ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟು ₹1 ಜುಲ್ಮಾನೆ ಶಿಕ್ಷೆಗೆ ಒಳಗಾಗಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಆಗಸ್ಟ್ 31ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪಿನ ಕುರಿತಾದ ಮರುಪರಿಶೀಲನಾ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಹಾಗೂ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ವಿಸ್ತೃತ ಸಾಂವಿಧಾನಿಕ ಪ್ರಶ್ನೆಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ನೀಡುವಂತೆ ಭೂಷಣ್ ಮನವಿ ಮಾಡಿದ್ದಾರೆ.
ನ್ಯಾಯಾಂಗವನ್ನು ವಿಮರ್ಶಿಸಿ ಭೂಷಣ್ ಮಾಡಿದ್ದ ಎರಡು ಟ್ವೀಟ್‌ಗಳನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾ. ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಈ ತೀರ್ಪಿನ ಮರುಪರಿಶೀಲನೆ ಕೋರಿ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆಗೆ ಗುರಿಯಾಗಿರುವವರೂ ಸೇರಿದಂತೆ ತನ್ನ ಪರವಾಗಿ ಮೇಲ್ಮನವಿ ಸಲ್ಲಿಸುವ ಹಕ್ಕಿಗೆ ಕೋರಿ ಭೂಷಣ್ ಮನವಿ ಮಾಡಿದ್ದರು.
ವಕೀಲೆ ಕಾಮಿನಿ ಜೈಸ್ವಾಲ್ ಅವರ ಮೂಲಕ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿರುವ ಭೂಷಣ್ ಅವರು ನ್ಯಾಯಾಲಯವು ದಂಡ ಶಿಕ್ಷೆ ವಿಧಿಸಿದೆ. ಒಂದೊಮ್ಮೆ ದಂಡ ಪಾವತಿಸಲು ವಿಫಲವಾದರೆ ನಿರ್ದಿಷ್ಟ ಅವಧಿಯವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುವ ಹಕ್ಕು ಕಳೆದುಕೊಳ್ಳಲಿದ್ದೇನೆ. ದಂಡ ಪಾವತಿಸಿದಾಗ ವಿಫಲತೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದಿರುವ ಭೂಷಣ್ ಅವರು ಶಿಕ್ಷೆ ವಿಚಾರಣೆಯ ಸಂದರ್ಭದಲ್ಲಿ ವಕೀಲಿಕೆಗೆ ತಡೆಯೊಡ್ಡುವ ಸಾಧ್ಯತೆ ಪ್ರಸ್ತಾಪಿಸಲಾಗಿರಲಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಹೀಗೆ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ನಿಂದನಾ ಕಾರ್ಯವಿಧಾನ ನಿಯಂತ್ರಣ-1975 ಕಾಯಿದೆ ಅಡಿ ತಮ್ಮ ವಿರುದ್ಧ ದಾಖಲಿಸಿರುವ ದೂರಿನ ಅರ್ಜಿಯನ್ನು ನೀಡಲಾಗಿಲ್ಲ. ಪ್ರಾಥಮಿಕ ಪ್ರತಿಕ್ರಿಯಿಂದ ಸಂತುಷ್ಟವಾಗಿದ್ದಾಗ ಹೆಚ್ಚುವರಿ ಪ್ರತಿಕ್ರಿಯೆ ದಾಖಲಿಸಲು ನ್ಯಾಯಾಲಯವು ಅವಕಾಶ ನೀಡಿಲ್ಲ ಎಂದಿರುವ ಭೂಷಣ್ ಅವರು ಯಾವುದೇ ಕಾರ್ಯವಿಧಾನಗಳನ್ನು ಅನುಸರಿಸಲಾಗಿಲ್ಲ ಎಂದು ವಿವರಿಸಿದ್ದಾರೆ.
ಪ್ರಾಥಮಿಕ ಪ್ರತಿಕ್ರಿಯೆ ಆಧರಿಸಿ ಶಿಕ್ಷೆ ಪ್ರಕಟಿಸಲಾಗಿದೆ. ಪೂರಕ ಪ್ರತಿಕ್ರಿಯೆ ಸಲ್ಲಿಸುವ ಅವಕಾಶ ನಿರಾಕರಿಸಿರುವುದು ನ್ಯಾಯಾಂಗ ನಿಂದನಾ ಪ್ರಕ್ರಿಯೆಯ ಸ್ಥಾಪಿತ ನಿಯಮಗಳನ್ನು ಉಲ್ಲಂಘಿಸಿದಂತೆ ಎಂದು ಭೂಷಣ್ ತೀರ್ಪು ಮರು ಪರಿಶೀಲನಾ ಮನವಿಯಲ್ಲಿ ವಾದಿಸಿದ್ದಾರೆ.