

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ (ಎಐಸಿಟಿಇ) ಮಾನ್ಯತೆ ಪಡೆಯದೆ ಮುಂಬೈನ ಭಾರತೀಯ ವಿದ್ಯಾಭವನ ನೀಡಿರುವ ಸ್ನಾತಕೋತ್ತರ ಡಿಪ್ಲೊಮಾಕ್ಕೆ ಮಾನ್ಯತೆಯಿಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್, ಮುಂಬೈನ ಭಾರತೀಯ ವಿದ್ಯಾಭವನದದಿಂದ ಸ್ನಾತಕೋತ್ತರ ಪಡೆದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ (ಎಚ್ಎಎಲ್) ಮಾನವ ಸಂಪನ್ಮೂಲ ವಿಭಾಗದಲ್ಲಿ ಗ್ರೇಡ್ -2 ಹುದ್ದೆಯಲ್ಲಿದ್ದ ಅಧಿಕಾರಿಯೊಬ್ಬರಿಗೆ ಗ್ರೇಡ್-3 ಹುದ್ದೆಗೆ ಹಿಂಬಡ್ತಿ ನೀಡಿದ್ದ ಕ್ರಮವನ್ನು ಎತ್ತಿಹಿಡಿದಿದೆ [ಇಂದಿರಾ ಶಂಕರ್ ವರ್ಸಸ್ ಎಚ್‌ಎಎಲ್].
ಹಿಂಬಡ್ತಿ ನೀಡಿದ್ದ ಕ್ರಮ ಪ್ರಶ್ನಿಸಿ ಅರ್ಜಿದಾರೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಚ್ಎಎಲ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗಿಯ ಪೀಠ ಈ ಆದೇಶ ಮಾಡಿದೆ.
ಮೇಲ್ಮನವಿಯಲ್ಲಿ ಪ್ರತಿವಾದಿಯಾಗಿರುವ ಅರ್ಜಿದಾರರು , ಮುಂಬೈನ ರಾಜೇಂದ್ರ ಪ್ರಸಾದ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ಅಂಡ್ ಮ್ಯಾನೇಜ್‌ಮೆಂಟ್‌ನೊಂದಿಗೆ ಸಂಯೋಜಿತವಾಗಿರುವ ಭಾರತೀಯ ವಿದ್ಯಾಭವನದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಸದರಿ ಸಂಸ್ಥೆಯು ಯಾವುದೇ ವಿಶ್ವವಿದ್ಯಾಲಯದಿಂದ ಸಂಯೋಜಿತವಾಗಿಲ್ಲ. ಯುಜಿಸಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯಿಂದಲೂ ಮಾನ್ಯತೆ ಪಡೆದುಕೊಂಡಿಲ್ಲ ಎಂಬ ಅಂಶವು ಎಚ್ಎಎಲ್ ಜಾಗೃತ ವಿಭಾಗ ನಡೆಸಿದ ಪರಿಶೀಲನೆ ವೇಳೆ ಗೊತ್ತಾಗಿದೆ.
ತಾಂತ್ರಿಕ ಶಿಕ್ಷಣ ಕ್ಷೇತ್ರವು ಎಐಸಿಟಿಇ ಅಡಿಯಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನಿಡಿದೆ. ಅಲ್ಲದೇ, ಎಐಸಿಟಿಇ ಕಾಯಿದೆ ಜಾರಿಗೆ ಬಂದ ಬಳಿಕ ತಾಂತ್ರಿಕ ಶಿಕ್ಷಣದ ಮಾನದಂಡ ನಿಗದಿ ಪಡಿಸುವುದು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಕೈಗಾರಿಕೆಗಳಿಗೆ ಸಂಬಂಧಿಸಿದ ಮತ್ತು ಸಿಬ್ಬಂದಿ ನಿರ್ವಹಣೆ ವಿಭಾಗದಲ್ಲಿ ಅರ್ಜಿದಾರರಿಗೆ ನೀಡಿರುವ ಸ್ನಾತಕೋತ್ತರ ಡಿಪ್ಲೊಮಾವು ಮಾನ್ಯತೆ ಪಡೆದ ಅರ್ಹತೆ ಹೊಂದಿಲ್ಲ ಎಂದು ಪೀಠ ಹೇಳಿದೆ.
ಎಚ್ಎಎಲ್ ಪ್ರತ್ಯೇಕ ಮತ್ತು ಸ್ವತಂತ್ರ್ಯ ಸಂಸ್ಥೆಯಾಗಿದ್ದು, ಅದರ ಉದ್ಯೋಗಿಗಳ ನೇಮಕಾತಿ ಮತ್ತು ಬಡ್ತಿಗೆ ಅಗತ್ಯ ಮಾನದಂಡಗಳನ್ನು ನಿರ್ಧರಿಸುವ ಹಕ್ಕನ್ನು ಅದು ಹೊಂದಿದೆ. ನೇಮಕಾತಿ ಮತ್ತು ಬಡ್ತಿಗಳಿಗೆ ಶೈಕ್ಷಣಿಕ ಅರ್ಹತೆಗಳನ್ನು ಗುರುತಿಸುವ ಸರ್ಕಾರದ ಆದೇಶಗಳನ್ನು ಮಾತ್ರ ಅನುಸರಿಸುವುದಕ್ಕೆ ಸಾಧ್ಯವಿರುವುದಿಲ್ಲ ಎಂದು ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ. ಹೀಗಾಗಿ, ಎಚ್ಎಎಲ್ ತನ್ನ ನೀತಿಯಾಗಿ ಅಳವಡಿಸಿಕೊಳ್ಳದ ಹೊರತು ಅದರ ಅಭ್ಯರ್ಥಿಗಳ ನೇಮಕಾತಿ ಅಥಾವ ಬಡ್ತಿಗಳಿಗೆ ಅರ್ಹತೆ ನಿರ್ಧರಿಸಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಆದ್ದರಿಂದ, ಪ್ರತಿವಾದಿಯವರಿಗೆ 2008ರಿಂದ ಅನ್ವಯವಾಗುವಂತೆ ಹಿಂಬಡ್ತಿ ನೀಡಿರುವುದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಹೀಗಾಗಿ ಮೇಲ್ಮನವಿಯನ್ನು ಪುರಸ್ಕರಿಸುತ್ತಿದ್ದು, ಏಕಸದಸ್ಯ ಪೀಠ ಆದೇಶ ರದ್ದುಪಡಿಸುತ್ತಿರುವುದಾಗಿ ಪೀಠ ಹೇಳಿದೆ.