
ಜನಪ್ರತಿನಿಧಿಗಳ ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿರುವ ತನ್ನ ವಿರುದ್ಧದ ಅತ್ಯಾಚಾರ ಆರೋಪದ ಕ್ರಿಮಿನಲ್ ಪ್ರಕರಣಗಳನ್ನು ಮತ್ತೊಂದು ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಬೆಂಗಳೂರಿನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯಗಳ ಪ್ರಧಾನ ನ್ಯಾಯಾಧೀಶರು ಶುಕ್ರವಾರ ಆದೇಶಿಸಿದ್ದಾರೆ.
ಪ್ರಜ್ವಲ್ ಪರ ಹಾಜರಾಗಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರ ಮನವಿಯನ್ನು ಆಲಿಸಿದ ಪ್ರಧಾನ ನ್ಯಾಯಾಧೀಶ ಬಿ ಮುರಳೀಧರ ಪೈ ಅವರು ಪ್ರತಿವಾದಿ ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಈಗಾಗಲೇ ತನ್ನ ವಿರುದ್ಧ ಒಂದು ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಪೂರ್ವಗ್ರಹ ಭಾವನೆ ಹೊಂದಿರುವ ಅಂಶಗಳಿವೆ. ಇದು ಅವರ ಅನ್ಯಾಯದ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಸೆಕ್ಷನ್ 408ರ ಅಡಿಯಲ್ಲಿ ಸದ್ಯ ನಡೆಯುತ್ತಿರುವ ಮತ್ತೆರಡು ಪ್ರಕರಣಗಳ ವಿಚಾರಣೆಯನ್ನು ನಗರದ ಮತ್ತೊಂದು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಆದೇಶಿಸಬೇಕು ಎಂದು ಪ್ರಜ್ವಲ್ ಕೋರಿದ್ದಾರೆ.
ಪ್ರಜ್ವಲ್ ರೇವಣ್ಣ ಪರ ವಕೀಲ ಬಿ ಎಂ ಗಿರೀಶ್ ಕುಮಾರ್ ವಕಾಲತ್ತು ವಹಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಮನೆಗೆಲಸದ ಮಧ್ಯವಯಸ್ಕ ಮಹಿಳೆಯ ಮೇಲೆ ಪದೆ ಪದೇ ಅತ್ಯಾಚಾರ ಎಸಗಿದ ದುಷ್ಕೃತ್ಯದಲ್ಲಿ ಅಪರಾಧಿಯಾಗಿ ಸದ್ಯ ಜೀವನ ಪರ್ಯಂತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.