ಆರ್ಥಿಕ ಹಿಂದುಳಿದಿರುವಿಕೆ ಅಥವಾ ಬಡತನವು ಮಕ್ಕಳು ಶಿಕ್ಷಣ ನಿಲ್ಲಿಸಲು ಕಾರಣವಾಗಬಾರದು ಎಂಬ ಮಹತ್ವದ ಆದೇಶವನ್ನು ಗುರುವಾರ ಕರ್ನಾಟಕ ಹೈಕೋರ್ಟ್ ಹೊರಡಿಸಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಮಕ್ಕಳಿಗೆ ಆನ್‌ಲೈನ್ ತರಗತಿಯಲ್ಲಿ ಭಾಗಿಯಾಗಲು ಉಚಿತವಾಗಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರೆ ಡಿಜಿಟಲ್ ಸಂಪನ್ಮೂಲ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಹಂಚಾಟೆ ಸಂಜೀವ್‌ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನಡೆಸಿತು.
“ಶಿಕ್ಷಣ ಮುಂದುವರಿಸುವುದನ್ನು ನಿಲ್ಲಿಸುವುದಕ್ಕೆ ಆರ್ಥಿಕ ಹಿಂದುಳಿದಿರುವಿಕೆ ಅಥವಾ ಬಡತನ ಕಾರಣವಾಗಬಾರದು. ಶಾಲೆಗಳನ್ನು ಪುನಾರಂಭಿಸುವ ನಿರ್ಧಾರವನ್ನು ಲೆಕ್ಕಿಸದೆ ರಾಜ್ಯವು ಈ ಸಮಸ್ಯೆಯನ್ನು ಬಗೆಹರಿಸುವ ತುರ್ತು ಅವಶ್ಯಕತೆಯಿದೆ. ತಾಂತ್ರಿಕ ಕಂದರ ಮತ್ತು ಸೌಲಭ್ಯ ಪಡೆಯಲು ಆಗದ ಅಗತ್ಯ ಇರುವವರಿಗೆ ತಂತ್ರಜ್ಞಾನ ಸೌಲಭ್ಯ ಕಲ್ಪಿಸುವ ಸಂಬಂಧ ಹೊಂದಿರುವ ಕಾರ್ಯತಂತ್ರವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಾವು ನಿರ್ದೇಶಿಸುತ್ತಿದ್ದೇವೆ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಕೋವಿಡ್‌ನಿಂದಾಗಿ ಆನ್‌ಲೈನ್ ತರಗತಿಗೆ ಹಾಜರಾಗಲು ಸುಮಾರು ಶೇ. 30ರಷ್ಟು ವಿದ್ಯಾರ್ಥಿಗಳು ಮೊಬೈಲ್ ಅಥವಾ ಇತರೆ ತಾಂತ್ರಿಕ ಸಾಧನಗಳನ್ನು ಹೊಂದಿಲ್ಲ ಎಂದು ರಾಜ್ಯ ಸರ್ಕಾರವು ಪೀಠಕ್ಕೆ ವಿವರಿಸಿತು. ಶೇ. 75.50ರಷ್ಟು ವಿದ್ಯಾರ್ಥಿಗಳು ತಂತ್ರಜ್ಞಾನದ ಸೌಲಭ್ಯ ಹೊಂದಿದ್ದಾರೆ. ರಾಜ್ಯದಲ್ಲಿ ಸರಾಸರಿ ಶೇ. 24.5ರಷ್ಟು ಮಕ್ಕಳು ತಂತ್ರಜ್ಞಾನದ ಸೌಲಭ್ಯ ಹೊಂದಿಲ್ಲ. ಬೀದರ್, ಕಲಬುರ್ಗಿ, ಕೊಪ್ಪಳ, ತುಮಕೂರು, ಚಿತ್ರದುರ್ಗದಲ್ಲಿ ಶೇ. 35ರಷ್ಟು ವಿದಾರ್ಥಿಗಳು ತಂತ್ರಜ್ಞಾನದ ಸೌಲಭ್ಯ ಹೊಂದಿಲ್ಲ ಎಂಬುದನ್ನು ನ್ಯಾಯಾಲಯವು ವಿಸ್ತೃತವಾದ ವರದಿಯಿಂದ ಅರಿತುಕೊಂಡಿತು.
ಬೆಂಗಳೂರು ಗ್ರಾಮೀಣ, ದಕ್ಷಿಣ, ಉತ್ತರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶೇ. 15ರಷ್ಟು ವಿದ್ಯಾರ್ಥಿಗಳು ಮಾತ್ರ ತಂತ್ರಜ್ಞಾನದ ಸೌಲಭ್ಯ ಹೊಂದಿಲ್ಲ. ಇತರೆ ಜಿಲ್ಲೆಗಳಲ್ಲಿ ತಂತ್ರಜ್ಞಾನ ಸೌಲಭ್ಯ ಹೊಂದಿಲ್ಲದ ವಿದ್ಯಾರ್ಥಿಗಳ ಸರಾಸರಿಯು ಶೇ. 22 – 35ರಷ್ಟಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
“ಶೇ. 30ರಷ್ಟು ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯಿಂದ ಹೊರಗಿದ್ದಾರೆ. ಶೇ. 39.43ರಷ್ಟು ವಿದ್ಯಾರ್ಥಿಗಳು ಬೀದರ್‌ನಲ್ಲಿ, ಶೇ. 40ರಷ್ಟು ವಿದ್ಯಾರ್ಥಿಗಳು ಚಾಮರಾಜನಗರದಲ್ಲಿ ತಂತ್ರಜ್ಞಾನದ ಸೌಲಭ್ಯ ಹೊಂದಿಲ್ಲ. ಈ ಸರಾಸರಿ ಅತಿ ಹೆಚ್ಚಾಗಿದ್ದು, ಅವರೆಲ್ಲರೂ ವರ್ಚುವಲ್ ಶಾಲೆಯಿಂದ ಹೊರಗಿದ್ದಾರೆ. ಇವೆಲ್ಲವೂ ಸಾಂಪ್ರದಾಯಿಕವಾಗಿ ಹಿಂದುಳಿದ ಜಿಲ್ಲೆಗಳಾಗಿವೆ. ಶಿಕ್ಷಣ ವ್ಯವಸ್ಥೆಯಲ್ಲೂ ಹಿಂದುಳಿದಿರುವಿಕೆ ಕಾಣಿಸುತ್ತಿದೆ” ಎಂದು ಪೀಠ ಹೇಳಿದೆ.
ಡಿಜಿಟಲ್ ಕಂದರ ನಿವಾರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದಾಗ ವಿದ್ಯಾರ್ಥಿಗಳಿಗೆ ವರ್ಕ್‌ಶೀಟ್‌ಗಳು ಮತ್ತು ದೂರದರ್ಶನದ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಮೆಚ್ಚುಗೆ ಸೂಚಿಸಿರುವ ಪೀಠವು ಶಿಕ್ಷಣ ನೀಡಲು ಇದು ಸಾಲದು ಎಂದಿದೆ.
ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ತಾಂತ್ರಿಕ ಸಾಧನಗಳನ್ನು ಪೂರೈಸಲು ಅನುದಾನ ಇಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ಒಪ್ಪದಂತೆ ಅರ್ಜಿದಾರರ ಪರ ಹಿರಿಯ ವಕೀಲ ಹರೀಶ್ ನರಸಪ್ಪ ಮನವಿ ಮಾಡಿದರು.
ಬಿಕ್ಕಟ್ಟಿನ ಸಂದರ್ಭದ ಹೊರತಾಗಿಯೂ ಮೊಬೈಲ್ ಫೋನ್‌ಗಳು ಮತ್ತು ತಾಂತ್ರಿಕ ಸಾಧನಗಳನ್ನು ಪೂರೈಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ನಾವು ಶ್ರೀಮಂತ ರಾಜ್ಯವಾಗಿದ್ದು, ಸರ್ಕಾರವು ಕಡಿಮೆ ಬೆಲೆಗೆ ಟ್ಯಾಬ್ಲೆಟ್ ಮುಂತಾದ ಸಾಧನಗಳನ್ನು ಕೊಳ್ಳಬಹುದು. ಇದರಿಂದ ಮಕ್ಕಳ ಶಿಕ್ಷಣ ಅಬಾಧಿತವಾಗಿರಲಿದೆ ಎಂದು ನ್ಯಾಯಾಲಯ ಹೇಳಿತು. ಮುಂದುವರೆದು, ಶಿಕ್ಷಣದ ಹಕ್ಕಿನ ಕುರಿತು ನ್ಯಾಯಾಲಯ ಕುರುಡಾಗಬಾರದು ಎಂದಿತು.
ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಲಾಗಿದೆ.