ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ (ನೇಮಕಾತಿ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ- 2023ಕ್ಕೆ ಗುರುವಾರ ಭಾರತದ ರಾಷ್ಟ್ರಪತಿಗಳ ಅಂಕಿತ ಪಡೆಯಲಾಗಿದೆ.
ಮಸೂದೆಯನ್ನು ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಮಂಡಿಸಿದ್ದರು.
ರಾಜ್ಯಸಭೆ ಮಸೂದೆಗೆ ಡಿಸೆಂಬರ್ 12 ರಂದು ಅಂಗೀಕಾರ ನೀಡಿದ್ದರೆ ಡಿಸೆಂಬರ್ 21ರಂದು ಲೋಕಸಭೆ ಅಂಗೀಕರಿಸಿತ್ತು.
ಸಿಇಸಿ ಮತ್ತು ಚುನಾವಣಾ ಆಯುಕ್ತರನ್ನು (ಇಸಿ) ನೇಮಕ ಮಾಡುವ ಆಯ್ಕೆ ಸಮಿತಿಗೆ ಪ್ರಧಾನಿ (ಪಿಎಂ) ಅಧ್ಯಕ್ಷರಾಗಿದ್ದು ಕೇಂದ್ರ ಕ್ಯಾಬಿನೆಟ್ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರು ಸದಸ್ಯರಾಗಿ ಇರುತ್ತಾರೆ ಎಂದು ಮಸೂದೆ ಸೂಚಿಸುತ್ತದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ಮಸೂದೆ ಭಾರತದ ಚುನಾವಣಾ ಆಯೋಗದ (ಇಸಿಐ) ಸ್ವಾತಂತ್ರ್ಯವನ್ನು ಗಂಭೀರ ಅಪಾಯಕ್ಕೆ ದೂಡಬಹುದು ಎಂದು ಇತ್ತೀಚೆಗೆ ಆತಂಕವ್ಯಕ್ತಪಡಿಸಿದ್ದರು.
ಮಸೂದೆಯು ಕಾಯಿದೆಯಾದರೆ, ಸಿಇಸಿ ಮತ್ತು ಇಸಿಗಳನ್ನು ನೇಮಕ ಮಾಡುವಲ್ಲಿ ಕಾರ್ಯಾಂಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಇತ್ತೀಚೆಗೆ ತಿಳಿಸಿದ್ದರು.
"ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ಈ ರೀತಿ ನೇಮಿಸಲು ಹೊರಟರೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಮರೀಚಿಕೆಯಾಗಲಿವೆ" ಎಂದು ಅವರು ನುಡಿದಿದ್ದರು.
ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ನೇಮಕಾತಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಕಾಯಿದೆ ತರುವವರೆಗೆ, ಅಂತಹ ನೇಮಕಾತಿಗಳನ್ನು ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಮಾಡಬೇಕು ಎಂದು ಮಾರ್ಚ್ 2, 2023ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಹೇಳಲಾಗಿತ್ತು.
ಚುನಾವಣಾ ಆಯೋಗಕ್ಕೆ ಶಾಶ್ವತ ಸಚಿವಾಲಯ ಸ್ಥಾಪಿಸುವ ಬಗ್ಗೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಸಾಂವಿಧಾನಿಕ ಪೀಠ ಸೂಚಿಸಿತ್ತು. ಚುನಾವಣಾ ಆಯೋಗ ನಿಜವಾಗಿಯೂ ಸ್ವತಂತ್ರವಾಗಿರಬೇಕಾದರೆ ಅದಕ್ಕೆ ತಗಲುವ ವೆಚ್ಚವನ್ನು ಭಾರತದ ಸಂಚಿತ ನಿಧಿಯಿಂದ ಭರಿಸಬೇಕೆಂದು ಸಹ ಸೂಚಿಸಲಾಗಿತ್ತು.
ನಿಯಮಗಳ ಪ್ರಕಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಒದಗಿಸದ ಚುನಾವಣಾ ಆಯೋಗ ಕಾನೂನು ಆಳ್ವಿಕೆಯ ಬುನಾದಿಯನ್ನು ಕಸಿದುಕೊಳ್ಳುತ್ತದೆ ಎಂದು ನ್ಯಾಯಾಲಯ ನುಡಿದಿತ್ತು.
[ಗೆಜೆಟ್ ಅಧಿಸೂಚನೆಯನ್ನು ಇಲ್ಲಿ ಓದಿ]