ಪತ್ನಿ ಸ್ನಾತಕೋತ್ತರ ಪದವಿ ಪಡೆದಿರುವ ಮಾತ್ರಕ್ಕೆ ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್‌

ಪತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು ₹29,000 ಆದಾಯ ಗಳಿಸುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟ್‌, ಪತ್ನಿ & ಮಗನಿಗೆ ತಲಾ ತಿಂಗಳಿಗೆ ₹5,000 ನಿರ್ವಹಣಾ ಭತ್ಯೆ ಪಾವತಿಸುವಂತೆ ಆದೇಶಿಸಿದೆ.
Divorce
Divorce
Published on: 

ಪತ್ನಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ ಎಂಬ ಕಾರಣಕ್ಕೆ ಮಾತ್ರ ಆಕೆಗೆ ಸಿಆರ್‌ಪಿಸಿ ಸೆಕ್ಷನ್‌ 125 ಅಡಿಯಲ್ಲಿ ಜೀವನಾಂಶ ನಿರಾಕರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ವಿಚ್ಛೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತವಾಗಿದ್ದರೂ, ಅದನ್ನು ಆಧಾರವಾಗಿ ಬಳಸಿ ಮಾಸಿಕ ಜೀವನಾಂಶ ನಿರಾಕರಿಸಲು ಸಾಧ್ಯವಿಲ್ಲಎಂದು ನ್ಯಾಯಮೂರ್ತಿ ಡಾ. ಚಿಲ್ಲಕುರ್‌ ಸುಮಲತಾ ಅವರ ಏಕಸದಸ್ಯ ಪೀಠ ಆದೇಶಿಸಿದೆ.

Justice Chillakur Sumalatha
Justice Chillakur Sumalatha

ವಾದ-ಪ್ರತಿವಾದ ಆಲಿಸಿದ ಪೀಠವು ‘ವಿಚ್ಚೇದನ ಪ್ರಕರಣದಲ್ಲಿ ಶಾಶ್ವತ ಜೀವನಾಂಶ ತಿರಸ್ಕೃತವಾಗಿದ್ದು, ಪತಿಯ ಆರ್ಥಿಕ ಸಾಮರ್ಥ್ಯ‌ವನ್ನು ಪತ್ನಿ ಸಾಬೀತುಪಡಿಸಲು ವಿಫಲವಾದ ಕಾರಣಕ್ಕೆ ಮಾತ್ರ. ಇದರಿಂದ ಸಿಆರ್‌ಪಿಸಿ ಸೆಕ್ಷನ್‌ 125 ರಡಿ ಜೀವನಾಂಶ ಪಡೆಯುವ ಹಕ್ಕು ಕಳೆದುಹೋಗುವುದಿಲ್ಲ” ಎಂದು ಹೇಳಿದೆ. 

ಪತಿಯು ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು ₹29,000 ಆದಾಯ ಗಳಿಸುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟ್‌, ಪತ್ನಿ ಮತ್ತು ಮಗನಿಗೆ ತಲಾ ತಿಂಗಳಿಗೆ ₹5,000 ನಿರ್ವಹಣಾ ಭತ್ಯೆ ಪಾವತಿಸುವಂತೆ ಆದೇಶಿಸಿದೆ.

ಪ್ರಕರಣದಲ್ಲಿ ಪತ್ನಿಯ ಪರಿಷ್ಕರಣಾ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಸ್ವಲ್ಪ ಮಾರ್ಪಾಟು ಮಾಡಿದೆ.

ಪತ್ನಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ ಎಂಬುದಷ್ಟೇ ಆಕೆಗೆ ನಿರ್ವಹಣಾ ಭತ್ಯೆ ನಿರಾಕರಿಸಲು ಸಾಕಷ್ಟು ಕಾರಣವಲ್ಲ. ಆಕೆ ಉದ್ಯೋಗದಲ್ಲಿದ್ದಾಳೆ ಅಥವಾ ಸ್ವತಂತ್ರವಾಗಿ ಆದಾಯ ಗಳಿಸುತ್ತಿದ್ದಾಳೆ ಎಂಬುದನ್ನು ಪತಿ ಕೂಡ ಹೇಳಿಲ್ಲ ಎಂದು ಹೈಕೋರ್ಟ್‌ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ: ಪತ್ನಿ ಹಾಗೂ ಅಪ್ರಾಪ್ತ ಮಗ ಸಿಆರ್‌ಪಿಸಿ ಸೆಕ್ಷನ್‌ 125 ರಡಿಯಲ್ಲಿ ಕ್ರಮವಾಗಿ ತಿಂಗಳಿಗೆ ₹20,000 ಮತ್ತು ₹10, 000 ನಿರ್ವಹಣಾ ಭತ್ಯೆ ಕೋರಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಮಗನಿಗೆ ತಿಂಗಳಿಗೆ ₹5 ಸಾವಿರ ಮಂಜೂರು ಮಾಡಿತ್ತು, ಆದರೆ ಪತ್ನಿಯ ಹಿಂದಿನ ₹10 ಲಕ್ಷ ಶಾಶ್ವತ ಜೀವನಾಂಶದ ಬೇಡಿಕೆ ತಿರಸ್ಕೃತವಾಗಿತ್ತು ಎಂಬ ಕಾರಣ ನೀಡಿ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು. ಜೊತೆಗೆ, ಪತ್ನಿ ಎಂ ಎ ಪದವಿ ಹೊಂದಿರುವುದರಿಂದ ಉದ್ಯೋಗ ಪಡೆದು ಜೀವನ ನಡೆಸಬಹುದು ಎಂದು ಕೌಟುಂಬಿಕ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯನ್ನು ಹೈಕೋರ್ಟ್‌ ಇದೀಗ ಭಾಗಶಃ ಮಾನ್ಯ ಮಾಡಿದೆ.

Kannada Bar & Bench
kannada.barandbench.com