ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆ- 2024 ಕ್ಕೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.
ಈ ಮೂಲಕ ಜನರ ಜೀವನ ನಿಯಂತ್ರಿಸುವ ಏಕರೂಪದ ಸಂಹಿತೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಉತ್ತರಾಖಂಡವಾಗಿದೆ.
ಮಸೂದೆಯನ್ನು ಈಗ ಕಾಯಿದೆಯಾಗಿ ಜಾರಿಗೆ ತರಲಾಗಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ಉತ್ತರಾಖಂಡ ವಿಧಾನಸಭೆಯಲ್ಲಿ ನಮ್ಮ ಸರ್ಕಾರ ಅಂಗೀಕರಿಸಿದ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮುಜೀ ಅವರು ಅನುಮೋದಿಸಿದ್ದಾರೆ ಎನ್ನುವುದು ರಾಜ್ಯದ ಎಲ್ಲಾ ಜನರಿಗೆ ಬಹಳ ಸಂತೋಷ ಮತ್ತು ಹೆಮ್ಮೆಯ ಕ್ಷಣವಾಗಿದೆ. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾಯಿದೆಯನ್ನು ಕರಾರುವಕ್ಕಾಗಿ ಜಾರಿಗೆ ತರುವುದರೊಂದಿಗೆ, ಎಲ್ಲಾ ನಾಗರಿಕರಿಗೆ ಸಮಾನ ಹಕ್ಕು ಒದಗಿಸುವುದರ ಜೊತೆಗೆ, ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ಸಹ ನಿಗ್ರಹಿಸಲಾಗುವುದು. ರಾಜ್ಯದಲ್ಲಿ ಸಾಮಾಜಿಕ ಸಮಾನತೆಯ ಮಹತ್ವವನ್ನು ಸಾಬೀತುಪಡಿಸುವ ಮೂಲಕ ಸಾಮರಸ್ಯವನ್ನು ಉತ್ತೇಜಿಸುವಲ್ಲಿ #UniformCivilCode (ಏಕರೂಪ ನಾಗರಿಕ ಸಂಹಿತೆ) ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಟ್ವೀಟ್ ಮಾಡಲಾಗಿದೆ.
ಯುಸಿಸಿ ಅಂತಿಮ ವರದಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐದು ಸದಸ್ಯರ ಸಮಿತಿ ಫೆಬ್ರವರಿ 2ರಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಹಸ್ತಾಂತರಿಸಿತ್ತು. ಫೆಬ್ರವರಿ 7ರಂದು ವಿಧಾನಸಭೆ ಮಸೂದೆಯನ್ನು ಅಂಗೀಕರಿಸಿತ್ತು.
ಮಸೂದೆಯಲ್ಲಿ ಏಳು ಪರಿಚ್ಛೇದಗಳಿದ್ದು 392 ಸೆಕ್ಷನ್‌ಗಳನ್ನು ಪರಿಚಯಿಸಲಾಗಿದೆ. ತಜ್ಞರ ಸಮಿತಿ ನಾಲ್ಕು ಸಂಪುಟಗಳಲ್ಲಿ ರೂಪಿಸಿದ್ದ 750 ಪುಟಗಳ ಕರಡು ಮಸೂದೆಯನ್ನು ಆಧರಿಸಿ ಈ ಮಸೂದೆ ರೂಪಿಸಲಾಗಿತ್ತು.
ವಿವಿಧ ಧಾರ್ಮಿಕ ಕಟ್ಟುಪಾಡುಗಳ ಹೊರತಾಗಿ ಜನರ ಜೀವನದ ವಿವಿಧ ವಿಚಾರಗಳನ್ನು ಒಂದೇ ಕಾನೂನಿನಡಿ ತರುವ ಸಲುವಾಗಿ ವೈಯಕ್ತಿಕ ಸಾಂಪ್ರದಾಯಿಕ ಕಾನೂನುಗಳಿಗೆ ಒಳಪಟ್ಟು ಸಂಬಂಧಗಳಲ್ಲಿ ಯಾವುದು ಅನುಮತಿಸಬೇಕು ಮತ್ತು ಯಾವುದನ್ನು ನಿಷೇಧಿಸಬೇಕು ಎಂಬುದನ್ನು ಯುಸಿಸಿ ಹೇಳುತ್ತದೆ.
ಕಾಯಿದೆ ಪ್ರಕಾರ ಲಿವ್- ಇನ್ ಸಂಬಂಧ ನೋಂದಾಯಿಸಿಕೊಳ್ಳದಿದ್ದರೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸಲಾಗುತ್ತದೆ. ಉತ್ತರಾಖಂಡಕ್ಕೆ ಒಳಪಟ್ಟಂತೆ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದಂತಹ ಇತರ ಅಂಶಗಳೂ ಇದರಡಿ ಬರುತ್ತವೆ.
[ಟ್ವೀಟ್ ಇಲ್ಲಿ ಓದಿ]