ಜೈಲಿನಲ್ಲಿ ಮೊಬೈಲ್‌ ಬಳಕೆ ಪ್ರಕರಣ: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಎರಡು ದಿನ ಪೊಲೀಸ್‌ ಕಸ್ಟಡಿಗೆ

ಪ್ರಜ್ವಲ್‌ ಜಫ್ತಿ ಮಾಡಲಾದ ಫೋನ್‌ ಅನ್ನು ಮನೆಯವರು ಮತ್ತು ವಕೀಲರಿಗೆ ಕರೆ ಮಾಡಲು ಬಳಕೆ ಮಾಡುತ್ತಿದ್ದ ಎನ್ನಲಾಗಿದೆ. ಮೊಬೈಲ್‌ಗೆ ಹಾಕಲಾಗಿರುವ ಸಿಮ್‌ ಅನ್ನು ಆಂಧ್ರಪ್ರದೇಶದಲ್ಲಿ ಖರೀದಿಸಲಾಗಿದೆ ಎಂದು ದೂರಲಾಗಿತ್ತು.
Prajwal Revanna
Prajwal Revanna
Published on

ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಮತ್ತು ಇನ್ನೊಬ್ಬ ಆರೋಪಿ ಪ್ರತಾಪ್‌ ರಾಯ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್‌ ಬಳಕೆ ಮಾಡಿದ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಎರಡು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಮಂಗಳವಾರ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿದೆ.

42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಸಂದೀಪ್‌ ಪಾಟೀಲ್‌ ಅವರು ವಾದ ಆಲಿಸಿದ ಬಳಿಕ ಸೆಪ್ಟೆಂಬರ್‌ 10ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

Sandeep Patil
XLII Addl. Chief Judicial Magistrate
Sandeep Patil XLII Addl. Chief Judicial Magistrate

ವಿಚಾರಣೆಯ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕ ಸತೀಶ್‌ ರಾವ್‌ ಅವರು “ಪ್ರಕರಣದಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ. ಜೈಲಿಗೆ ಹೇಗೆ ಮೊಬೈಲ್‌ ಫೋನ್‌, ಚಾರ್ಜರ್‌ ಮತ್ತು ಇತರೆ ವಸ್ತುಗಳು ಬಂದವು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಜೈಲಿನಲ್ಲಿ ಆರೋಪಿಗಳನ್ನು ಸರಿಯಾಗಿ ತನಿಖೆಗೆ ಒಳಪಡಿಸಲಾಗಿಲ್ಲ. ಹೀಗಾಗಿ, ಕಸ್ಟಡಿಗೆ ನೀಡಬೇಕು” ಎಂದು ಕೋರಿದರು.

ಪ್ರಜ್ವಲ್‌ ಪ್ರತಿನಿಧಿಸಿದ್ದ ವಕೀಲ ಜಿ ಅರುಣ್‌ ಅವರು ರಿಮ್ಯಾಂಡ್‌ ಕೋರಿಕೆ ಆಕ್ಷೇಪಿಸಿ “ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯು ಜೈಲಿನ ಎದುರಿಗೆ ಇರುವುದರಿಂದ ಪೊಲೀಸರು ಅಲ್ಲಿಯೇ ಹೋಗಿ ತನಿಖೆ ನಡೆಸಬಹುದಾಗಿದೆ” ಎಂದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ಆಗಸ್ಟ್‌ 11ರಂದು ಅತಿ ಭದ್ರತೆ ಇರುವ ಬ್ಯಾರಕ್‌ ಪರಿಶೀಲನೆ ನಡೆಸಿದಾಗ ರೆಡ್‌ಮಿ 5G ಸ್ಮಾರ್ಟ್‌ಫೋನ್‌, ನೀಲಿ ಪಾಕೆಟ್‌ ನೋಟ್‌ಬುಕ್‌, ಚಾರ್ಜರ್‌, ಸ್ಯಾನ್‌ಡಿಸ್ಕ್‌ ಪೆನ್‌ಡ್ರೈವ್‌ ಅನ್ನು ವಶಪಡಿಸಿಕೊಂಡಿದ್ದರು.

ಮೊಬೈಲ್‌ನಲ್ಲಿ ವಾಟ್ಸಾಪ್‌, ಇನ್‌ಸ್ಟಾಗ್ರಾಂ, ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೊ ಇತರೆ ಅಪ್ಲಿಕೇಶನ್‌ಗಳನ್ನು ಅಳವಡಿಸಲಾಗಿತ್ತು. ಮೊಬೈಲ್‌ ಅನ್ನು ಪಾಸ್‌ವರ್ಡ್‌ನಿಂದ ಸಂರಕ್ಷಿಸಲಾಗಿದ್ದು, ತಪಾಸಣೆಗಾಗಿ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.

ಪ್ರಜ್ವಲ್‌ ಜಫ್ತಿ ಮಾಡಲಾದ ಫೋನ್‌ ಅನ್ನು ಮನೆಯವರು ಮತ್ತು ವಕೀಲರಿಗೆ ಕರೆ ಮಾಡಲು ಬಳಕೆ ಮಾಡುತ್ತಿದ್ದ ಎನ್ನಲಾಗಿದೆ. ಮೊಬೈಲ್‌ಗೆ ಹಾಕಲಾಗಿರುವ ಸಿಮ್‌ ಅನ್ನು ಆಂಧ್ರಪ್ರದೇಶದಲ್ಲಿ ಖರೀದಿಸಲಾಗಿದೆ ಎಂದು ದೂರಲಾಗಿತ್ತು.

ಪೊಲೀಸ್‌ ಆಯುಕ್ತರ ಸೂಚನೆಯಂತೆ ಅಧಿಕಾರಿ ಎಂ ಎಲ್‌ ಸುಬ್ರಹ್ಮಣ್ಯಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಬಿಎನ್‌ಎಸ್‌ ಸೆಕ್ಷನ್‌ 323, ಕರ್ನಾಟಕ ಜೈಲು (ತಿದ್ದುಪಡಿ) ಕಾಯಿದೆ 2022ರ ಸೆಕ್ಷನ್‌ 42ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com