
ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆ ವಿಳಂಬವಾಗಲು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ನೇರ ಕಾರಣರಾಗಿದ್ದಾರೆ. ಪ್ರಜ್ವಲ್ ಅವರು ಪ್ರಕರಣವನ್ನು ವಿಚಾರಣೆಗೆ ಅಣಿಗೊಳಿಸಲು ಮ್ಯಾಜಿಸ್ಟ್ರೇಟ್‌ಗೆ ಅವಕಾಶವನ್ನೇ ನೀಡಿಲ್ಲ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಬಲವಾಗಿ ವಾದಿಸಿದರು.
ಜಾಮೀನು ಕೋರಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿರುವ ಪ್ರಜ್ವಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಉಳಿದ ಎರಡು ಪ್ರಕರಣಗಳಲ್ಲಿ ನಡೆದಿರುವಂತೆ ವಿಚಾರಣೆಯು ಇದರಲ್ಲಿ ನಡೆಯದಿರುವುದಕ್ಕೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ ವಿರುದ್ಧದ ವಿಚಾರಣೆಗೆ ತಡೆ ನೀಡಿರುವುದು ಕಾರಣವಾಗಿದೆ” ಎಂದರು.
ಇದಕ್ಕೆ ಪ್ರಾಸಿಕ್ಯೂಷನ್ ಪ್ರತಿನಿಧಿಸಿದ್ದ ರವಿವರ್ಮ ಕುಮಾರ್ ಅವರು “ಪ್ರಜ್ವಲ್ ನಡತೆಯಿಂದಾಗಿ ಪ್ರಕರಣದ ವಿಚಾರಣೆ ಮಂದಗತಿಯಲ್ಲಿ ಸಾಗುತ್ತಿದೆ” ಎಂದರು.
“ಮೊದಲಿಗೆ ವಿಚಾರಣಾಧೀನ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಬೇಕು. ಆದರೆ, ಪ್ರಜ್ವಲ್ ಹಾಗೆ ಮಾಡದೇ ನೇರವಾಗಿ ಹೈಕೋರ್ಟ್‌ಗೆ ಬಂದಿದ್ದಾರೆ. ಇದಕ್ಕೆ ಯಾವುದೇ ತೆರನಾದ ವಿಶೇಷ ಕಾರಣವನ್ನೂ ನೀಡಿಲ್ಲ. ಹೈಕೋರ್ಟ್‌ನ ಸ್ಥಾಪಿತ ತೀರ್ಪಿನ ಪ್ರಕಾರ ಮೊದಲಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಬೇಕು. ಸದ್ಯ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದಿರುವುದರಿಂದ ಜಾಮೀನು ನೀಡಬಾರದು” ಎಂದು ಕೋರಿದರು.
“ಪ್ರಜ್ವಲ್ ನಡತೆಯನ್ನು ಪರಿಗಣಿಸಿ ಅರ್ಜಿ ಊರ್ಜಿತವಾಗುವುದಿಲ್ಲ ಎಂದು ಆದೇಶಿಸಬೇಕು. ತನಿಖೆ, ವಿಚಾರಣೆಯ ವಿಚಾರದಲ್ಲಿ ಯಾವುದೇ ತಡವಾಗಿಲ್ಲ. ಆದರೆ, ಪ್ರಜ್ವಲ್ 2024ರ ಏಪ್ರಿಲ್ 26ರಂದು ಎಫ್‌ಐಆರ್ ದಾಖಲಾಗುತ್ತಿದ್ದಂತೆ ದೇಶ ತೊರೆದಿದ್ದರು. 2023ರಲ್ಲಿಯೇ ಅಶ್ಲೀಲ ವಿಡಿಯೊಗಳು ಸದ್ದು ಮಾಡುತ್ತಿದ್ದಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಜ್ವಲ್ ಏಕಪಕ್ಷೀಯ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು” ಎಂದರು.
ವಾದ ಆಲಿಸಿದ ಪೀಠವು ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿತು.