ಪ್ರವೀಣ್‌ ನೆಟ್ಟಾರು ಪ್ರಕರಣ: ಸಹ ಆರೋಪಿ ವಿಚಾರಣೆಯ ಸಿಸಿಟಿವಿ ತುಣುಕು ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ

ಎನ್‌ಐಎ ಅಧಿಕಾರಿಗಳ ಕರೆ ದಾಖಲೆ, ಎನ್‌ಐಎ ಅಧಿಕಾರಿಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಸಿಟಿವಿ ತುಣುಕು ಸಲ್ಲಿಸಲು ಆದೇಶಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ.
Praveen Nettaru and Karnataka High Court
Praveen Nettaru and Karnataka High Court

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಸಹ ಆರೋಪಿಯೊಬ್ಬನ ವಿಚಾರಣೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೊ ಪರಿಶೀಲಿಸುವುದಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಭೇಟಿ ನೀಡುವಂತೆ ತನ್ನ ಕೇಂದ್ರ ಯೋಜನಾ ಸಂಚಾಲಕರು ಮತ್ತು ಅವರ ತಾಂತ್ರಿಕ ತಂಡಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ [ಮೊಹಮ್ಮದ್‌ ಶಿಯಾಬ್‌ ವರ್ಸಸ್‌ ಎನ್‌ಐಎ].

ಎನ್‌ಐಎ ಅಧಿಕಾರಿಗಳ ಕರೆ ದಾಖಲೆ, ಎನ್‌ಐಎ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ಸಂಸ್ಥೆಯ ಅಧಿಕಾರಿಗಳ ಸಿಸಿಟಿವಿ ತುಣುಕುಗಳನ್ನು ಸಲ್ಲಿಸಲು ಆದೇಶಿಸುವಂತೆ ಕೋರಿ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಮೊಹಮ್ಮದ್‌ ಶಿಯಾಬ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಭಾಗಶಃ ಮಾನ್ಯ ಮಾಡಿದೆ.

ಎನ್‌ಐಎ ಅಧಿಕಾರಿಗಳ ಕರೆ ದಾಖಲೆ ಸಲ್ಲಿಸಲು ಆದೇಶಿಸುವ ಕೋರಿಕೆಗೆ ನಿರಾಕರಿಸಿರುವ ನ್ಯಾಯಾಲಯವು ಸಿಸಿಟಿವಿ ತುಣುಕು ಪರಿಶೀಲಿಸಲು ಅಸ್ತು ಎಂದಿದೆ. ಅರ್ಜಿದಾರ ಆರೋಪಿ ಮೊಹಮ್ಮದ್‌ ಶಿಯಾಬ್‌ ವಿರುದ್ಧ ಹೇಳಿಕೆ ನೀಡುವಂತೆ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಶಿಯಾಬ್‌ ಅರ್ಜಿ ಸಲ್ಲಿಸಿದ್ದರು.

ಸಹ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾಗ ಆತನ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆನಂತರ ಆತನನ್ನು ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಕಿರುಕುಳ ನೀಡಿರುವ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸುವುದನ್ನು ಯಾರೂ ತಡೆದಿರಲಿಲ್ಲ ಎಂದಿದ್ದ ವಿಶೇಷ ನ್ಯಾಯಾಲಯವು ಅರ್ಜಿ ತಿರಸ್ಕರಿಸಿತ್ತು.

ಹೇಳಿಕೆ ನೀಡಲು ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿರುವಾತನನ್ನು ವೈದ್ಯರು ಪರಿಶೀಲಿಸಿದ್ದು, ದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ ಎಂದು ದೃಢಪಡಿಸಿದ್ದಾರೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆಯನ್ನು ಅನುಮಾನಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ.

ಸಹ ಆರೋಪಿಯ ಹೇಳಿಕೆಯು ಅರ್ಜಿದಾರರ ಹಿತಾಸಕ್ತಿಗೆ ಹಾನಿ ಮಾಡುವುದರಿಂದ ಸಿಸಿಟಿವಿ ತುಣುಕು ಪ್ರಸ್ತುತಪಡಿಸಲು ಕೋರಿರುವುದನ್ನು ಮಾನ್ಯ ಮಾಡಲಾಗುವುದು ಎಂದು ಹೈಕೋರ್ಟ್‌ ಹೇಳಿದೆ. “ಪ್ರಕರಣದಲ್ಲಿ 18ನೇ ಆರೋಪಿಯು ತನಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾನೆ. ಹೀಗಾಗಿ, ಇದು ಶಿಯಾಬ್‌ ಹಿತಾಸಕ್ತಿಗೆ ಧಕ್ಕೆ ಮಾಡಲಿರುವುದರಿಂದ ಅವರ ಕೋರಿಕೆಯನ್ನು ಪರಿಗಣಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.

ಸಿಸಿಟಿವಿ ತುಣುಕುಗಳನ್ನು ಹಾಜರುಪಡಿಸಲು ಎನ್‌ಐಎ ಮತ್ತು ಎಫ್‌ಎಸ್‌ಎಲ್‌ಗೆ ನಿರ್ದೇಶಿಸುವ ಬದಲು ಹೈಕೋರ್ಟ್‌ ತನ್ನ ಕೇಂದ್ರ ಯೋಜನಾ ಸಂಚಾಲಕರು ಮತ್ತು ಅವರ ತಂಡಕ್ಕೆ ಎಫ್‌ಎಸ್‌ಎಲ್‌ ಮತ್ತು ಎನ್‌ಐಎಯಲ್ಲಿನ ವಿಡಿಯೊ ತುಣುಕು ಪರಿಶೀಲಿಸಿ, ಅದು ದೊರೆತರೆ ಅದನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಆದೇಶಿಸಿದೆ.

ಎನ್‌ಐಎ ಅಧಿಕಾರಿಗಳ ಕರೆ ದಾಖಲೆಯು ಸಾಕ್ಷ್ಯ ಕಾಯಿದೆ ಸೆಕ್ಷನ್‌ 124 (ಅಧಿಕೃತ ಸಂವಹನ) ಮತ್ತು ಸೆಕ್ಷನ್‌ 126ರ (ವೃತ್ತಿಪರ ಸಂವಹನ) ಅಡಿ ಸಂರಕ್ಷಿಸಲಾಗಿದೆ ಎಂದು ಆ ಕೋರಿಕೆಯನ್ನು ಪೀಠವು ತಿರಸ್ಕರಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮೊಹಮ್ಮದ್‌ ತಾಹೀರ್‌ ಅವರು “ಸಿಆರ್‌ಪಿಸಿ ಸೆಕ್ಷನ್‌ 164(1)ರ ಅಡಿ ಹೇಳಿಕೆ ನೀಡುವಂತೆ ಎನ್‌ಐಎ ಅಧಿಕಾರಿಗಳು ಸಹ-ಆರೋಪಿಗೆ ಕಿರುಕುಳ ನೀಡಿದ್ದಾರೆ. ಆನಂತರ ಸಹ-ಆರೋಪಿಯನ್ನು ಮಾಫಿ ಸಾಕ್ಷಿಯನ್ನಾಗಿಸಿ, ಸಿಆರ್‌ಪಿಸಿ ಸೆಕ್ಷನ್‌ 306ರ ಅಡಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆನಂತರ ಸಹ-ಆರೋಪಿಯು ತನಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ತನ್ನ ಹೇಳಿಕೆ ಹಿಂಪಡೆದಿದ್ದಾರೆ. ಅಲ್ಲದೆ ತನಗೆ ಅಧಿಕಾರಿಗಳೇ ವಕೀಲರನ್ನು ನೇಮಕ ಮಾಡಿಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ. ಈ ನೆಲೆಯಲ್ಲಿ ನೋಡಿದರೆ ತನಿಖೆ ನ್ಯಾಯಯುತವಾಗಿ ನಡೆದಿಲ್ಲ. ಆದ್ದರಿಂದ, ಕರೆ ದಾಖಲೆ ಮತ್ತು ಸಿಸಿಟಿವಿ ತುಣುಕು ಹಾಜರುಪಡಿಸಲು ಆದೇಶಿಸಿದರೆ ಸತ್ಯ ಬಹಿರಂಗವಾಗಲಿದೆ” ಎಂದು ವಾದಿಸಿದ್ದರು.

ಎನ್‌ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ದಾಖಲೆ ಕೇಳಲು ಅರ್ಜಿದಾರರಿಗೆ ಯಾವುದೇ ಹಕ್ಕಿಲ್ಲ. ಒಂದೊಮ್ಮೆ ದಾಖಲೆ ಕೇಳಿದರೂ ಸಹ ಆರೋಪಿ ಕೇಳಬಹುದು. ಸಿಸಿಟಿವಿ ತುಣುಕು ಸಂಗ್ರಹ ಮಿತಿ ಸೀಮಿತವಾಗಿದ್ದು, ಕಳೆದ ವರ್ಷದ ನವೆಂಬರ್‌ನಲ್ಲಿ ಸಹ ಆರೋಪಿಯನ್ನು ತನಿಖೆಗೆ ಒಳಪಡಿಸಿರುವುದರಿಂದ ಅದು ಲಭ್ಯವಾಗುವ ಸಾಧ್ಯತೆ ಇಲ್ಲ. ಅಧಿಕಾರಿಗಳ ಕರೆ ದಾಖಲೆಯು ಅಧಿಕೃತ ಸಂವಹನ ಒಳಗೊಂಡಿದ್ದು, ಗೌಪ್ಯತೆ ಕಾಪಾಡಬೇಕಿರುವುದರಿಂದ ಅದನ್ನು ಹಾಜರುಪಡಿಸಲು ಆದೇಶಿಸಲಾಗದು” ಎಂದು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com