ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಕರ್ನಾಟಕ ಹೈಕೋರ್ಟ್‌

ಆರೋಪಿಗಳು ನೆಟ್ಟಾರು ಹತ್ಯೆಗೆ ಹಮ್ಮಿಕೊಂಡಿದ್ದ ಸಂಚಿನ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಹತ್ಯೆ ಯೋಜನೆ ಬಗ್ಗೆ ಚರ್ಚಿಸಿದ್ದರು. ಸಂಚು ರೂಪಿಸಲು ಯಾವುದೇ ಬಹಿರಂಗ ಕ್ರಿಯೆ ಮಾಡುವ ಅಗತ್ಯವಿಲ್ಲ ಎಂದಿರುವ ನ್ಯಾಯಾಲಯ.
Praveen Nettaru
Praveen Nettaru

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ನಿರಾಕರಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಕೆ ಇಸ್ಮಾಯಿಲ್‌ ಶಫಿ (ಆರೋಪಿ 9), ಕೆ ಮೊಹಮ್ಮದ್‌ ಇಕ್ಬಾಲ್‌ (ಆರೋಪಿ 10) ಮತ್ತು ಎಂ ಶಾಹೀದ್‌ (ಆರೋಪಿ 11) ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್‌ ಬಿ ಪ್ರಭಾಕರ್‌ ಶಾಸ್ತ್ರಿ ಮತ್ತು ಅನಿಲ್‌ ಕೆ.ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ತಿರಸ್ಕರಿಸಿದೆ.

ಮೇಲ್ಮನವಿದಾರ ಆರೋಪಿಗಳು ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸಿರುವುದನ್ನು ತೋರಿಸಲು ಸೂಕ್ತ ಸಾಕ್ಷ್ಯಧಾರಗಳು ಲಭ್ಯವಿದೆ. ಮೃತನ ಮೇಲೆ ದಾಳಿ ನಡೆದ ವೇಳೆ ಸ್ಥಳದಲ್ಲಿ ಈ ಮೂರು ಆರೋಪಿಗಳು ಭೌತಿಕವಾಗಿ ಹಾಜರಲಿಲ್ಲ. ಆದರೆ, ಪ್ರವೀಣ್‌ ನೆಟ್ಟಾರು ಹತ್ಯೆಗೆ ಯೋಜನೆ ರೂಪಿಸಲು ಹಮ್ಮಿಕೊಂಡಿದ್ದ ಸಂಚಿನ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಹತ್ಯೆ ಯೋಜನೆ ಬಗ್ಗೆ ಚರ್ಚಿಸಿದ್ದರು. ಸಂಚು ರೂಪಿಸಲು ಯಾವುದೇ ಬಹಿರಂಗ ಕ್ರಿಯೆಯನ್ನು ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನಾಲ್ವರು ಸಾಕ್ಷಿಗಳ ಹೇಳಿಕೆ ಪ್ರಕಾರ ಆರೋಪಿಗಳು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ತನಿಖಾಧಿಕಾರಿಗಳು ಸಂಗ್ರಹಿಸಿರುವ ಆರೋಪಿಗಳ ಪೋನ್‌ ಕರೆಗಳ ವಿವರಗಳು ಸಹ ಪ್ರಕರಣದಲ್ಲಿ ಮೇಲ್ಮನವಿದಾರ ಆರೋಪಿಗಳು ಪಿತೂರಿ ನಡೆಸುವುದನ್ನು ತೋರಿಸುತ್ತದೆ. ಆರೋಪಿಗಳು ಪ್ರಕರಣದಲ್ಲಿ ನಿರ್ದಿಷ್ಟ, ಸಕ್ರಿಯ ಮತ್ತು ಗಮನಾರ್ಹ ಪಾತ್ರ ನಿರ್ವಹಿಸುವುದನ್ನು ಮೇಲ್ನೋಟಕ್ಕೆ ದೃಢಪಡಿಸುವ ಸಾಕ್ಷ್ಯಗಳು ನ್ಯಾಯಾಲಯದ ಮುಂದಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಮೇಲ್ಮನವಿದಾರರು ನೆಟ್ಟಾರು ಹತ್ಯೆಯ ಪಿತೂರಿಯಲ್ಲಿ ಭಾಗವಹಿಸಿರುವುದು ಸತ್ಯವಾಗಿದ್ದು, ಅದು ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಮತ್ತು ಸುಗಮಗೊಳಿಸುವ ಕೆಲಸವಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿ (ಯುಎಪಿಎ) ಆರೋಪಿಗಳ ನಡೆಸಿರುವ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದ ಪೀಠ ಮೇಲ್ಮನವಿಯನ್ನು ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್‌ ನೆಟ್ಟಾರು, ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮ ಅಕ್ಷಯ ಫ್ರೆಶ್‌ ಚಿಕೆನ್‌ ಫಾರ್ಮ್‌ ಶಾಪ್‌ ಹೊಂದಿದ್ದರು. 2022ರ ಜುಲೈ 26ರಂದು ರಾತ್ರಿ 8.30ರ ವೇಳೆ ಅಂಗಡಿಯನ್ನು ಮುಚ್ಚಿ ಮನೆಗೆ ಮೋಟಾರು ವಾಹನದಲ್ಲಿ ಹೋಗುತ್ತಿದ್ದಾಗ ಕೆಲ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ನೆಟ್ಟಾರು ಮೇಲೆ ದಾಳಿ ನಡೆಸಿ, ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ನೆಟ್ಟಾರು ಅವರನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗಲೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.

ಘಟನೆ ಕುರಿತು ಪ್ರವೀಣ್‌ ಸ್ನೇಹಿತ ಮಧು ಕುಮಾರ್‌ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದ ವೇಳೆ ಪ್ರಕರಣವನ್ನು ಎನ್‌ಐಎಗೆ ವಹಿಸಿ 2022ರ ಆಗಸ್ಟ್‌ 3ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. 2022ರ ಆಗಸ್ಟ್‌ 4ರಂದು ಎನ್‌ಐಎ ತನಿಖಾಧಿಕಾರಿಗಳು ಪ್ರಕರಣವನ್ನು ಮತ್ತೆ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ಮುಂದುವರಿಸಿ, ಆರೋಪಿಗಳನ್ನು ಬಂಧಿಸಿದ್ದರು.

ಈ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿ ಎನ್‌ಐಎ ವಿಶೇಷ ನ್ಯಾಯಾಲಯ 2023ರ ಏಪ್ರಿಲ್‌ 29ರಂದು ಆದೇಶಿಸಿತು. ಇದರಿಂದ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆರೋಪಿಗಳ ವಿರುದ್ಧದ ಪ್ರಕರಣವು ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

Related Stories

No stories found.
Kannada Bar & Bench
kannada.barandbench.com