್ವನಿ ಎತ್ತಿ’ ಎಂದು ಪೋಸ್ಟರ್‌ಗಳನ್ನು ಹಾಕುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದಿಸುವ ಅಪರಾಧವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಮಂಗಳೂರಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪೋಸ್ಟರ್‌ಗಳನ್ನು ಅಂಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ 13 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್ ಅವರ ಏಕಸದಸ್ಯ ಪೀಠವು ಆರೋಪಿಗಳ ವಿರುದ್ಧದ ಎಲ್ಲಾ ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸಿದೆ.

Justice H P Sandesh
Justice H P Sandesh

ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದರಿಂದ ಮಾತ್ರ ದೇಶದ್ರೋಹದ ಕೃತ್ಯ ಎಸಗಿದಂತಾಗುವುದಿಲ್ಲ ಅಥವಾ ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡಿದಂತಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪೋಸ್ಟರ್‌ಗಳಲ್ಲಿನ ಬರಹಗಳು ನ್ಯಾಯಾಲಯದ ತೀರ್ಪಿನ ಬಗೆಗಿನ ಅಸಮ್ಮತಿಯನ್ನು ಮಾತ್ರ ವ್ಯಕ್ತಪಡಿಸುತ್ತವೆ. ಅವು ದ್ವೇಷವನ್ನು ಪ್ರಚೋದಿಸುವ ಅಥವಾ ಸಮಾಜದಲ್ಲಿ ಸೌಹಾರ್ದತೆಯನ್ನು ಕೆಡಿಸುವ ಉದ್ದೇಶ ಹೊಂದಿವೆ ಎಂದು ಹೇಳಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಕೆಲವು ವ್ಯಕ್ತಿಗಳು ಪೋಸ್ಟರ್‌ಗಳಲ್ಲಿನ ಬರಹಗಳಿಂದ ಕೋಪಗೊಳ್ಳಬಹುದು ಎಂಬ ಕಾರಣಕ್ಕೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ ಅಥವಾ 295ಎ ಅಡಿ ಅಪರಾಧವನ್ನು ಅನ್ವಯಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಪೋಸ್ಟರ್‌ಗಳಲ್ಲಿನ ಅಭಿವ್ಯಕ್ತಿಗಳು ಸಂವಿಧಾನದ 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ರಕ್ಷಣೆ ಪಡೆಯುತ್ತವೆ ಎಂದು ಪೀಠ ತಿಳಿಸಿದೆ.

ಸಾರ್ವಜನಿಕ ಹೇಳಿಕೆಗಳು ಅಥವಾ ಪೋಸ್ಟರ್‌ಗಳ ಪರಿಣಾಮವನ್ನು ಸಮಾಜದ ಸಾಮಾನ್ಯ, ವಿವೇಚನಾಶೀಲ ವ್ಯಕ್ತಿಯ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಬೇಕು. ಕೆಲವೇ ವ್ಯಕ್ತಿಗಳ ವೈಯಕ್ತಿಕ ಭಾವನೆಗಳ ಆಧಾರದ ಮೇಲೆ ಅವುಗಳ ಪರಿಣಾಮವನ್ನು ನಿರ್ಧರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ತೀರ್ಪಿನ ಕುರಿತು ಅಸಮ್ಮತಿ ವ್ಯಕ್ತಪಡಿಸುವುದು ಸಂವಿಧಾನದ 19ನೇ ವಿಧಿಯಡಿ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂದು ವಾದಿಸಿದ್ದರು.

ಪೋಸ್ಟರ್‌ಗಳಲ್ಲಿನ ಬರಹಗಳು ಯಾವುದೇ ಕಾನೂನುಬಾಹಿರ ಕೃತ್ಯಕ್ಕೆ ಪ್ರಚೋದನೆ ನೀಡುವುದಿಲ್ಲ. ಅವು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧದ ಅಸಮಾಧಾನವನ್ನು ಮಾತ್ರ ವ್ಯಕ್ತಪಡಿಸುತ್ತವೆ ಎಂದು ಅವರು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ, ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಪೋಸ್ಟರ್‌ಗಳನ್ನು ಅಂಟಿಸಿರುವುದು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪೊಂದನ್ನು ವಿರೋಧಿಸಿ ಮಂಗಳೂರಿನ ರಸ್ತೆಬದಿಯ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ತೀರ್ಪನ್ನು ‘ನ್ಯಾಯದ ನಿರಾಕರಣೆ’ ಎಂದು ಬಣ್ಣಿಸಿದ್ದ ಪೋಸ್ಟರ್‌ಗಳಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುವಂತೆ ಸಾರ್ವಜನಿಕರಿಗೆ ಕರೆ ನೀಡಲಾಗಿತ್ತು.

ಈ ಸಂಬಂಧ ಮಂಗಳೂರು ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು 13 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 153ಎ (ಗುಂಪುಗಳ ನಡುವೆ ದ್ವೇಷ ಅಥವಾ ವೈರತ್ವ ಪ್ರಚೋದನೆ), 295ಎ (ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಕೆರಳಿಸುವ ಕೃತ್ಯ), 120ಬಿ (ಅಪರಾಧಿಕ ಸಂಚು) ಹಾಗೂ ಕರ್ನಾಟಕ ತೆರೆದ ಜಾಗಗಳ ವಿರೂಪಗೊಳಿಸುವಿಕೆ ತಡೆ ಕಾಯಿದೆ ಅಡಿ ಎಫ್‌ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, 13 ಆರೋಪಿಗಳ ವಿರುದ್ಧದ ಎಲ್ಲಾ ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸಿ ಆದೇಶಿಸಿದೆ.

Attachment
PDF
Mahammed Hanif & others Vs State of Karnataka
Preview
Kannada Bar & Bench
kannada.barandbench.com