ಪ್ರಜ್ವಲ್‌ ರೇವಣ್ಣ ಅನರ್ಹತೆ ಪ್ರಕರಣ: ಶಿಕ್ಷೆಗೆ ತಡೆ ಕೋರಿರುವ ಅರ್ಜಿ ಕುರಿತ ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವವರೆಗೆ ತಡೆ ನೀಡಲು ಅವಕಾಶವಿದೆ. ಮೇಲ್ಮನವಿ ಸಲ್ಲಿಕೆಗೆ 30 ದಿನ ಕಾಲಾವಕಾಶ ಇದೆ. ಅಲ್ಲಿಯವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡಲು ಕಾಯಿದೆಯಲ್ಲಿಯೇ ಅವಕಾಶ ಇದೆ ಎಂದು ಮೌಖಿಕವಾಗಿ ತಿಳಿಸಿದ ನ್ಯಾಯಾಲಯ.
Karnataka HC and Prajwal Revanna
Karnataka HC and Prajwal Revanna
Published on

ತಮ್ಮ ಲೋಕಸಭಾ ಸದಸ್ಯತ್ವವನ್ನು ಅಸಿಂಧು ಮಾಡಿ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ತಮ್ಮನ್ನು ಅನರ್ಹಗೊಳಿಸಿರುವ ಆದೇಶಕ್ಕೆ ತಡೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶ ಕಾಯ್ದಿರಿಸಿದೆ.

ಪ್ರಜ್ವಲ್‌ ರೇವಣ್ಣ ಅವರ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ವಾದ ಆಲಿಸಿದ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಸೋಮವಾರ ಅಥವಾ ಮಂಗಳವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.‌

ಪ್ರಜ್ವಲ್ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು ಅಸಿಂಧು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.

ಅರ್ಜಿದಾರ ದೇವರಾಜೇಗೌಡ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು, ಅಸಿಂಧು ಆದೇಶಕ್ಕೆ ತಡೆ ನೀಡಬಾರದು. ತಡೆ ನೀಡಲು ಈ ನ್ಯಾಯಾಲಯಕ್ಕೆ ಅವಕಾಶವಿಲ್ಲ. ಆದೇಶ ಹೊರಡಿಸಿದ ದಿನವೇ ತಡೆಗೆ ಕೋರಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಅರ್ಜಿ‌ ಸಲ್ಲಿಸಲು ವಿಳಂಬ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

Also Read
ಪ್ರಜ್ವಲ್‌ ಅನರ್ಹತೆ: ಆದೇಶಕ್ಕೆ ತಡೆ ನೀಡಬಾರದು ಎಂದ ಪ್ರತಿವಾದಿಗಳು; ಆಕ್ಷೇಪಣೆ ಸಲ್ಲಿಕೆಗೆ ಹೈಕೋರ್ಟ್‌ ಸೂಚನೆ

ಇದಕ್ಕೆ ಪೀಠವು ಅಸಿಂಧು ಆದೇಶ ಮಾಡಿದ ಮೇಲೆ ಪ್ರಜ್ವಲ್‌ ರೇವಣ್ಣ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ತಡೆ ನೀಡಲು ಅವಕಾಶವಿದೆ. ಮೇಲ್ಮನವಿ ಸಲ್ಲಿಕೆಗೆ 30 ದಿನಗಳ‌ ಕಾಲಾವಕಾಶ ಇದೆ. ಅಲ್ಲಿಯವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡಲು ಪ್ರಜಾಪ್ರತಿನಿಧಿ ಕಾಯಿದೆಯಲ್ಲಿಯೇ ಅವಕಾಶ ಇದೆ ಎಂದು ಮೌಖಿಕವಾಗಿ ತಿಳಿಸಿದರು.

ಮತ್ತೊಬ್ಬ ಅರ್ಜಿದಾರ ಎ ಮಂಜು ಪರ ವಕೀಲರು, ಪ್ರಜ್ವಲ್‌ ಮಧ್ಯಂತರ ಅರ್ಜಿಗೆ ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದರು.

Kannada Bar & Bench
kannada.barandbench.com