ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕರಣ: ಭಾನುವಾರ ವಿಶೇಷ ವಿಚಾರಣೆ ನಡೆಸಲಿರುವ ಸಿಜೆ ವರಾಳೆ ನೇತೃತ್ವದ ಪೀಠ

ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿದ್ದ ನ್ಯಾಯಾಲಯವು ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ನಿರ್ದೇಶಿಸಿ ಜ.1ರಂದು ಆದೇಶಿಸಿತ್ತು.
Chief Justice P B Varale and Justice M G S Kamal
Chief Justice P B Varale and Justice M G S Kamal

ಅಪರೂಪದ ಬೆಳವಣಿಗೆಯಲ್ಲಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಮೇಲ್ಮನವಿಯ ವಿಶೇಷ ವಿಚಾರಣೆಯನ್ನು ಭಾನುವಾರ ನಡೆಸಲಿದೆ.

ರಾಜ್ಯದ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಪ್ರಕಟಿಸಿದ್ದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ನರೇಂದ್ರ ಬಾಬು ಜಿ ವಿ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಬೆಳಿಗ್ಗೆ 11 ಗಂಟೆಗೆ ನಡೆಸಲಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿದ್ದ ನ್ಯಾಯಾಲಯವು ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ನಿರ್ದೇಶಿಸಿ ಜನವರಿ 1ರಂದು ಆದೇಶಿಸಿತ್ತು.

Also Read
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಶಿಕ್ಷಣ ಇಲಾಖೆ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಪಡಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯು 2022ರ ಫೆಬ್ರವರಿ 22ರಂದು ಹೊರಡಿಸಿದ್ದ ಅಧಿಸೂಚನೆ ಮೇರೆಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಅಭ್ಯರ್ಥಿಗಳು, ಲಿಖಿತ ಪರೀಕ್ಷೆ ಬರೆದು ಅದರಲ್ಲಿ ಉತ್ತಮ ಶ್ರೇಣಿ ಗಳಿಸಿದ್ದರು. ಅಲ್ಲದೆ, 1:2 ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ದಾಖಲೆಗಳ ಪರಿಶೀಲನೆಗೆ ಅರ್ಹರಾಗಿದ್ದರು. ದಾಖಲೆಗಳನ್ನು ಪರಿಶೀಲಿಸಿದ್ದ ಇಲಾಖೆಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಆದರೆ, 2022ರ ನವೆಂಬರ್‌ 18ರಂದು ಪ್ರಕಟಿಸಲಾಗಿದ್ದ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅರ್ಜಿದಾರರು ಸ್ಥಾನ ಪಡೆದಿರಲಿಲ್ಲ. ಇದರಿಂದ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿತ್ತು. ಈಗ ಈ ಆದೇಶ ಪ್ರಶ್ನಿಸಿರುವ ಅರ್ಜಿಯ ಮೇಲ್ಮನವಿಯನ್ನು ನಾಳೆ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಲಿದೆ.

Related Stories

No stories found.
Kannada Bar & Bench
kannada.barandbench.com