ಅತ್ಯಾಚಾರ ಪ್ರಕರಣ: ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ವಿಚಾರಣೆಗೆ ಆಕ್ಷೇಪಿಸಿದ ಪ್ರಜ್ವಲ್‌ ರೇವಣ್ಣ ಅರ್ಜಿ ವಜಾ

ನ್ಯಾಯಾಧೀಶ ಸಂತೋಷ ಭಟ್‌ ಅವರು ವಿಚಾರಣೆಯ ವೇಳೆ ಪ್ರಜ್ವಲ್‌ ಅವರನ್ನು, ಈತ ಮಹಾತ್ಮ, ಫಿಲಂ ಹೀರೋ, ವಿಡಿಯೋ ನೋಡೋಲ್ವಾ, ಹೋಗಪ್ಪಾ ನಿನ್ನ ವಿಡಿಯೋ ನೋಡು... ಎಂದೆಲ್ಲಾ ಹೇಳಿದ್ದಾರೆ ಎಂದು ಆಕ್ಷೇಪ.
Prajwal Revanna
Prajwal Revanna
Published on

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಪೂರ್ವಗ್ರಹ ಪೀಡಿತರಾಗಿದ್ದಾರೆ ಎಂದು ಆಕ್ಷೇಪಿಸಿ ಪ್ರಜ್ವಲ್‌ ಪರ ವಕೀಲರು ಸಲ್ಲಿಸಿದ ಅರ್ಜಿಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಬುಧವಾರ ತಿರಸ್ಕರಿಸಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ. ಯಾಕೆಂದರೆ, ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್‌ ಅವರು ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೂರ್ವಗ್ರಹಪೀಡಿತ ಭಾವನೆ ಹೊಂದಿದ್ದು ನ್ಯಾಯಸಮ್ಮತ ವಿಚಾರಣೆ ನಡೆಸುವ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ ಎಂದು ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪರ ವಕೀಲರು ಆರೋಪಿಸಿದ್ದರು.

ಈ ಕುರಿತು ಪ್ರಜ್ವಲ್‌ ಪರ ಹೈಕೋರ್ಟ್‌ ವಕೀಲ ಜಿ ಅರುಣ್‌ ಅವರು ಪ್ರಕರಣದ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರಿಗೇ ಬುಧವಾರ ಮೆಮೊ ಸಲ್ಲಿಸಿದರು.

Santhosh Gajanan Bhat Judge, MP/MLA Special Court
Santhosh Gajanan Bhat Judge, MP/MLA Special Court

ಬೆಳಿಗ್ಗೆ ವಿಚಾರಣೆಗೆ ಕರೆದಾಗ ಅರುಣ್‌ ಈ ಕುರಿತ ಆರು ಪುಟಗಳ ಮೆಮೊ ಅನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು. ಆದರೆ, ಇದಕ್ಕೆ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಮತ್ತು ವಿಶೇಷ ಅಭಿಯೋಜಕ ಅಶೋಕ್‌ ಎನ್‌.ನಾಯಕ್‌ ಅವರು “ಅರ್ಜಿದಾರರು, ಪ್ರಸಕ್ತ ವರ್ಷದ ಜನವರಿ 16ರಿಂದ ಒಂದಿಲ್ಲಾ ಒಂದು ಕಾರಣಕ್ಕೆ ವಿಚಾರಣೆಯನ್ನು ವಿಳಂಬಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆರೋಪಿ ಪರ ವಕೀಲರ ಕೋರಿಕೆಯಂತೆ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಮೆಮೊ ಅನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರ ಅವಗಾಹನೆಗೆ ಕಳುಹಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅರ್ಜಿ ಪುರಸ್ಕರಿಸಲು ನಿರಾಕರಿಸಿದ ಕಾರಣ ಅರುಣ್‌ ಅರ್ಜಿದಾರರ ಪರ ವಕಾಲತ್ತಿನಿಂದ ತಾವು ನಿವೃತ್ತಿ ಆಗುತ್ತಿರುವುದಾಗಿ ಘೋಷಿಸಿ ನ್ಯಾಯಾಧೀಶರಿಗೆ ಮೆಮೊ ಸಲ್ಲಿಸಿದರು. ಇದರಿಂದಾಗಿ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ವಿಚಾರಣೆಯನ್ನು ಗುರುವಾರಕ್ಕೆ (ಏಪ್ರಿಲ್‌ 24) ಮುಂದೂಡಿದರು.

Also Read
ಅತ್ಯಾಚಾರ ಪ್ರಕರಣಗಳ ವಿಚಾರಣೆ: ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಾಜರಾಗುವ ಪ್ರಜ್ವಲ್ ಕೋರಿಕೆ ತಿರಸ್ಕರಿಸಿದ ನ್ಯಾಯಾಲಯ

ಆರೋಪಗಳೇನು?: ನ್ಯಾಯಾಧೀಶ ಸಂತೋಷ ಭಟ್‌ ಅವರು ವಿಚಾರಣೆಯ ವೇಳೆ ಪ್ರಜ್ವಲ್‌ ಅವರನ್ನು, ಈತ ಮಹಾತ್ಮ, ಫಿಲಂ ಹೀರೋ, ವಿಡಿಯೊ ನೋಡಿಲ್ವಾ, ಹೋಗಪ್ಪಾ ನಿನ್ನ ವಿಡಿಯೋ ನೋಡು... ಎಂದೆಲ್ಲಾ ಸಂಬೋಧಿಸಿದ್ದಾರೆ. ತರಾತುರಿಯಲ್ಲಿ ಆರೋಪ ನಿಗದಿಪಡಿಸಿ ವಿಚಾರಣೆಗೆ ಮುಂದಾಗಿದ್ದಾರೆ. ಇದು ಅವರು ಈ ಪ್ರಕರಣದಲ್ಲಿ ಹೊಂದಿರುವ ಪೂರ್ವಗ್ರಹ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಆದ್ದರಿಂದ, ಈ ಪ್ರಕರಣದ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು ಆದೇಶಿಸಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com