ಕ್ಷುಲ್ಲಕ ಟ್ವೀಟ್‌ಗಾಗಿ ಸಿಎಂ ವೈಯಕ್ತಿಕವಾಗಿ ಟ್ವಿಟರ್ ನಿಭಾಯಿಸುತ್ತಾರೆ ಎಂಬ ಕಲ್ಪನೆ ಅಸಂಬದ್ಧ: ತೆಲಂಗಾಣ ಹೈಕೋರ್ಟ್

ತಪ್ಪು ಮಾಹಿತಿ ಪ್ರಸಾರ ಮಾಡಿದ ಸಿಎಂ ರೆಡ್ಡಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
Revanth Reddy with Telangana High Courtfacebook
Revanth Reddy with Telangana High Courtfacebook
Published on

ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯದ 2023ನೇ ಸಾಲಿನ ಹಾಸ್ಟೆಲ್‌ ಮತ್ತು ಮೆಸ್‌ಗಳನ್ನು ಮುಚ್ಚುವ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಕಲಿ ನೋಟಿಸ್‌ ಪ್ರಕಟಿಸಿದ್ದ ಆರೋಪ ಕುರಿತಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಪೊಲೀಸರಿಗೆ ನಿರ್ದೇಶನ ನೀಡಲು ಅಲ್ಲಿನ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ [ಚಟಾರಿ ದಶರಥ್ ಮತ್ತು ತೆಲಂಗಾಣ ಸರ್ಕಾರ ನಡುವಣ ಪ್ರಕರಣ].

"ರಾಜ್ಯದ ಮುಖ್ಯಮಂತ್ರಿಯೊಬ್ಬರು ಕ್ಷುಲ್ಲಕ ಮತ್ತು ಪ್ರಾಸಂಗಿಕ ಟ್ವೀಟ್‌ ಮಾಡುವುದಕ್ಕಾಗಿ ವೈಯಕ್ತಿಕವಾಗಿ ಟ್ವಿಟರ್ ನಿರ್ವಹಿಸುತ್ತಾರೆ ಎಂದು ಊಹಿಸುವುದು ಅಸಂಬದ್ಧವಾಗುತ್ತದೆ" ಎಂಬುದಾಗಿ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಹೇಳಿದರು.

ರೆಡ್ಡಿ ಪ್ರಕಟಿಸಿದ್ದಾರೆ ಎನ್ನಲಾದ ನೋಟಿಸ್ ಅನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದ ನಗರ ಪೊಲೀಸ್ ಠಾಣಾಧಿಕಾರಿಗೆ ಹಾಸ್ಟೆಲ್‌ ಮತ್ತು ಮೆಸ್‌ಗಳ ಮುಖ್ಯ ವಾರ್ಡನ್‌ ಅವರು ರವಾನಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ತಮ್ಮ ದೂರು ಆಧರಿಸಿ ರೆಡ್ಡಿ ಅವರ ವಿರುದ್ಧ  ಎಫ್‌ಐಆರ್ ದಾಖಲಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಆರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಹಾಸ್ಟೆಲ್‌ಗಳಲ್ಲಿ ನೀರು ಮತ್ತು ವಿದ್ಯುತ್ ಕೊರತೆಯ ವಿರುದ್ಧ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಏಪ್ರಿಲ್‌ನಲ್ಲಿ ಪ್ರತಿಭಟನೆ ನಡೆಸಿದ್ದರು ಎಂದು ಹೇಳಲಾಗಿದೆ. ಬಳಿಕ ಬೇಸಿಗೆ ರಜೆ ಇರುವುದರಿಂದ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಅನುಗುಣವಾಗಿ ಮೇ 1ರಿಂದ 31ರವರೆಗೆ ಹಾಸ್ಟೆಲ್‌ ಮತ್ತು ಮೆಸ್‌ ಮುಚ್ಚುವುದಾಗಿ ಮುಖ್ಯ ವಾರ್ಡನ್ ಘೋಷಿಸಿದ್ದರು. ಮುಖ್ಯ ವಾರ್ಡನ್ ಹೊರಡಿಸಿರುವ ಸುತ್ತೋಲೆಯಲ್ಲಿ ಹಾಸ್ಟೆಲ್‌ಗಳಲ್ಲಿ ನೀರು ಮತ್ತು ವಿದ್ಯುತ್ ಕೊರತೆ ಬಗ್ಗೆ ಪ್ರಸ್ತಾಪಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ತಪ್ಪು ದಾರಿಗೆಳೆಯುವ ಮಾಹಿತಿ ಪ್ರಸಾರ ಮಾಡುವ ಮೂಲಕ ವಿಶ್ವವಿದ್ಯಾಲಯದಲ್ಲಿ ಅನಗತ್ಯ ಗೊಂದಲ ಉಂಟು ಮಾಡಿದ್ದಕ್ಕಾಗಿ ಮುಖ್ಯ ವಾರ್ಡನ್‌ಗೆ ಶೋಕಾಸ್ ನೋಟಿಸ್ ನೀಡುವಂತೆ ಸಿಎಂ ರೆಡ್ಡಿ ಉಸ್ಮಾನಿಯಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ನಂತರ, ಸಿಎಂ ರೆಡ್ಡಿ ಅವರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳು ಮತ್ತು ಮೆಸ್‌ಗಳಲ್ಲಿ ನೀರು ಮತ್ತು ವಿದ್ಯುತ್ ಕೊರತೆಯ ಬಗ್ಗೆ 2023ರ ಇದೇ ನೋಟಿಸನ್ನು ಹಂಚಿಕೊಂಡರು. ಆ ಸಮಯದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧಿಕಾರದಲ್ಲಿತ್ತು. 

ಸಿಎಂ ಪ್ರಕಟಿಸಿರುವ ನೋಟಿಸ್‌ ನಿಜವಲ್ಲ. ಅದು ಮೇ 2023ರ ಮೂಲ ನೋಟಿಸ್‌ ಎಂದು ಬಿಆರ್‌ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ಕ್ರಿಶಾಂಕ್ ಮನ್ನೆ ಅವರು ಪ್ರತಿಕ್ರಿಯಿಸಿದ್ದರು.

ಮನೆ ಅವರು ಪ್ರಕಟಿಸಿರುವುದು ನಕಲಿ ನೋಟಿಸ್‌ ಎಂದು ಆರೋಪಿಸಿ ಮುಖ್ಯ ವಾರ್ಡನ್ ಪೊಲೀಸರಿಗೆ ದೂರು ನೀಡಿದ್ದರು. ನಂತರ ಮನ್ನೆ ಅವರನ್ನು ಬಂಧಿಸಲಾಗಿತ್ತು. ಅವರೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಮನ್ನೆ ಅವರು ಪ್ರಕಟಿಸಿದ ನೋಟಿಸ್‌ನಲ್ಲಿ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಪ್ರಸ್ತಾಪಿಸಿರುವುದನ್ನು ಕೈಬಿಡಲಾಗಿದೆ ಎಂದು ಆರೋಪಿಸಲಾಗಿತ್ತು.

ಮನ್ನೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬುದು ಅರಿವಿದ್ದೂ ಅರ್ಜಿದಾರರು ಸಿಎಂ ಅವರ ವಿರುದ್ಧ ಆಧಾರ ರಹಿತ ದೂರು ದಾಖಲಿಸಿದ್ದಾರೆ ಎಂದು ಹೈಕೋರ್ಟ್‌ಗೆ ಸರ್ಕಾರ ತಿಳಿಸಿತು.

ಸಿಎಂ ರೆಡ್ಡಿ ಅವರು ಪ್ರಕಟಿಸಿದ್ದಾರೆನ್ನಲಾದ ನೋಟಿಸ್‌ ಅವರ ಕಚೇರಿಯಿಂದ ಬಂದದ್ದಾಗಿರದೆ ಮುಖ್ಯ ವಾರ್ಡನ್ ಅವರು ಪೊಲೀಸರಿಗೆ ರವಾನಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ವಾದ ಆಲಿಸಿದ ನ್ಯಾಯಾಲಯ,  ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿರುವುದರಿಂದ, ದಾಖಲೆಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತನಿಖಾಧಿಕಾರಿ ಪತ್ತೆಹಚ್ಚಬೇಕು ಎಂದು ಹೇಳಿದೆ.

ರಿಟ್‌ ಅರ್ಜಿ ತಪ್ಪು ಗ್ರಹಿಕೆಯಿಂದ ಕೂಡಿದ್ದು ಅದನ್ನು ವಜಾಗೊಳಿಸಲಾಗಿದೆ. ಆದರೂ ಕಾನೂನಿನಡಿ ಲಭ್ಯವಿರುವ ಸೂಕ್ತ ಪರಿಹಾರ ಪಡೆಯಲು ಅರ್ಜಿದಾರರು ಸದಾ ಸ್ವತಂತ್ರರು ಎಂದು ನ್ಯಾಯಾಲಯ ನುಡಿದಿದೆ.

Kannada Bar & Bench
kannada.barandbench.com