
ಗುವಾಹಟಿ ಮೂಲದ ಕಂಪೆನಿ ಮಾರಾಟ ಮಾಡುವ XSS ಪಾನೀಯಗಳು ಹಣ್ಣಿನ ತಿರುಳು ಅಥವಾ ಹಣ್ಣಿನ ರಸ ಆಧಾರಿತ ಪಾನಿಯ ವರ್ಗಕ್ಕೆ ಸೇರಲಿದ್ದು ಅವು ಅನಿಲ ಭರಿತ ಪಾನೀಯಕ್ಕೆ ವಿಧಿಸುವ ಶೇ 28ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಬಾರದೆ ಶೇ 12ರಷ್ಟು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ ಎಂದು ಗುವಾಹಟಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ಹಣ್ಣಿನ ಪಾನೀಯದಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಹಣ್ಣಿನ ಅಂಶವಿದ್ದಾಗ ಕಾರ್ಬೊನೇಟೆಡ್ ಜಲ ಇದ್ದ ಮಾತ್ರಕ್ಕೆ ಅದನ್ನು ಅನಿಲೀಕೃತ ಪಾನೀಯ (ಏರೇಟೆಡ್ ವಾಟರ್) ಎಂದು ಕರೆಯಲಾಗದು ಎಂಬುದಾಗಿ ನ್ಯಾ. ಸೌಮಿತ್ರ ಸೈಕಿಯಾ ಅವರು ತರ್ಕಿಸಿದರು.
ಶೇಕಡಾ 12ರಷ್ಟು ಮಾತ್ರವೇ ಜಿಎಸ್‌ಟಿ ವಿಧಿಸುವಂತೆ ಮಾಡುವುದಕ್ಕಾಗಿ ತನ್ನ ಕಾರ್ಬೊನೇಟ್‌ಯುಕ್ತ (ಫಿಜ್ಜಿ) ಪಾನೀಯಗಳನ್ನು ಹಣ್ಣಿನ ತಿರುಳು ಅಥವಾ ಹಣಿನ ರಸ ಆಧಾರಿತ ಪಾನೀಯಗಳು ಎಂಬುದಾಗಿ ಸುಳ್ಳೇ ವರ್ಗೀಕರಿಸಲಾಗಿದೆ ಎಂದು ತಿಳಿಸಿದ್ದ ಕಂದಾಯ ಇಲಾಖೆ, ಎಕ್ಸ್‌ಎಸ್‌ಎಸ್ ಬಿವರೇಜಸ್ ವಿರುದ್ಧ ಕ್ರಮ ಕೈಗೊಂಡಿತ್ತು.
ಎಕ್ಸ್‌ಎಕ್ಸ್‌ಎಸ್ ರೀತಿಯ ಕಾರ್ಬೊನೇಟೆಡ್ ಪಾನೀಯಗಳಿಗೆ ಶೇಕಡಾ 28ರಷ್ಟು ಜಿಎಸ್‌ಟಿ ವಿಧಿಸಲು ಸಾಧ್ಯವಾಗುವ ಅನಿಲೀಕೃತ ಪಾನೀಯ ವರ್ಗದಡಿ ತೆರಿಗೆ ವಿಧಿಸಬೇಕೆಂದು ಕಂದಾಯ ಇಲಾಖೆ ವಾದಿಸಿತ್ತು.
ಆದರೆ ಇದನ್ನು ಒಪ್ಪದ ನ್ಯಾ. ಸೈಕಿಯಾ, ಅರ್ಜಿದಾರರು ಉತ್ಪಾದಿಸುವ ಪಾನೀಯಗಳಲ್ಲಿ ಹಣ್ಣಿನ ರಸದ ಅಂಶ ಶೇ 10ಕ್ಕಿಂತ ಹೆಚ್ಚು ಇದ್ದು 2011ರ ಆಹಾರ ಸುರಕ್ಷತೆ ಮತ್ತು ಮಾನದಂಡ (ಆಹಾರ ಉತ್ಪನ್ನಗಳ ಮಾನದಂಡಗಳು ಮತ್ತು ಆಹಾರ ಸೇರ್ಪಡೆಗಳು) ನಿಯಮಾವಳಿ ಪ್ರಕಾರ ಇದನ್ನು ಹಣ್ಣು ಆಧಾರಿತ ಪಾನೀಯ ಎಂದು ವರ್ಗೀಕರಿಸಬಹುದು ಎಂದರು.
ಹಣ್ಣಿನ ರಸದ ಅಂಶ ಈ ಪಾನೀಯಗಳಿಗೆ ಫಲ ಆಧಾರಿತ ಪಾನೀಯದ ಗುಣವನ್ನು ನೀಡಿದ್ದು, ಇವು ಅನಿಲೀಕೃತ ಪಾನೀಯಕ್ಕಿಂತ ಭಿನ್ನವಾಗಿವೆ ಎಂದು ಅವರು ಹೇಳಿದರು. ಪಾರ್ಲೆ ಆಗ್ರೋ ಪ್ರೈವೇಟ್ ಲಿಮಿಟೆಡ್ ಮತ್ತು ವಾಣಿಜ್ಯ ತೆರಿಗೆ ಆಯುಕ್ತರು ನಡುವಣ ಪ್ರಕರಣ ರೀತಿಯ ದಾವೆಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನೂ ನ್ಯಾಯಾಲಯ ಪ್ರಸ್ತಾಪಿಸಿತು. ಈ ಪ್ರಕರಣಗಳ ತೀರ್ಪಿನಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹಣ್ಣಿನ ರಸ ಹೊಂದಿರುವ ಪಾನೀಯಗಳು ಕಾರ್ಬೊನೇಟಡ್ ಪಾನೀಯವಾಗಿದ್ದರೂ ಕೂಡ ಹಣ್ಣಿನ ರಸ ಆಧಾರಿತ ಪಾನೀಯಗಳ ವರ್ಗಕ್ಕೇ ಸೇರುತ್ತವೆ ಎಂದು ತಿಳಿಸಲಾಗಿತ್ತು.
XSS ಪಾನೀಯಗಳು ತಮ್ಮ ಉತ್ಪನ್ನಗಳ ಸ್ವರೂಪವನ್ನು ನಿರ್ಧರಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರದ (FSSAI) ಪ್ರಯೋಗಾಲಯ ಪರೀಕ್ಷೆಗಳು ಅಥವಾ ಮಾನದಂಡಗಳನ್ನು ಅವಲಂಬಿಸಲು ಸಾಧ್ಯವಿಲ್ಲ ಎಂಬ ಕಂದಾಯ ಇಲಾಖೆಯ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿತು. ಜಿಎಸ್‌ಟಿ ಅಡಿಯಲ್ಲಿ ಉತ್ಪನ್ನದ ವರ್ಗೀಕರಣ ನಿರ್ಧರಿಸುವಲ್ಲಿ ಅಂತಹ ಪರೀಕ್ಷೆಗಳು ಮಾನ್ಯವಾಗಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.