ವಿವರಿಸಲಾಗದ ವಿಳಂಬದೊಂದಿಗೆ ಜಾರಿಗೊಳಿಸಲಾಗುವ ಮುಂಜಾಗ್ರತಾ ಬಂಧನ ಆದೇಶ ಸಮರ್ಥನೀಯವಲ್ಲ: ಕಾಶ್ಮೀರ ಹೈಕೋರ್ಟ್‌

ಏಪ್ರಿಲ್ 8, 2022ರಂದು ಮುಂಜಾಗ್ರತಾ ಕ್ರಮವಾಗಿ ಹೊರಡಿಸಲಾಗಿದ್ದ ಬಂಧನ ಆದೇಶವನ್ನು ಹನ್ನೊಂದು ತಿಂಗಳ ನಂತರ ಅಂದರೆ ಮಾರ್ಚ್ 14, 2023ರಂದು ಜಾರಿಗೊಳಿಸಿದ ಕ್ರಮ ಬದಿಗೆ ಸರಿಸಿದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, ಶ್ರೀನಗರ
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, ಶ್ರೀನಗರ

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ಮುಂಜಾಗ್ರತಾ ಬಂಧನ ಆದೇಶವನ್ನು ಕಾರ್ಯಗತಗೊಳಿಸುವಲ್ಲಿ ಎಸಗಿರುವ ಅತೃಪ್ತಿಕರ ಮತ್ತು ವಿವರಿಸಲಾಗದ ವಿಳಂಬವು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂದು ತೀರ್ಪು ನೀಡಿತು [ಓವೈಸ್ ಸೈಯದ್ ಖಾನ್, ಜಮ್ಮು ಮತ್ತು ಕಾಶ್ಮೀರದ ಯುಟಿ ಮತ್ತು ಇತರರು.].

ಸಾರ್ವಜನಿಕ ಸುವ್ಯವಸ್ಥೆ ಅಥವಾ ಭದ್ರತೆಗೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯುವುದಕ್ಕಾಗಿ ಯಾವುದೇ ವ್ಯಕ್ತಿಯನ್ನು ತಕ್ಷಣ ಬಂಧಿಸುವ ತುರ್ತು ಅಗತ್ಯವಿದ್ದಾಗ ಮಾತ್ರ ಸಾಮಾನ್ಯವಾಗಿ ಮುಂಜಾಗ್ರತಾ ಬಂಧನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಧರ್ ವಿವರಿಸಿದರು.

ಆದ್ದರಿಂದ, ಅಂತಹ ಬಂಧನ ಆದೇಶಗಳನ್ನು ಕಾರ್ಯಗತಗೊಳಿಸುವಲ್ಲಿನ ವಿಳಂಬವು ಬಂಧಿತರನ್ನು ಬಂಧಿಸುವ ನಿಜವಾದ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

"ಬಂಧನದ ಆದೇಶವನ್ನು ಕಾರ್ಯಗತಗೊಳಿಸುವಲ್ಲಿ ಅತೃಪ್ತಿಕರ ಮತ್ತು ವಿವರಿಸಲಾಗದ ವಿಳಂಬವಾದಾಗ, ಅಂತಹ ವಿಳಂಬವು ಬಂಧಿಸುವ ಅಧಿಕಾರಿ ದಾಖಲಿಸಿದ ವ್ಯಕ್ತಿನಿಷ್ಠ ತೃಪ್ತಿಯ ನೈಜತೆಯ ಬಗ್ಗೆ ಸಾಕಷ್ಟು ಅನುಮಾನ ಹುಟ್ಟುಹಾಕುತ್ತದೆ. ಇದು ಬಂಧಿತರನ್ನು ಬಂಧಿಸುವ ಅಗತ್ಯಕ್ಕೆ ಸಂಬಂಧಿಸಿದಂತೆ ಬಂಧನ ಪ್ರಾಧಿಕಾರವು ನಿಜವಾಗಿ ಮತ್ತು ಪ್ರಾಮಾಣಿಕವಾಗಿ ತೃಪ್ತಿ ಹೊಂದಿಲ್ಲ ಎಂಬ ನ್ಯಾಯಸಮ್ಮತ ತೀರ್ಮಾನಕ್ಕೆ ಕಾರಣವಾಗುತ್ತದೆ" ಎಂದು ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಲಾಗಿದೆ.

ಏಪ್ರಿಲ್ 8, 2022ರಂದು ಮುಂಜಾಗ್ರತಾ ಕ್ರಮವಾಗಿ ಹೊರಡಿಸಲಾಗಿದ್ದ ಬಂಧನ ಆದೇಶವನ್ನು ಹನ್ನೊಂದು ತಿಂಗಳ ನಂತರ ಅಂದರೆ ಮಾರ್ಚ್ 14, 2023ರಂದು ಜಾರಿಗೊಳಿಸಿದ ಆದೇಶವನ್ನು ಬದಿಗೆ ಸರಿಸಿದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

"ಪ್ರತಿವಾದಿಗಳು ತಮ್ಮ ಬಂಧನದ ಆದೇಶ ವಿಳಂಬವಾಗಿ ಜಾರಿಗೊಳಿಸುವ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಆದ್ದರಿಂದ, ಇದು ಬಂಧನ ಆದೇಶವನ್ನು ಕಾನೂನಿನಡಿ ಸಮರ್ಥನೀಯವಲ್ಲದಂತೆ ಮಾಡುತ್ತದೆ" ಎಂದು ನ್ಯಾಯಾಲಯ ತೀರ್ಪಿತ್ತಿದೆ.

ಈ ಹಿನ್ನೆಲೆಯಲ್ಲಿ ವಿಳಂಬಯುತವಾಗಿ ಮುಂಜಾಗ್ರತಾ ಕ್ರಮದಡಿ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಓವೈಸ್ ಸೈಯದ್ ಖಾನ್ ಎಂಬವವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.

ಮುಂಜಾಗ್ರತಾ ಬಂಧನ ಆದೇಶ ಕಾರ್ಯಗತಗೊಳಿಸುವಲ್ಲಿ ಉಂಟಾದ ಹನ್ನೊಂದು ತಿಂಗಳ ವಿಳಂಬದಿಂದಾಗಿ ಮುಂಜಾಗ್ರತಾ ಬಂಧನ ಕಾನೂನಿನಡಿಯಲ್ಲಿ ಅರ್ಜಿದಾರರನ್ನು ಬಂಧಿಸುವ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅದರಂತೆ, ಬಂಧನ ಆದೇಶವನ್ನು ರದ್ದುಗೊಳಿಸಿದ ಉಚ್ಚ ನ್ಯಾಯಾಲಯ ಇತರ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಅಗತ್ಯವಿಲ್ಲದಿದ್ದರೆ, ಖಾನ್‌ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com