ಜೀವನ ಪರ್ಯಂತ ಶಿಕ್ಷೆ ಪ್ರಶ್ನಿಸಿದ ಪ್ರಜ್ವಲ್‌: ಎಸ್‌ಪಿಪಿ ನೇಮಿಸಿರುವ ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿದಂತೆ ಮೇಲ್ಮನವಿಯಲ್ಲೂ ವಾದ ಮಂಡಿಸಲು ಎಸ್‌ಪಿಪಿ ನೇಮಕ ಮಾಡಲಾಗಿದೆಯೇ ಎಂಬ ಬಗ್ಗೆ ತಿಳಿಸುವಂತೆ ಸರ್ಕಾರದ ವಕೀಲರಿಗೆ ಸೂಚಿಸಿದ ಹೈಕೋರ್ಟ್‌.
Prajwal Revanna & Karnataka HC
Prajwal Revanna & Karnataka HC
Published on

ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಮೇಲ್ಮನವಿಯಲ್ಲಿ ಸರ್ಕಾರದ ಪರ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿಲಾಗಿದೆಯೇ ಎಂಬುದನ್ನು ತಿಳಿಸುವಂತೆ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Justices K S Mudagal And Venkatesh Naik T
Justices K S Mudagal And Venkatesh Naik T

ಪ್ರಕರಣಕ್ಕೆ ಸಂಬಂಧಿಸಿದ ಸಮಗ್ರ ಸಾರಾಂಶವನ್ನು ಸಲ್ಲಿಸುವಂತೆ ಪ್ರಜ್ವಲ್ ಪರ ವಕೀಲರಿಗೆ ಸೂಚಿಸಿದ ಪೀಠವು ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು (ಎಸ್‌ಪಿಪಿ) ನೇಮಕ ಮಾಡಿದಂತೆ ಮೇಲ್ಮನವಿಯಲ್ಲೂ ವಾದ ಮಂಡಿಸಲು ಎಸ್‌ಪಿಪಿ ನೇಮಕ ಮಾಡಲಾಗಿದೆಯೇ ಎಂಬ ಬಗ್ಗೆ ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.

ಪ್ರಕರಣದ ಸಂತ್ರಸ್ತೆ ನುಡಿದಿರುವ ಸಾಕ್ಷಿ ಮತ್ತು ಆಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ವ್ಯತ್ಯಾಸವಿದೆ. ಘಟನೆಯ ಬಗ್ಗೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪೊಲೀಸರು ಗನ್ನಿಗಢದ ಫಾರ್ಮ್‌ ಹೌಸ್‌ಗೆ ಬಂದಿದ್ದರು. ಅವರನ್ನು ನೋಡಿ ಸಂತ್ರಸ್ತೆ ಭೀತಿಗೊಂಡು ಅಲ್ಲಿಂದ ಪರಾರಿಯಾಗಿದ್ದಾಗಿ ತಿಳಿಸಿದ್ದಾರೆ. ಆನಂತರ, ಪೊಲೀಸರು ಆಕೆಯನ್ನು ಎಸ್‌ಐಟಿಯ ಬೆಂಗಳೂರು ಕಚೇರಿಗೆ ಕರೆದೊಯ್ದು, ದೂರು ದಾಖಲಿಸಲು ಮನವಿ ಮಾಡಿದ್ದರು ಎಂದು ಹೇಳಲಾಗಿದೆ. ಇದರ ಪ್ರಕಾರ ನೋಡುವುದಾದರೆ ಪೊಲೀಸರು ಸಂತ್ರಸ್ತೆಯನ್ನು ಹಿಂಬಾಲಿಸಿ, ಆಕೆಯಿಂದ ಬಲವಂತದಿಂದ ದೂರು ಪಡೆದಿದ್ದಾರೆ ಎಂಬುದನ್ನು ತಿಳಿಯುತ್ತದೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ.

ಆರೋಪಿತ ಘಟನೆಯು 2021ರ ಜನವರಿ 1ರಿಂದ 2022ರ ಜನವರಿ 31ರವರೆಗೆ ನಡೆದಿದ್ದು, 2024ರ ಮೇ 10ರಂದು ಸಂತ್ರಸ್ತೆ ಪೊಲೀಸರನ್ನು ಬಸವನಗುಡಿಯಲ್ಲಿ ಅತ್ಯಾಚಾರ ಎಸಗಿದ್ದ ಸ್ಥಳಕ್ಕೆ ಕರೆದೊಯ್ದಿದ್ದರು. ಇಲ್ಲಿ ಕೃತ್ಯ ನಡೆದ ಹಾಸಿಗೆ ಮತ್ತು ಮಂಚ ತೋರಿಸಿದ್ದು, ಪ್ರಾಸಿಕ್ಯೂಷನ್‌ನ 6ನೇ ಸಾಕ್ಷಿಯಾದ ಲಿಂಗನಮೂರ್ತಿ ಅವರು ಹಾಸಿಗೆಯಲ್ಲಿ ಕೆಲವು ಕಲೆಗಳು ಪತ್ತೆಯಾಗಿದ್ದವು ಎಂದು ತಿಳಿಸಿದ್ದಾರೆ. ಮೂರು ವರ್ಷಗಳಾದರೂ ಹಾಸಿಗೆಯ ಮೇಲಿನ ಬಟ್ಟೆಯನ್ನು ತೊಳೆಯದಿರಲು ಹೇಗೆ ಸಾಧ್ಯ ಎಂಬ ಬಗ್ಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಯಾವುದೇ ಪ್ರಶ್ನೆ ಉದ್ಭವಿಸಿಲ್ಲ ಎಂದು ವಿಚಾರಣಾ‌ಧೀನ ನ್ಯಾಯಾಲಯದ ತೀರ್ಪಿನ ಬಗ್ಗೆ ಆಕ್ಷೇಪಿಸಲಾಗಿದೆ.

ಗನ್ನಿಗಢದ ಫಾರ್ಮ್‌ ಹೌಸ್‌ನಲ್ಲಿ ಕಾರ್ಮಿಕರು ಉಳಿದುಕೊಳ್ಳಲು ನಿರ್ಮಿಸಲಾಗಿದ್ದ ಮನೆಯಲ್ಲಿ 2024ರ ಮೇ 28ರಂದು ಕೆಲ ಉಡುಪು ಮತ್ತು ತಲೆಗೂದಲನ್ನು ತನಿಖಾಧಿಕಾರಿ ಪತ್ತೆ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ, ಸಂತ್ರಸ್ತೆಯು ತನಿಖಾಧಿಕಾರಿಯನ್ನು ಅಲ್ಲಿಗೆ ಕರೆದೊಯ್ಯದಿದ್ದರೂ ಅವರಿಗೆ ಕನಸು ಬಿದ್ದಿದ್ದಾರೂ ಹೇಗೆ? ಸಂತ್ರಸ್ತೆಯ ಗೈರಿನಲ್ಲಿ ತನಿಖಾಧಿಕಾರಿಯು ಉಡುಪು ಮತ್ತು ತಲೆಗೂದಲನ್ನು ಜಪ್ತಿ ಮಾಡಿರುವುದು ಗಂಭೀರ ಲೋಪವಾಗಿದ್ದು, ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎನ್ನುವುದು ಪ್ರಜ್ವಲ್ ವಾದವಾಗಿದೆ.

ಉಡುಪಿನಲ್ಲಿ ವೀರ್ಯದ ಕಲೆ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸಂತ್ರಸ್ತೆ 2022ರಲ್ಲಿ ಕೆಲಸ ತೊರೆದಿದ್ದು, ಎಲ್ಲ ಕೊಠಡಿಗಳನ್ನು ಲಾಕ್‌ ಮಾಡಲಾಗಿತ್ತು ಎಂದು ಪ್ರಾಸಿಕ್ಯೂಷನ್‌ 8ನೇ ಸಾಕ್ಷಿ ಹೇಳಿದ್ದಾರೆ. ಎರಡನೇ ಕೊಠಡಿಯು ಬ್ಯಾಟರಿ, ಖಾಲಿ ಬಾಕ್ಸ್‌ಗಳು, ಬಣ್ಣದ ಡಬ್ಬಿಗಳು, ಕಾರ್ಪೆಟ್‌ ಇಡುವ ಸ್ಥಳವಾಗಿ ಭಾಸವಾಗುತ್ತಿತ್ತು ಎಂದು ಹೇಳಲಾಗಿದೆ. ಮೂರು ವರ್ಷಗಳಿಂದ ಬೀಗಬಿದ್ದಿದ್ದ ಈ ಕೊಠಡಿಯಲ್ಲಿ ವೀರ್ಯದ ಕಲೆ ಮತ್ತು ತಲೆಗೂದಲು ಪತ್ತೆಯಾಗುವುದಾದರೂ ಹೇಗೆ ಎಂದು ಪ್ರಜ್ವಲ್ ತಮ್ಮ ಮೇಲ್ಮನವಿಯಲ್ಲಿ ಆಕ್ಷೇಪವೆತ್ತಿದ್ದಾರೆ.

ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಕಳೆದ ಆಗಸ್ಟ್ 2ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದರು.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376(2)(ಕೆ)-ಪ್ರಬಲ ಸ್ಥಾನದಲ್ಲಿದ್ದುಕೊಂಡು ಮಹಿಳೆ ಮೇಲೆ ಅತ್ಯಾಚಾರ) ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ಹಾಗೂ ₹5 ಲಕ್ಷ ದಂಡ, 376(2)(ಎನ್)-(ಮಹಿಳೆಯ ಮೇಲೆ ಪದೇಪದೆ ಅತ್ಯಾಚಾರ) ಅಪರಾಧಕ್ಕೆ ಜೀವನ ಪರ್ಯಂತ ಸೆರೆವಾಸ ಹಾಗೂ ₹5 ಲಕ್ಷ ದಂಡದ ಗರಿಷ್ಠ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು.

Also Read
ಅತ್ಯಾಚಾರ ಪ್ರಕರಣ: ಜೀವನ ಪರ್ಯಂತ ಜೈಲು ಶಿಕ್ಷೆ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ ಕದತಟ್ಟಿದ ಪ್ರಜ್ವಲ್‌ ರೇವಣ್ಣ

ಇದಲ್ಲದೆ, ಸೆಕ್ಷನ್ 354 (ಎ)-(ಲೈಂಗಿಕ ದೌರ್ಜನ್ಯ) ಅಡಿಯ ಅಪರಾಧಕ್ಕೆ 3 ವರ್ಷ ಜೈಲು, ₹25 ಸಾವಿರ ದಂಡ; ಸೆಕ್ಷನ್ 354 (ಬಿ)-(ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಅಥವಾ ಬಲಪ್ರಯೋಗ) ಅಡಿಯ ಅಪರಾಧಕ್ಕೆ 7 ವರ್ಷ ಕಾರಾಗೃಹ ಶಿಕ್ಷೆ, ₹50 ಸಾವಿರ ದಂಡ; ಸೆಕ್ಷನ್ 354 (ಸಿ)-(ಮಹಿಳೆಯ ಖಾಸಗಿ ದೃಶ್ಯಗಳನ್ನು ನೋಡುವುದು ಅಥವಾ ಸೆರೆಹಿಡಿಯುವುದು) ಅಪರಾಧಕ್ಕೆ 3 ವರ್ಷ ಜೈಲು, ₹25 ಸಾವಿರ ದಂಡ; ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ, ₹10 ಸಾವಿರ ದಂಡ; ಸೆಕ್ಷನ್ 201 (ಅಪರಾಧದ ಸಾಕ್ಷ್ಯ ನಾಶ) ಅಡಿಯ ಅಪರಾಧಕ್ಕೆ 3 ವರ್ಷ ಸೆರೆವಾಸ, ₹25 ಸಾವಿರ ದಂಡ; ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆ ಸೆಕ್ಷನ್ 66(ಇ)-(ವ್ಯಕ್ತಿಯ ಖಾಸಗಿತನ ಉಲ್ಲಂಘಿಸಿ ಚಿತ್ರ ಸೆರೆ ಹಿಡಿಯುವುದು ಹಾಗೂ ಹಂಚುವುದು) ಅಡಿಯ ಅಪರಾಧಕ್ಕೆ 3 ವರ್ಷ ಜೈಲು, ₹25 ಸಾವಿರ ದಂಡ ವಿಧಿಸಿ ಆದೇಶಿಸಿತ್ತು.

ಒಟ್ಟು ದಂಡದ ಮೊತ್ತ ₹11.60 ಲಕ್ಷದಲ್ಲಿ ₹11.25 ಲಕ್ಷವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದ ನ್ಯಾಯಾಲಯ, ಎಲ್ಲ ಶಿಕ್ಷೆಗಳೂ ಏಕಕಾಲಕ್ಕೆ ಜಾರಿಯಾಗಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

Kannada Bar & Bench
kannada.barandbench.com