ಅಖಿಲ ಭಾರತ ನ್ಯಾಯಾಂಗ ಸೇವೆ ಪರೀಕ್ಷೆ ಪರ ಒಲವು ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ದೀನದಲಿತ ಹಿನ್ನೆಲೆಯ ಅಭ್ಯರ್ಥಿಗಳು ನ್ಯಾಯಾಂಗಕ್ಕೆ ಸೇರಲು ಅಖಿಲ ಭಾರತ ನ್ಯಾಯಾಂಗ ಪರೀಕ್ಷೆ ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಸಂವಿಧಾನ ದಿನ 2023
ರಾಷ್ಟ್ರಪತಿ ದ್ರೌಪದಿ ಮುರ್ಮು, ಸಂವಿಧಾನ ದಿನ 2023

ಅಖಿಲ ಭಾರತ ನ್ಯಾಯಾಂಗ ಸೇವೆ (ಎಐಜೆಎಸ್) ಪರೀಕ್ಷೆ ನಡೆಸುವ ಮೂಲಕ ದೇಶದೆಲ್ಲೆಡೆಯ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದ್ದಾರೆ.

ಸಂವಿಧಾನ ದಿನಾಚರಣೆ ಅಂಗವಾಗಿ ಭಾನುವಾರ ಸುಪ್ರೀಂ ಕೋರ್ಟ್‌ ಆವರಣದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು ದೀನದಲಿತ ಹಿನ್ನೆಲೆಯ ಅಭ್ಯರ್ಥಿಗಳು ನ್ಯಾಯಾಂಗಕ್ಕೆ ಸೇರಲು ಇಂತಹ ಕ್ರಮ ಸಹಾಯ ಮಾಡುತ್ತದೆ ಎಂದರು.

"ಇಂದು ಜಗತ್ತು ಭಾರತದ ಪ್ರಗತಿ ನೋಡಲು ಕಾಯುತ್ತಿದೆ. ದೀನದಲಿತ ವರ್ಗಗಳ ಮಕ್ಕಳು ನ್ಯಾಯಾಂಗಕ್ಕೆ ಸೇರಲು ನಾವು ಕೆಲ ಕ್ರಮ ತೆಗೆದುಕೊಳ್ಳಬೇಕು. ನ್ಯಾಯಾಧೀಶ ಹುದ್ದೆ ಆಕಾಂಕ್ಷಿಗಳನ್ನು ದೇಶದ ಪ್ರತಿಭಾನ್ವಿತ ಸಮುದಾಯದಿಂದ ಆಯ್ಕೆ ಮಾಡಬಹುದು. ನ್ಯಾಯ ವಿತರಣೆಯ ಈ ಅಂಶ ಬಲಪಡಿಸಲು ಕಾರ್ಯವಿಧಾನ ರೂಪಿಸುವ ವಿಚಾರವನ್ನು ನಿಮಗೆ ಬಿಡುತ್ತಿರುವೆ" ಎಂದು ಅವರು ಹೇಳಿದರು.

ವಿಶೇಷವೆಂದರೆ, ಭಾರತದ ಕಾನೂನು ಆಯೋಗ 1986ರಲ್ಲಿ ಬಿಡುಗಡೆ ಮಾಡಿದ ತನ್ನ 116 ನೇ ವರದಿಯಲ್ಲಿ ಎಐಜೆಎಸ್ ರಚನೆಗೆ ಶಿಫಾರಸು ಮಾಡಿತ್ತು. ಕಾನೂನು ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ "ತ್ವರಿತವಾಗಿ ಪರಿಶೀಲಿಸಿ ಸಾಧ್ಯವಾದಷ್ಟು ಬೇಗ ಜಾರಿಗೆ ತರಬೇಕು" ಎಂದು 1992ರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತು.

ಎಐಜೆಎಸ್ ರಚಿಸುವ ಪ್ರಸ್ತಾಪವು ಕೆಲವು ವರ್ಷಗಳಿಂದ ಚರ್ಚೆಯಲ್ಲಿದೆ. ಆದರೆ ಭಾಗೀದಾರರ ಭಿನ್ನಾಭಿಪ್ರಾಯಗಳಿಂದಾಗಿ ಇಲ್ಲಿಯವರೆಗೆ ಯಾವುದೇ ಗಮನಾರ್ಹ ಬೆಳವಣಿಗೆಗಳಾಗಿಲ್ಲ. ಈ ವಿಷಯದ ಬಗ್ಗೆ ತಾನು ಮತ್ತು ನ್ಯಾಯಾಂಗ ಬಿಕ್ಕಟ್ಟಿನಲ್ಲಿರುವುದಾಗಿ ಕೇಂದ್ರ ಸರ್ಕಾರ 2016ರಲ್ಲಿ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು . ಎಐಜೆಎಸ್ ರಚನೆಯ ಬಗ್ಗೆ ಕಾನೂನು ಸಚಿವಾಲಯ 2017ರ ಜನವರಿಯಲ್ಲಿ ಔಪಚಾರಿಕವಾಗಿ ಚರ್ಚಿಸಿತ್ತು.

ನ್ಯಾಯಾಧೀಶರ ನೇಮಕಾತಿಗಾಗಿ ಎಐಜೆಎಸ್ ರಚಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪುರಸ್ಕರಿಸಲು ಸುಪ್ರೀಂ ಕೋರ್ಟ್ 2018 ರಲ್ಲಿ ಒಪ್ಪಲಿಲ್ಲ. ಇದು "ನ್ಯಾಯಾಂಗ ಆದೇಶ"ದಿಂದ ಜಾರಿಗೆ ತರಬಹುದಾದ ವಿಷಯವಲ್ಲ ಎಂದು ಅದು ಆಗ ಅಭಿಪ್ರಾಯಪಟ್ಟಿತ್ತು.

ಅಂದಿನ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು 2021ರಲ್ಲಿ ನೀಡಿದ ಹೇಳಿಕೆಯ ಪ್ರಕಾರ, 8 ರಾಜ್ಯಗಳು ಮತ್ತು 13 ಹೈಕೋರ್ಟ್‌ಗಳು ಇದರ ಪರವಾಗಿ ಇರಲಿಲ್ಲ. ಆದರೆ ಕೇಂದ್ರ ಸರ್ಕಾರ "ಒಟ್ಟಾರೆ ನ್ಯಾಯ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಸೂಕ್ತರ ರೀತಿಯಲ್ಲಿ ರೂಪಿಸಲಾದ ಅಖಿಲ ಭಾರತ ನ್ಯಾಯಾಂಗ ಸೇವೆ ಮುಖ್ಯ" ಎಂದು ಅಭಿಪ್ರಾಯಪಟ್ಟಿತ್ತು.

ಸಂವಿಧಾನ ದಿನವಾದ ಇಂದು ರಾಷ್ಟ್ರಪತಿ ಮುರ್ಮು ಅವರು ಅಖಿಲ ಭಾರತ ನ್ಯಾಯಾಂಗ ಸೇವೆ ಪರೀಕ್ಷೆ ಪರ ಧ್ವನಿ ಎತ್ತಿದ್ದಾರೆ.

ಇದೇ ವೇಳೆ ಅವರು ಡಾ. ಬಿ ಆರ್.ಅಂಬೇಡ್ಕರ್ ಅವರ ಕೊಡುಗೆಗಳ ಕುರಿತಂತೆ ದೇಶದ ಯುವಕರು ಸಂವೇದನಾಶೀಲರಾದರೆ ಭಾರತದಲ್ಲಿ ವಸಾಹತು ವಿಮೋಚನೆಯ ಪ್ರಕ್ರಿಯೆಯನ್ನುಇನ್ನಷ್ಟು ತ್ವರಿತಗೊಳಿಸಬಹುದು ಎಂಬುದರ ಬಗ್ಗೆಯೂ ಅವರು ಮಾತನಾಡಿದರು.

ಸಿಜೆಐ ಡಿ ವೈ ಚಂದ್ರಚೂಡ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಕೇಂದ್ರ ಕಾನೂನು ರಾಜ್ಯ ಸಚಿವ ಅರ್ಜುನ್ ಮೇಘವಾಲ್ ಮತ್ತು ಎಸ್‌ಸಿಬಿಎ ಅಧ್ಯಕ್ಷ ಡಾ.ಆದಿಶ್ ಸಿ ಅಗರ್‌ವಾಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Related Stories

No stories found.
Kannada Bar & Bench
kannada.barandbench.com