ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಆಡಿಯೊ, ವಿಡಿಯೊ ಮತ್ತು ಚಿತ್ರಗಳ ಪೆನ್‌ಡ್ರೈವ್ ಮತ್ತು ಸಿ ಡಿ ಹಂಚಿಕೆ ಪ್ರಕರಣದ ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ ಕದತಟ್ಟಿದ್ದಾರೆ.
ಆರೋಪಿಗಳಾದ ನವೀನ್ ಗೌಡ ಅಲಿಯಾಸ್ ಎನ್ ಆರ್ ನವೀನ್ ಕುಮಾರ್, ಎನ್ ಕಾರ್ತಿಕ್, ಬಿ ಸಿ ಚೇತನ್ ಕುಮಾರ್ ಮತ್ತು ಎಚ್ ವಿ ಪುಟ್ಟರಾಜು ಅವರು ಸಲ್ಲಿಸಿರುವ ಪ್ರತ್ಯೇಕ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು.
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಹಾಸನದ ಸಿಇಎನ್ ಠಾಣಾ (ರಾಜ್ಯ ಸರ್ಕಾರ) ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ಹಾಸನದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆನಂದ ಅವರು ಆರೋಪಿಗಳಿಗೆ ಮೇ 8ರಂದು ನಿರೀಕ್ಷಣಾ ಜಾಮೀನು ನಿರಾಕರಿಸಿ, ವಿಸ್ತೃತ ಆದೇಶ ಪ್ರಕಟಿಸಿದ್ದರು.
ಪ್ರಕರಣದ ಹಿನ್ನೆಲೆ: ನವೀನ್ ಗೌಡ ಮತ್ತು ಇತರರು ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇರುವ ಚಿತ್ರ ಮತ್ತು ವಿಡಿಯೊಗಳನ್ನು ತಿರುಚಿ ಅವುಗಳನ್ನು ಪೆನ್‌ಡ್ರೈವ್, ಸಿ ಡಿ, ವಾಟ್ಸಾಪ್ ಮೂಲಕ ಹಾಸನ ಲೋಕಸಭಾ ವ್ಯಾಪ್ತಿಯ ಜನರಿಗೆ ಹಂಚಿದ್ದಾರೆ ಎಂದು ದೂರಲಾಗಿದೆ. ಏಪ್ರಿಲ್ 21ರ ಸಂಜೆ 6.30 ಕ್ಕೆ ಘಟನೆ ಗುಸುಗುಸು ಆರಂಭವಾಗಿದ್ದು, ಏಪ್ರಿಲ್ 26ರಂದು ಪ್ರಜ್ವಲ್‌ಗೆ ಮತದಾನ ಮಾಡದಂತೆ ತಡೆಯುವ ಯತ್ನ ಮಾಡಲಾಗಿದೆ ಎಂದು ಏಪ್ರಿಲ್ 23ರಂದು ಜೆಡಿಎಸ್-ಬಿಜೆಪಿ ಚುನಾವಣಾ ಏಜೆಂಟ್ ಎಂ ಜಿ ಪೂರ್ಣಚಂದ್ರ ತೇಜಸ್ವಿ ಅವರು ಹಾಸನದ ಸೆನ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರು ಆಧರಿಸಿ ಪ್ರತಿವಾದಿಗಳಾದ ನವೀನ್ ಗೌಡ ಅಲಿಯಾಸ್ ನವೀನ್ ಕುಮಾರ್ ಎನ್ ಆರ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 171ಜಿ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67ಎ ಅಡಿ ಪ್ರಕರಣ ದಾಖಲಿಸಲಾಗಿತ್ತು.