ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ ಹಾಗೂ ವಿಧಾನ ಪರಿಷತ್ ಸದಸ್ಯ, ಸೂರಜ್ ರೇವಣ್ಣ ಅವರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ತನಿಖೆ ನಡೆಸಲು ಸಿಐಡಿ ಡಿಜಿಪಿ ಅವರಿಗೆ ಪೊಲೀಸ್ ಮಹಾ ನಿರ್ದೇಶಕರು ನಿರ್ದೇಶನ ನೀಡಿದ್ದು ಇತ್ತ ಪ್ರಕರಣ ಕಡತವನ್ನು ಸಿಐಡಿ ತನಿಖಾಧಿಕಾರಿಗೆ ನೀಡುವಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಆ ಕುರಿತಾದ ವರದಿ ಸಲ್ಲಿಸುವಂತೆ ಡಿಜಿ- ಐಜಿಪಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಜೆಡಿಎಸ್ ಕಾರ್ಯಕರ್ತ ಎನ್ನಲಾದ ಯುವಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರನ್ನು ಇಂದು (ಭಾನುವಾರ) ಬೆಳಿಗ್ಗೆಯಷ್ಟೇ ಹಾಸನ ಪೊಲೀಸರು ಬಂಧಿಸಿದ್ದರು.
ಸೂರಜ್ ಅವರ ವಿರುದ್ಧ ಯುವಕನೊಬ್ಬ ಸಲ್ಲಿಸಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377 (ಅನೈಸರ್ಗಿಕ ಅಪರಾಧ), 342 (ಅಕ್ರಮ ಬಂಧನಕ್ಕಾಗಿ ದಂಡನೆ), 506 (ಬೆದರಿಕೆ), 34 (ಏಕೋದ್ದೇಶಕ್ಕಾಗಿ ವಿವಿಧ ವ್ಯಕ್ತಿಗಳು ಎಸಗಿದ ಕೃತ್ಯ) ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ಚನ್ನರಾಯಪಟ್ಟಣ ತಾಲೂಕಿನ ಗನ್ನಿಗಡ ಫಾರಂ ಹೌಸ್ ಮನೆಯಲ್ಲಿ ತನ್ನೊಂದಿಗೆ ಸೂರಜ್ ರೇವಣ್ಣ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಯುವಕ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದ. ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಸೂರಜ್ ರೇವಣ್ಣ ಅವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಯುವಕ ಮನವಿ ಮಾಡಿದ್ದ.
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಅದರಂತೆ ಶನಿವಾರ ದೂರುದಾರನಿಂದ ಹೇಳಿಕೆ ಪಡೆದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.
ಮತ್ತೊಂದೆಡೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಯುವಕನ ವಿರುದ್ಧವೂ ದೂರು ದಾಖಲಾಗಿತ್ತು. ಐದು ಕೋಟಿ ರೂಪಾಯಿ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದು ಹಣ ನೀಡದೆ ಹೋದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದಾಗಿ ಆತ ಹೇಳಿದ್ದ ಎಂದು ಆರೋಪಿಸಲಾಗಿತ್ತು.
ಸೂರಜ್ ಅವರ ಸಹೋದರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆ ನಡೆಯುತ್ತಿರುವ ವೇಳೆಯೇ ಸೂರಜ್ ಅವರ ವಿರುದ್ಧ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.