

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಕಾನೂನುಬದ್ಧ ಭರವಸೆ ಇದ್ದರೂ ಸರ್ಕಾರದ ವಿರುದ್ಧದ ಟೀಕೆಯನ್ನು "ದುಬಾರಿ ಅಥವಾ ಸಮರ್ಥನೀಯವಲ್ಲದ" ರೀತಿಯಲ್ಲಿ ಆರ್ಥಿಕವಾಗಿ ನಿರ್ಬಂಧಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಆತಂಕ ವ್ಯಕ್ತಪಡಿಸಿದರು.
ಫೆಬ್ರವರಿ 26 ರಂದು ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಐಪಿಐ ಇಂಡಿಯಾ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಜರ್ನಲಿಸಂ 2025 ಸಮಾರಂಭದಲ್ಲಿ ಅವರು ಮಾತನಾಡಿದರು.
ಬಹಿರಂಗವಾಗಿ ವಿಧಿಸುವ ಸೆನ್ಸಾರ್ ಮೂಲಕವಲ್ಲದೆ ಸೂಕ್ಷ್ಮವಾಗಿ ಕೆಲಸ ಮಾಡಬಲ್ಲ ಆರ್ಥಿಕ ಮತ್ತು ನಿಯಂತ್ರಣಾತ್ಮಕ ಒತ್ತಡಗಳಿಂದಲೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಗಂಭೀರ ಅಪಾಯ ಉಂಟಾಗಬಹುದು ಎಂದು ಅವರು ಎಚ್ಚರಿಕೆ ನೀಡಿದರು.
ನ್ಯಾ. ನಾಗರತ್ನ ಅವರ ಭಾಷಣದ ಪ್ರಮುಖಾಂಶಗಳು
ಮಾಧ್ಯಮ ಸ್ವಾತಂತ್ರ್ಯಕ್ಕೆ ಗಂಭೀರವಾದ ಅಪಾಯಗಳು ನೇರವಾಗಿ ಸಂವಿಧಾನದ ಕಲಂ 19(2) ಅಡಿಯಲ್ಲಿ ಬರುವ ಸೆನ್ಸಾರ್‌ನಿಂದ ಅಲ್ಲ; ಬದಲಾಗಿ ಕಲಂ 19(6) ಅಡಿಯಲ್ಲಿ ಸಮರ್ಥಿತವಾದ ನಿಯಂತ್ರಣಗಳಿಂದ ಉದ್ಭವಿಸಬಹುದು.
ಮಾಧ್ಯಮ ಸರ್ಕಾರವನ್ನು ಟೀಕಿಸಲು ಕಾನೂನುಬದ್ಧವಾಗಿ ಮುಕ್ತವಾಗಿರಬಹುದು, ಆದರೆ ಆರ್ಥಿಕವಾಗಿ ನಿರ್ಬಂಧಿತವಾಗಿದ್ದರೆ ಅದು ಅಂತಹ ಟೀಕೆಗಳನ್ನು ದುಬಾರಿ ಅಥವಾ ಸಮರ್ಥನೀಯವಲ್ಲದಂತೆ ಮಾಡುತ್ತದೆ.
ಆರ್ಥಿಕ ನಿಯಂತ್ರಣಗಳೆಂದು ಸಮರ್ಥಿಸಬಹುದಾದ ಮಾಲೀಕತ್ವ ನಿಯಮಗಳು, ಪರವಾನಗಿ ಕಾನೂನುಗಳು, ಜಾಹೀರಾತು ನೀತಿಗಳು, ತೆರಿಗೆ ಹಾಗೂ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಕಾನೂನುಗಳು ಸಂಪಾದಕೀಯ ಸ್ವಾಯತ್ತತೆಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ.
ಪ್ರಭುತ್ವ ಎಂಬುದು ಸಾಂವಿಧಾನಿಕ ಆಶ್ವಾಸನೆಗಳನ್ನು ಈಡೇರಿಸುತ್ತಿರುವಂತೆ ಬಿಂಬಿಸಿ ಪರೋಕ್ಷವಾಗಿ ಮಾಧ್ಯಮವನ್ನು ಪ್ರಭಾವಿಸಬಹುದು.
ಸರ್ಕಾರ ಅದರ ಅಂಗಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಜಾಹೀರಾತು ಒತ್ತಡ ಟೀಕಾತ್ಮಕ ವರದಿಗಾರಿಕೆಯ ಮೇಲೆ ನಿರ್ಬಂಧ ವಿಧಿಸಬಹುದು.
ಉತ್ತಮ ಪತ್ರಿಕೋದ್ಯಮ ಎಂಬುದು ಕೇವಲ ಸದಾಶಯದಿಂದ ನಡೆಯುವುದಿಲ್ಲ. ಯಾರಾದರೂ ಚಂದಾದಾರಿಕೆ ತೆಗೆದುಕೊಳ್ಳುವಾಗ, ಅವರು ನಿಜವಾಗಿ ಹೇಳುವುದೇನಂದರೆ – ಈ ರೀತಿಯ ವರದಿಗಾರಿಕೆಗೆ ಬೆಂಬಲ ನೀಡುವುದು ಮೌಲ್ಯಯುತವಾಗಿದೆ ಎಂದು.
ಕಾನೂನು ಪತ್ರಿಕಾ ಮಾಧ್ಯಮವನ್ನು ಮೌನಗೊಳಿಸದಿರಬಹುದು; ಆದರೆ ಅದು ಭಾಷಣ ಸೃಷ್ಟಿಯಾಗುವ ಪರಿಸ್ಥಿತಿಗಳನ್ನು ರೂಪಿಸಿಕೊಳ್ಳಬಹುದು.
ಪ್ರಕಟಣೆಗೂ ಮುನ್ನವೇ ಕೆಲವು ವರದಿಗಳನ್ನು ಸುರಕ್ಷಿತ ಇನ್ನೂ ಕೆಲವನ್ನು ಅಪಾಯಕರ ಎಂಬ ಮನೋಭಾವ ಬೆಳೆಸಬಹುದು.
ಮಾಧ್ಯಮ ಸ್ವಾತಂತ್ರ್ಯವು ಕೇವಲ ಕಾನೂನುಬದ್ಧ ಹಕ್ಕು ಮಾತ್ರವಲ್ಲ; ಅದು ನೈತಿಕ ಆಚರಣೆ ಕೂಡ ಆಗಿದೆ.
ಪತ್ರಿಕೋದ್ಯಮದ ನೈತಿಕ ಶಕ್ತಿ ವಸ್ತುನಿಷ್ಠತೆ, ಪಕ್ಷಪಾತರಹಿತತೆ ಮತ್ತು ಪಾರದರ್ಶಕತೆಯ ಮೇಲೆ ನಿಂತಿದೆ.
ನೆಲಮಟ್ಟದ ವರದಿಗಳು ಕಾನೂನು ಮತ್ತು ಜನಜೀವನದ ನಡುವಿನ ಕೊಂಡಿಯಾಗಿವೆ.
ಸಾರ್ವಜನಿಕರಿಂದ ಮೌಲ್ಯೀಕರಿಸಿ ಬೆಂಬಲಿತವಾದಾಗ ಮಾತ್ರ ಸ್ವತಂತ್ರ ಪತ್ರಿಕೋದ್ಯಮ ಉಳಿಯುತ್ತದೆ.
ಓದುಗರ ಚಂದಾದಾರಿಕೆ ಮತ್ತು ಸಾರ್ವಜನಿಕ ಬೆಂಬಲವೇ ರಾಜಕೀಯ ಒತ್ತಡಗಳನ್ನು ಎದುರಿಸಲು ಮಾಧ್ಯಮಕ್ಕೆ ಬಲ ನೀಡುತ್ತದೆ.