ಮೂಲಸೌಕರ್ಯ ಅಭಿವೃದ್ಧಿಯಾಗಲು ರಾಷ್ಟ್ರಪತಿ, ಪ್ರಧಾನಿ ಆಗಾಗ್ಗೆ ಬೆಂಗಳೂರಿಗೆ ಭೇಟಿ ನೀಡಬೇಕು: ಬಿಡಿಎಗೆ ಹೈಕೋರ್ಟ್‌ ಚಾಟಿ

ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೆಲ ನಿವೇಶನಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಹೈಕೋರ್ಟ್ ಬಿಡಿಎಗೆ ನಿರ್ದೇಶಿಸಿ ಒಂದೂವರೆ ವರ್ಷ ಕಳೆದಿದೆ. ಆದರೆ, ಬಿಡಿಎ ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡುತ್ತಿಲ್ಲ ಎಂದ ಪೀಠ.
High Court of Karnataka
High Court of Karnataka
Published on

ಬೆಂಗಳೂರಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಬೇಕಾದರೆ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಆಗಾಗ್ಗೆ ನಗರಕ್ಕೆ ಭೇಟಿ ನೀಡಬೇಕಿದೆ ಎಂದು ಸೂಚ್ಯವಾಗಿ ಹೇಳುವ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಕರ್ನಾಟಕ ಹೈಕೋರ್ಟ್ ಗುರುವಾರ ಚಾಟಿ ಬೀಸಿದೆ.

ನ್ಯಾಯಾಲಯದ ಹೊರತಾಗಿಯೂ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೆಲ ನಿವೇಶನಗಳಿಗೆ ಒಳಚರಂಡಿ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕ ಕಲ್ಪಿಸದ ಬಿಡಿಎ ಧೋರಣೆಗೆ ಆಕ್ಷೇಪಿಸಿ ಪಿ ಮಂಜುಳಾ ಮತ್ತು ಶಾರದಮ್ಮ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ವೀರಪ್ಪ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರು ಹೇಳಿರುವಂತೆ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೆಲ ನಿವೇಶನಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಹೈಕೋರ್ಟ್ ಬಿಡಿಎಗೆ ನಿರ್ದೇಶಿಸಿ ಒಂದೂವರೆ ವರ್ಷ ಕಳೆದಿದೆ. ಆದರೆ, ಬಿಡಿಎ ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡುತ್ತಿಲ್ಲ ಎಂದು ಪೀಠ ಅಸಮಾಧಾನ ಹೊರಹಾಕಿತು.

ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳು ಆಗಾಗ್ಗೆ ಭೇಟಿ ನೀಡಿದರೆ ನಗರದ ರಸ್ತೆಗಳು ಉತ್ತಮಗೊಳ್ಳಬಹುದು. ಮೊನ್ನೆ ಪ್ರಧಾನ ಮಂತ್ರಿ ಬಂದಿದ್ದ ಹಿನ್ನೆಲೆಯಲ್ಲಿ 23 ಕೋಟಿ ರೂಪಾಯಿ ಖರ್ಚು ಮಾಡಿ ನಗರದಲ್ಲಿ ರಸ್ತೆ ಗುಂಡಿ ಮುಚ್ಚಲಾಗಿದೆ. ಪ್ರಧಾನ ಮಂತ್ರಿಗಳು ನಗರಕ್ಕೆ ಭೇಟಿ ನೀಡಿದ ಪ್ರತಿ ಬಾರಿ ಬೇರೆ ಬೇರೆ ಮಾರ್ಗದಲ್ಲಿ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಸಲುವಾಗಿ ಹಾಳಾದ ರಸ್ತೆಗಳನ್ನು ಅಧಿಕಾರಿಗಳು ಸರಿಪಡಿಸಬಹುದು ಎಂದು ಬಿಡಿಎ ಕಾರ್ಯವೈಖರಿಗೆ ಪೀಠವು ಚಾಟಿ ಬೀಸಿತು. ಅಂತಿಮವಾಗಿ ಎರಡು ವಾರಗಳಲ್ಲಿ ನ್ಯಾಯಾಲಯದ ಆದೇಶದಂತೆ ವಿಶ್ವೇಶ್ವರಯ್ಯ ಬಡಾವಣೆ ನಿವೇಶನಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಮಂಜುಳಾ ಮತ್ತು ಶಾರದಮ್ಮ ಅವರು ನಗರದಲ್ಲಿ ಬಿಡಿಎ ಅಭಿವೃದ್ಧಿಪಡಿಸಿರುವ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ 2,156 ಮತ್ತು 2,157 ಸಂಖ್ಯೆಯ ನಿವೇಶನಗಳನ್ನು ಹೊಂದಿದ್ದಾರೆ. ಕುಡಿಯುವ ನೀರು, ಒಳಚರಂಡಿ ಸಂಪರ್ಕ ಮತ್ತು ರಸ್ತೆ ಸೌಲಭ್ಯವನ್ನು ನಿವೇಶನ ಸಂಖ್ಯೆ 2,157ರವರೆಗೆ ಮಾತ್ರ ಕಲ್ಪಿಸಲಾಗಿದೆ. ಆದರೆ, 2,158ರಿಂದ ಮುಂದಿನ ನಿವೇಶನಗಳಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ತಾವು ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ಷೇಪಿಸಿ 2020ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಗೆ ಉತ್ತರಿಸಿದ್ದ ಬಿಡಿಎ, ಆದಷ್ಟು ಶೀಘ್ರ ಬಡಾವಣೆಯಲ್ಲಿ ನಿವೇಶನ ಸಂಖ್ಯೆ 2,158 ರಿಂದ ಒಳಚರಂಡಿ, ಕುಡಿಯುವ ನೀರು ಸಂಪರ್ಕ ಮತ್ತು ರಸ್ತೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿತ್ತು. ಅದನ್ನು ಪರಿಗಣಿಸಿದ್ದ ಹೈಕೋರ್ಟ್, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬಿಡಿಎಗೆ 2020 ರ ಅಕ್ಟೋಬರ್‌ 21ರಂದು ಆದೇಶಿಸಿತ್ತು. ಈ ಆದೇಶ ಪಾಲಿಸಿಲ್ಲ ಎಂಬುದಾಗಿ ಆಕ್ಷೇಪಿಸಿ ಅರ್ಜಿದಾರರು 2021ರ ಏಪ್ರಿಲ್‌ನಲ್ಲಿ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com