ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯ: ತಪ್ಪಿತಸ್ಥರ ವಿರುದ್ಧ ತಿಂಗಳಲ್ಲಿ ಕ್ರಮಕ್ಕೆ ಸರ್ಕಾರಕ್ಕೆ ಹೈಕೋರ್ಟ್‌ ಗಡುವು

“ಅಕ್ಟೋಬರ್‌ 8ರ ಒಳಗೆ ಕಾನೂನು ಕ್ರಮಕೈಗೊಳ್ಳದಿದ್ದರೆ ಗೃಹ ಇಲಾಖೆಯ ಕಾರ್ಯದರ್ಶಿ ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಹೇಳಿತು.
V K Sasikala and Karnataka HC
V K Sasikala and Karnataka HC

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತ ಆಪ್ತೆ ವಿ ಕೆ ಶಶಿಕಲಾ ಅವರಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಲು ನೆರವಾದ ನಾಲ್ವರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಲ್ಲಿಸಿರುವ ಮನವಿಯನ್ನು 30 ದಿನಗಳ ಒಳಗೆ ನಿರ್ಧರಿಸುವಂತೆ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಸದರಿ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಗಳಿದ್ದರೂ ಎಸಿಬಿ ತನಿಖೆ ಪೂರ್ಣಗೊಳಿಸಿಲ್ಲ ಎಂದು ಚೆನ್ನೈ ಮೂಲದ ಶಿಕ್ಷಣ ತಜ್ಞೆ ಕೆ ಎಸ್‌ ಗೀತಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

ಜುಲೈ 15ರಂದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಎಸಿಬಿ ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಒಂದು ತಿಂಗಳ ಒಳಗೆ ಕ್ರಮಕೈಗೊಳ್ಳುವಂತೆ ವಿಭಾಗೀಯ ಪೀಠವು ಸರ್ಕಾರಕ್ಕೆ ಆದೇಶ ಮಾಡಿದೆ.

ಎಸಿಬಿ ಪರ ವಕೀಲರು “ತನಿಖೆ ಪೂರ್ಣಗೊಳಿಸಿದ ಬಳಿಕ ಶಶಿಕಲಾ ಅವರಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಿದ ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಸಕ್ಷಮ ಪ್ರಾಧಿಕಾರದ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ” ಎಂದು ತಿಳಿಸಿದರು.

ಕಾನೂನು ಕ್ರಮಕೈಗೊಳ್ಳುವುದು ತಡವಾಗಿದೆ ಎಂಬ ವಿಚಾರ ತಿಳಿದ ತಕ್ಷಣ ಕೆಂಡಾಮಂಡಲವಾದ ಪೀಠವು , “ಅಕ್ಟೋಬರ್‌ 8ರ ಒಳಗೆ ಕಾನೂನು ಕ್ರಮಕೈಗೊಳ್ಳದಿದ್ದರೆ ಗೃಹ ಇಲಾಖೆಯ ಕಾರ್ಯದರ್ಶಿ ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಕಠಿಣವಾಗಿ ಹೇಳಿತು.

“ತಪ್ಪಿತಸ್ಥ ಅಧಿಕಾರಿಗಳು ಬೆಂಗಳೂರಿನಲ್ಲೇ ನೆಲೆಸಿರುವಾಗ ಎರಡು ತಿಂಗಳಾದರೂ ಅವರ ವಿರುದ್ಧ ಕ್ರಮಕೈಗೊಳ್ಳದಿರುವುದು ನಮಗೆ ಅರ್ಥವಾಗುತ್ತಿಲ್ಲ. ಕ್ರಮಕೈಗೊಳ್ಳುವ ಸಂಬಂಧ ಇಚ್ಛೆಯಿದ್ದರೆ ಅಗತ್ಯವಾದ ಆದೇಶವನ್ನು ಒಂದೇ ದಿನದಲ್ಲಿ ಪಡೆದುಕೊಳ್ಳಬಹುದಾಗಿದೆ” ಎಂದು ಪೀಠವು ಅನಗತ್ಯ ವಿಳಂಬದೆಡೆಗೆ ಬೆರಳು ಮಾಡಿತು.

Also Read
ಶಶಿಕಲಾ ಐಷಾರಾಮಿ ಸೆರೆವಾಸ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಎಸಿಬಿಗೆ ಹೈಕೋರ್ಟ್‌ ನಿರ್ದೇಶನ

ಜೈಲಿನಲ್ಲಿ ಶಶಿಕಲಾ ಅವರಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಲು ಅಪಾರ ಪ್ರಮಾಣದಲ್ಲಿ ಲಂಚ ಪಡೆಯಲಾಗಿದೆ ಎಂಬ ಮಾತು ಜೈಲಿನಲ್ಲಿ ಕೇಳಿಬಂದಿದೆ ಎಂದು ಅಂದಿನ ಬಂಧೀಖಾನೆ ಇಲಾಖೆಯ ಉಪ ಪೊಲೀಸ್‌ ಮಹಾನಿರ್ದೇಶಕಿ ಡಿ ರೂಪಾ 2017ರಲ್ಲಿ ಆರೋಪಿಸಿದ್ದರು.

ಈ ಆರೋಪದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ವಿನಯ್‌ ಕುಮಾರ್‌ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನು ತನಿಖೆಗಾಗಿ ಎಸಿಬಿಗೆ ವರ್ಗಾಯಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com