ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರ ಅಕ್ರಮ ಆಸ್ತಿ ಗಳಿಸಿದ್ದು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾದ ಅರ್ಜಿಯ ವಿಚಾರಣೆ ನಡೆಸುವಂತೆ ರಾಜ್ಯ ಹೈಕೋರ್ಟ್‌ಗೆ ಸೂಚನೆ ನೀಡಿ ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದೆ.
ಆಕ್ಷೇಪಾರ್ಹವಾದ ಆದೇಶವನ್ನು ಬದಿಗೆ ಸರಿಸಲಾಗಿದ್ದು ಇದೇ ರೀತಿಯ ಇತರ ಮನವಿಗಳ ಜೊತೆಗೆ ವಿಚಾರಣೆ ನಡೆಸಲು ಪ್ರಕರಣವನ್ನು ಮರಳಿಸಲಾಗಿದೆ ಎಂದು ಮೇಲ್ಮನವಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.
15 ಫೆಬ್ರುವರಿ 2022ರಂದು ಪ್ರಕಟಿಸಲಾಗಿರುವ ಈ ಆದೇಶದಲ್ಲಿ ಚುನಾವಣಾ ಕಾನೂನು ತನ್ನ ಸ್ವರೂಪದಲ್ಲಿ ತಾಂತ್ರಿಕವಾಗಿರುವುದರಿಂದ ದೋಷಗಳನ್ನು ಪರಿಗಣಿಸುವಾಗ ವಿಸ್ತಾರ ನೋಟವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೂಡ ಪೀಠವು ಸ್ಪಷ್ಟಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿಯನ್ನು ಸೂಕ್ತ ವಿಧಾನದಲ್ಲಿ ಸಲ್ಲಿಸಿಲ್ಲ. ಇದುತಾಂತ್ರಿಕ ದೋಷಗಳಿಂದ ಕೂಡಿದೆ ಎಂದು ತಿಳಿಸಿ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ವಕೀಲ ಜಿ ದೇವರಾಜೇಗೌಡ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರಿಂ ಕೋರ್ಟ್ ತನ್ನ ಆದೇಶದಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಆಯ್ಕೆ ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಎ ಮಂಜು ಸಲ್ಲಿಸಿದ್ದ ಮೇಲ್ಮನವಿಯನ್ನೂ ಸಹ ಪ್ರಸ್ತಾಪಿಸಿದೆ. ಎ ಮಂಜು ಅವರ ಮನವಿಯನ್ನು ಸಹ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಆದೇಶವನ್ನು ಕಳೆದ ಡಿಸೆಂಬರ್ 13ರಂದು ಅಸಿಂಧುಗೊಳಿಸಿತ್ತು. ಅಲ್ಲದೆ ಸೂಕ್ತ ಕ್ರಮದಲ್ಲಿ ಹೈಕೋರ್ಟ್‌ಗೆ ಮರಳಿ ಅಫಿಡವಿಟ್ ಸಲ್ಲಿಸುವಂತೆ ಎ ಮಂಜುಗೆ ಸೂಚಿಸಿ ಅದನ್ನು ವಿಚಾರಣೆಗೆ ಪರಿಗಣಿಸಲು ಹೈಕೋರ್ಟ್‌ಗೆ ಆದೇಶಿಸಿತ್ತು.
ದೇವರಾಜೇಗೌಡರ ಮನವಿ ಏನು?
ಪ್ರಜ್ವಲ್ ರೇವಣ್ಣ ಅಕ್ರಮ ಆಸ್ತಿ ಗಳಿಸಿದ್ದು ಈ ಬಗ್ಗೆ ವಿಚಾರಣೆ ನಡೆಸದೇ ತಾಂತ್ರಿಕ ಕಾರಣ ನೀಡಿ ಹೈಕೋರ್ಟ್ ಅರ್ಜಿ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕು.
ಪ್ರಜ್ವಲ್ ರೇವಣ್ಣ ತಮ್ಮ 15ನೇ ವಯಸ್ಸಿಗೆ 23 ಕೋಟಿ ರೂ. ಆಸ್ತಿ ಮಾಡಿದ್ದಾರೆ. ಆದರೆ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಮಾಹಿತಿಯಲ್ಲಿ ಈ ಅಂಶಗಳಿಲ್ಲ. ಚುನಾವಣಾ ಆಯೋಗಕ್ಕೂ ಆಸ್ತಿಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ.
ಬೇನಾಮಿ ಆಸ್ತಿ ಮತ್ತು ಗೋಮಾಳ ಕಬಳಿಕೆ ಮಾಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆಯಬೇಕು. ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ದೇವರಾಜೇಗೌಡರ ಪರವಾಗಿ ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ಅವರ ನೇತೃತ್ವದಲ್ಲಿ ವಾದ ಮಂಡನೆಯಾಗಿತ್ತು. ಪ್ರಜ್ವಲ್ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ವಾದ ಮಂಡಿಸಿದ್ದರು.
ಆದೇಶದ ಪ್ರತಿ ಇಲ್ಲಿ ಓದಿ: