ಅತ್ಯಾಚಾರ ಪ್ರಕರಣ: ಎರಡನೇ ಬಾರಿಗೆ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಪ್ರಜ್ವಲ್‌ ರೇವಣ್ಣ

ಪ್ರಜ್ವಲ್‌ಗೆ ಎರಡು ಬಾರಿ ವಿಚಾರಣಾಧೀನ ನ್ಯಾಯಾಲಯ, ತಲಾ ಒಂದೊಂದು ಬಾರಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಿಸಿವೆ. ಈಗ ಪ್ರಜ್ವಲ್‌ ಎರಡನೇ ಸುತ್ತಿನಲ್ಲಿ ಹೊಸ ಆಧಾರಗಳ ಮೇಲೆ ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿದ್ದಾರೆ.
Prajwal Revanna & Karnataka HC
Prajwal Revanna & Karnataka HC
Published on

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಎರಡನೇ ಬಾರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೋಮವಾರ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ದೂರುದಾರರನ್ನು ಪಕ್ಷಕಾರರನ್ನಾಗಿಸಲು ಅರ್ಜಿದಾರರಿಗೆ ಆದೇಶಿಸಿದೆ.

ಪ್ರಕರಣದಲ್ಲಿ ಎರಡನೇ ಬಾರಿಗೆ ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಸುಪ್ರೀಂ ಕೋರ್ಟ್‌ ಈ ಹಿಂದೆ ಪ್ರಕರಣವೊಂದರ ತೀರ್ಪಿನಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದರೆ ಆ ಅರ್ಜಿಯು ಮತ್ತದೇ ಪೀಠದ ಮುಂದೆ ಬರಬೇಕು ಎಂದಿತ್ತು. ಈಗ ಸರ್ವೋಚ್ಚ ನ್ಯಾಯಾಲಯವು ಬೇರೊಂದು ಪ್ರಕರಣದ ವಿಚಾರಣೆಯಲ್ಲಿ ಒಂದೇ ಆರೋಪಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳ ಜಾಮೀನು ಅರ್ಜಿಯನ್ನು ಭಿನ್ನ ಪೀಠಗಳು ವಿಚಾರಣೆ ನಡೆಸಬಹುದು ಎಂದಿದೆ. ಈಗ ರೋಸ್ಟರ್‌ ಬದಲಾಗಿರುವುದರಿಂದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲು ನಿರ್ಧರಿಸಿದರೆ ವಾದಿಸಲಾಗುವುದು” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳ ಆದೇಶ ಪಡೆಯುವುದು ಸೂಕ್ತ” ಎಂದರು.

ಆಗ ಪೀಠವು “ಮಾಜಿ/ಹಾಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣ ವಿಚಾರಣೆಗೆ ರೂಪಿಸಲಾಗಿರುವ ವಿಶೇಷ ಪೀಠ. ಈ ಬಾರಿ ರೋಸ್ಟರ್‌ ಬದಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಈ ಸಂಬಂಧ ಕಾನೂನಿನ ವಿಚಾರಗಳಿದ್ದರೆ ಮುಂದಿನ ವಿಚಾರಣೆಯಲ್ಲಿ ತಿಳಿಸಬಹುದು” ಎಂದಿತು. ಮುಂದುವರಿದು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ಪ್ರಕರಣದಲ್ಲಿ ದೂರುದಾರೆಯನ್ನು ಪ್ರತಿವಾದಿಯನ್ನಾಗಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್‌ 7ಕ್ಕೆ ಮುಂದೂಡಿತು.

ಪ್ರಜ್ವಲ್‌ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಮೊದಲನೇ ಪ್ರಕರಣದಲ್ಲಿ ಅವರು ಸದ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಜ್ವಲ್‌ಗೆ ಎರಡು ಬಾರಿ ವಿಚಾರಣಾಧೀನ ನ್ಯಾಯಾಲಯ, ತಲಾ ಒಂದೊಂದು ಬಾರಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಿಸಿವೆ. ಈಗ ಪ್ರಜ್ವಲ್‌ ಎರಡನೇ ಸುತ್ತಿನಲ್ಲಿ ಹೊಸ ಆಧಾರಗಳ ಮೇಲೆ ಜಾಮೀನು ಕೋರಿಕೆ ಇಟ್ಟಿದ್ದಾರೆ.

Also Read
ಅತ್ಯಾಚಾರ ಪ್ರಕರಣಗಳ ಆರೋಪಿ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ 2024ರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಪ್ರಜ್ವಲ್‌ ಮತ್ತು ಅವರ ತಂದೆ ಎಚ್‌ ಡಿ ರೇವಣ್ಣ ವಿರುದ್ಧ ಅವರ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಮಾಡಿದ್ದರು. ಈ ಸಂಬಂಧ ಐಪಿಸಿ ಸೆಕ್ಷನ್‌ಗಳಾದ 376, 376(2)(K), 354, 354(A), 354(B), 354(D), 506, 509, 201 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66E ಅಡಿ ಪ್ರಕರಣ ದಾಖಲಾಗಿದೆ. ಇದೇ ಪ್ರಕರಣ ಪ್ರತ್ಯೇಕಿಸಿ ಎಚ್‌ ಡಿ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

Kannada Bar & Bench
kannada.barandbench.com