ತಜ್ಞರ ಪ್ರಕಾರ ಕೋವಿಡ್ ಮೂರನೇ ಅಲೆ ದೇಶವನ್ನು ಅಪ್ಪಳಿಸಲಿದ್ದು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಆತಂಕ ವ್ಯಕ್ತಪಡಿಸಿದೆ.
ವ್ಯಕ್ತಿಗಳಿಗೆ ಲಸಿಕೆ ಹಾಕಲು ವೈಜ್ಞಾನಿಕ ಯೋಜನೆ ಅಗತ್ಯವಿದ್ದು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಂಡರೆ, ಮೂರನೇ ಅಲೆಯನ್ನು ನಾವು ನಿಭಾಯಿಸಬಹುದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಹೇಳಿದೆ.
"ತಜ್ಞರ ಪ್ರಕಾರ ಭಾರತದಲ್ಲಿ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಗು ಆಸ್ಪತ್ರೆಗೆ ಹೋದಾಗ, ತಾಯಿ ಮತ್ತು ತಂದೆ ಕೂಡ ಹೋಗಬೇಕಾಗುತ್ತದೆ. ಅದಕ್ಕಾಗಿಯೇ ಈ ಗುಂಪಿನ ಜನರಿಗೆ ಲಸಿಕೆ ಹಾಕಬೇಕಿದೆ. ನಾವು ಇದನ್ನು ವೈಜ್ಞಾನಿಕ ರೀತಿಯಲ್ಲಿ ಆಲೋಚಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಇಂದಿನಿಂದಲೇ ಪ್ರಯತ್ನ ಆರಂಭಿಸಿದರೆ ನಾವು ಅದನ್ನು ನಿಭಾಯಿಸಬಹುದು ಎಂದಿರುವ ಪೀಠ ಎಂಬಿಬಿಎಸ್ ಪೂರ್ಣಗೊಳಿಸಿದ ಮತ್ತು ಪಿಜಿ ಕೋರ್ಸ್‌ಗಳಿಗೆ ದಾಖಲಾಗಲು ಕಾಯುತ್ತಿರುವ 1.5 ಲಕ್ಷ ವೈದ್ಯರು ಹಾಗೂ 2.5 ಲಕ್ಷ ದಾದಿಯರ ಸೇವೆಗಳನ್ನು ಬಳಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತು. ಅವರ ಸೇವೆ ಮೂರನೇ ಅಲೆ ವೇಳೆಗೆ ನಿರ್ಣಾಯಕ ಎಂದು ಅದು ಹೇಳಿದೆ.
"ಇಂದು 1.5 ಲಕ್ಷ ವೈದ್ಯರು ನಮ್ಮಲ್ಲಿದ್ದಾರೆ, ಅವರು ವೈದ್ಯಕೀಯ ಕೋರ್ಸ್ ಮುಗಿಸಿದ್ದಾರೆ. ಆದರೆ ನೀಟ್ ಪರೀಕ್ಷೆ ಎದುರು ನೋಡುತ್ತಿದ್ದಾರೆ. ನೀವು ಅವರನ್ನು ಹೇಗೆ ಬಳಸಿಕೊಳ್ಳುತ್ತೀರಿ?" ಎಂದು ನ್ಯಾಯಾಲಯ ಕೇಳಿದೆ.
ವೈದ್ಯಕೀಯ ಕೋರ್ಸ್ ಮುಗಿಸಿರುವ 1.5 ಲಕ್ಷ ವೈದ್ಯರು ನಮ್ಮಲ್ಲಿದ್ದಾರೆ. ಅವರು ನೀಟ್ ಪರೀಕ್ಷೆ ಎದುರು ನೋಡುತ್ತಿದ್ದಾರೆ. ನೀವು ಅವರನ್ನು ಹೇಗೆ ಬಳಸಿಕೊಳ್ಳುತ್ತೀರಿ? 1.5 ಲಕ್ಷ ಡಾಕ್ಟರ್‌ಗಳು ಹಾಗೂ 2.5 ಲಕ್ಷ ದಾದಿಯರು ಮನೆಯಲ್ಲಿ ಕೂತಿದ್ದಾರೆ. ಮೂರನೇ ಅಲೆ ಸಂದರ್ಭದಲ್ಲಿ ಅವರು ಬಹುಮುಖ್ಯ.
- ನ್ಯಾ. ಡಿ ವೈ ಚಂದ್ರಚೂಡ್
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದೆಹಲಿಗೆ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಗುರುವಾರ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ನ್ಯಾಯಾಂಗ ನಿಂದನೆ ನೋಟಿಸ್ ಗೆ ಬುಧವಾರ ತಡೆ ನೀಡಿದ್ದ ಸುಪ್ರೀಂಕೋರ್ಟ್ ಗುರುವಾರ ಬೆಳಿಗ್ಗೆ 10.30 ರೊಳಗೆ 700 ಮೆ.ಟನ್ ಆಕ್ಸಿಜನ್ ಪೂರೈಸುವ ಯೋಜನೆಯನ್ನು ಮಂಡಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ವಿವರವಾದ ಯೋಜನೆಯನ್ನು ಸಲ್ಲಿಸಿತು.
ಗುರುವಾರ 730 ಮೆಟ್ರಿಕ್ ಟನ್ ಆಮ್ಲಜನಕವನ್ನು ದೆಹಲಿಗೆ ತಲುಪಿಸಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ದೆಹಲಿಗೆ ಆಮ್ಲಜನಕ ಒದಗಿಸುವ ಕುರಿತು ಕೇಂದ್ರದ ಸೂತ್ರವನ್ನು ಪರಾಮರ್ಶಿಸಿದ ನ್ಯಾಯಾಲಯ ಇದು ಕೇವಲ ಐಸಿಯು ಹಾಸಿಗೆ ಮತ್ತು ಆಸ್ಪತ್ರೆಗೆ ಮಾತ್ರ ಕೈಗೊಂಡ ಯೋಜನೆಯಾಗಿದ್ದು ಮನೆಯಲ್ಲೇ ಪ್ರಾಣವಾಯು ಅಗತ್ಯ ಇರುವ ರೋಗಿಗಳಿಗೆ ಹಾಗೂ ಆಂಬುಲೆನ್ಸ್‌ಗಳಿಗೆ ಬೇಕಾದ ಆಮ್ಲಜನಕ ಪೂರೈಕೆಯ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ ಸೂತ್ರವನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ ಎಂದಿತು. ಆಮ್ಲಜನಕವನ್ನು ಕೇವಲ ರಾಜ್ಯಗಳಿಗೆ ಹಂಚಿಕೆ ಮಾಡುವುದಷ್ಟೇ ಅಲ್ಲ ಅದು ಆಸ್ಪತ್ರೆಗಳನ್ನು ತಲುಪಿದೆಯೇ ಎಂಬುದರ ಬಗ್ಗೆಯೂ ನಿಗಾವಹಿಸಬೇಕು ಎಂದು ಅದು ಹೇಳಿದೆ.