ಚುನಾವಣೆ ಮುಂದೂಡುವುದು ನ್ಯಾಯಾಲಯದ ಕೆಲಸವಲ್ಲ ಎಂದು ಅಭಿಪ್ರಾಯಪಟ್ಟ ಉತ್ತರಾಖಂಡ ಹೈಕೋರ್ಟ್, ಫೆಬ್ರವರಿ 14 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಮುಂದೂಡಲು ಗುರುವಾರ ನಿರಾಕರಿಸಿತು [ಸಚ್ದಾನಂದ ದಬ್ರಾಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎನ್ ಎಸ್ ಧನಿಕ್ ಅವರಿದ್ದ ವಿಭಾಗೀಯ ಪೀಠ ಭೌತಿಕ ಸಮಾವೇಶಗಳನ್ನು ನಿಷೇಧಿಸುವ ಕುರಿತು ಯಾವುದೇ ನಿರ್ದೇಶನಗಳನ್ನು ನೀಡಲೂ ನಿರಾಕರಿಸಿತು.
ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಈಗಾಗಲೇ ಜನವರಿ 15 ರವರೆಗೆ ಭೌತಿಕ ಸಮಾವೇಶಗಳನ್ನು ನಿಷೇಧೀಸಲಾಗಿದ್ದು ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಕೇಂದ್ರ ಚುನಾವಣಾ ಆಯೋಗ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ಆಯೋಗದ ಪರವಾಗಿ ಹಾಜರಿದ್ದ ವಕೀಲರಾದ ಶೋಭಿತ್ ಸಹಾರಿಯಾ ನ್ಯಾಯಾಲಯಕ್ಕೆ ತಿಳಿಸಿದ ನಂತರ ಪೀಠ ಈ ನಿರ್ಧಾರ ಕೈಗೊಂಡಿತು.
ಇದೇ ವೇಳೆ ನ್ಯಾಯಾಲಯ ಹಿರಿಯ ನಾಗರಿಕರಿಗೆ ಅವರ ಮನೆಗಳಿಗೇ ತೆರಳಿ ಬೂಸ್ಟರ್ ಲಸಿಕೆ ನೀಡುವುದನ್ನು ಪರಿಗಣಿಸುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ. ಫೆ. 15ಕ್ಕೆ ನಿಗದಿಯಾಗಿದೆ.