ವಿಮಾನ ನಿಲ್ದಾಣದಲ್ಲಿ ರನ್ಯಾ ಬಂಧನದ ವಿಡಿಯೋ ತುಣುಕು ಸಂಗ್ರಹಕ್ಕೆ ಕೋರಿಕೆ: ಕೇಂದ್ರ, ಡಿಆರ್‌ಐಗೆ ಹೈಕೋರ್ಟ್‌ ನೋಟಿಸ್‌

ಮೂವತ್ತು ದಿನಗಳಾದ ತಕ್ಷಣ ಸ್ವಯಂಚಾಲಿತವಾಗಿ ವಿಮಾನ ನಿಲ್ದಾಣದ ದತ್ತಾಂಶ ಡಿಲೀಟ್‌ ಆಗುತ್ತದೆ. ರನ್ಯಾ ಬಂಧನವಾಗಿ ನಾಳೆಗೆ 30 ದಿನಗಳಾಗಲಿದ್ದು, ಅದಕ್ಕೂ ಮುನ್ನ ಸಿಸಿಟಿವಿ ದತ್ತಾಂಶ ಸಂಗ್ರಹಿಸಲು ಆದೇಶಿಸಬೇಕು ಎಂದು ಕೋರಲಾಗಿದೆ.
Ranya Rao and Karnataka High Court
Ranya Rao and Karnataka High Court
Published on

ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ನಟಿ ರನ್ಯಾ ಅಲಿಯಾಸ್‌ ಹರ್ಷವರ್ಧಿನಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ವಶಕ್ಕೆ ಪಡೆದ ಮಾರ್ಚ್‌ 3ರಿಂದ ಮಾರ್ಚ್‌ 4ರ ಬೆಳಿಗಿನ ಜಾವದಲ್ಲಿನ ಸಿಸಿಟಿವಿ ತುಣುಕುಗಳನ್ನು ಸಂಗ್ರಹಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಕೇಂದ್ರ ಸರ್ಕಾರ ಹಾಗೂ ಡಿಆರ್‌ಐಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ನಟಿ ರನ್ಯಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಿರಣ್‌ ಜವಳಿ ಅವರು “ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ ದಿನದ ಸಿಸಿಟಿವಿ ತುಣುಕನ್ನು ಸಂಗ್ರಹಿಸಿಡಲು ಸಂಬಂಧಿಸಿದವರಿಗೆ ನಿರ್ದೇಶಿಸಬೇಕು. 30 ದಿನಗಳಾದ ತಕ್ಷಣ ಸ್ವಯಂಚಾಲಿತವಾಗಿ ವಿಮಾನ ನಿಲ್ದಾಣದ ದತ್ತಾಂಶ ಡಿಲೀಟ್‌ ಆಗುತ್ತದೆ. ರನ್ಯಾ ಬಂಧನವಾಗಿ ನಾಳೆಗೆ 30 ದಿನಗಳಾಗಲಿದ್ದು, ಅದಕ್ಕೂ ಮುನ್ನ ಸಿಸಿಟಿವಿ ದತ್ತಾಂಶ ಸಂಗ್ರಹಿಸಲು ಆದೇಶಿಸಬೇಕು” ಎಂದು ಕೋರಿದರು.

ಇದನ್ನು ಆಲಿಸಿದ ಪೀಠವು ಪ್ರತಿವಾದಿಗಳಾದ ಕೆಐಎಎಲ್‌, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕಸ್ಟಮ್ಸ್‌ ಇಲಾಖೆಯ ಪರವಾಗಿ ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌, ಡಿಆರ್‌ಐ ಪರವಾಗಿ ಮಧು ಎನ್.‌ ರಾವ್‌ಗೆ ನೋಟಿಸ್‌ ಜಾರಿ ಮಾಡಿತು.

ಬುಧವಾರ ಸಂಜೆಗೆ ದತ್ತಾಂಶ ಡಿಲೀಟ್‌ ಆಗಲಿದ್ದು, ಬೆಳಗ್ಗೆ ಆದೇಶ ಮಾಡಲಾಗುವುದು ಎಂದು ವಿಚಾರಣೆಯನ್ನು ನಾಳೆಗೆ (ಏ.2) ನ್ಯಾಯಾಲಯ ಮುಂದೂಡಿತು.

Also Read
ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಜಾಮೀನು ನಿರಾಕರಿಸಿದ ಬೆಂಗಳೂರಿನ ಸತ್ರ ನ್ಯಾಯಾಲಯ

ಮಾರ್ಚ್‌ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್‌ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾಳನ್ನುಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲವನ್ನು (ಹ್ಯಾಂಡ್‌ ಬ್ಯಾಗ್)‌ ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು.

ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ಹಾಗೂ ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್‌ ಅಡ್ಹೆಸೀವ್‌ ಬ್ಯಾಂಡೇಜ್‌ ಬಳಿ ಅಂಟಿಸಿರುವುದು ಪತ್ತೆಯಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್‌ ಕಾಯಿದೆ 1962ರ ಸೆಕ್ಷನ್‌ 135(1)(i) ಅಡಿ ರನ್ಯಾಳನ್ನು ಬಂಧಿಸಿದ್ದರು.

ಮಾರ್ಚ್‌ 14ರಂದು ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯ ಮತ್ತು ಮಾರ್ಚ್‌27ರಂದು ಬೆಂಗಳೂರಿನ ಸತ್ರ ನ್ಯಾಯಾಲಯವು ರನ್ಯಾಗೆ ಜಾಮೀನು ನಿರಾಕರಿಸಿದ್ದವು. ಸದ್ಯ ರನ್ಯಾ ನ್ಯಾಯಾಂಗ ಬಂಧನದಲ್ಲಿದ್ದಾರೆ.

Kannada Bar & Bench
kannada.barandbench.com