ಪ್ರಧಾನಿ ಮೋದಿ 17ರಿಂದ 18 ಗಂಟೆಗಳ ಕಾಲ ಕೆಲಸ ಮಾಡುವಾಗ ದೀರ್ಘಾವಧಿ ಕೆಲಸದ ಬಗ್ಗೆ ನಾವು ದೂರಲಾಗದು: ಸಾಲಿಸಿಟರ್ ಜನರಲ್

ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದ ರೀತಿ ಅಂತರ್ಜಾಲ ಬಳಸುವ ಹಕ್ಕನ್ನು ತಡೆಯಬಹುದೇ ಅಥವಾ ಇಲ್ಲವೇ ಎಂದು ನಿರ್ಣಯಿಸಲು ನ್ಯಾಯಶಾಸ್ತ್ರಜ್ಞರು ಇನ್ನೂ ಹೆಣಗಾಡುತ್ತಿದ್ದಾರೆ ಎಂದು ಎಸ್ ಜಿ ಮೆಹ್ತಾ ಹೇಳಿದರು.
ಪ್ರಧಾನಿ ಮೋದಿ 17ರಿಂದ 18 ಗಂಟೆಗಳ ಕಾಲ ಕೆಲಸ ಮಾಡುವಾಗ ದೀರ್ಘಾವಧಿ ಕೆಲಸದ ಬಗ್ಗೆ ನಾವು ದೂರಲಾಗದು: ಸಾಲಿಸಿಟರ್ ಜನರಲ್

ಪ್ರಧಾನಿ ನರೇಂದ್ರ ಮೋದಿ ಅವರು ದಿನಕ್ಕೆ 17 ರಿಂದ 18 ಗಂಟೆಗಳ ಕಾಲ ಕೆಲಸ ಮಾಡುವಾಗ ದೀರ್ಘಾವಧಿ ಕೆಲಸದ ಬಗ್ಗೆ ದೂರಲು ನಮಗೆ ಯಾವುದೇ ಕಾರಣ ಇರುವುದಿಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ.

"ನಮ್ಮ ಪ್ರಧಾನಿ ದಿನಕ್ಕೆ 17 ಅಥವಾ 18 ಗಂಟೆಗಳ ಕಾಲ ಕೆಲಸ ಮಾಡಿದರೆ ನಮಗೆ ದೂರು ನೀಡಲು ಏನೂ ಇರುವುದಿಲ್ಲ. ಇದು ನನಗೆ ಖುದ್ದು ತಿಳಿದಿದೆ. ಆದರೂ, ನಾನು ಕುಟುಂಬಕ್ಕಾಗಿ ಸಮಯ ನಿಭಾಯಿಸುತ್ತೇನೆ" ಎಂದು ಅವರು ಹೇಳಿದರು.

ದೆಹಲಿ ಕ್ಯಾಂಪಸ್‌ ಲಾ ಸೆಂಟರ್‌ನ ಡಿಬೇಟ್ದ್‌ ಅಂಡ್‌ ಡಿಸ್ಕಷನ್‌ ಸೊಸೈಟಿ ಆಯೋಜಿಸಿದ್ದ ʼಕೋರ್ಟ್‌ರೂಂ ಲೆಜೆಂಡ್ಸ್‌ʼ ವೆಬಿನಾರ್‌ನಲ್ಲಿ ʼವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷದೀಕರಣʼ ಎಂಬ ವಿಷಯದ ಕುರಿತು ಮೆಹ್ತಾ ಮಾತನಾಡುತ್ತಿದ್ದರು. ಆಗ ಸಭಿಕರೊಬ್ಬರು “ತಾವು ಹೇಗೆ ಸಮಯವನ್ನು ನಿರ್ಣಯಿಸುತ್ತೀರಿ? ಖಾಸಗಿ ಪ್ರಾಕ್ಟೀಸ್‌ಗೆ ಹೋಲಿಸಿದಾಗ ಸರ್ಕಾರಿ ಕಾನೂನು ಅಧಿಕಾರಿಯ ಕೆಲಸ ಎಷ್ಟು ಭಿನ್ನ?” ಎಂದು ಕೇಳಿದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

Also Read
ನಮ್ಮ ಕಾನೂನು ವ್ಯವಸ್ಥೆ, ಮೌಲ್ಯಗಳು ಸಲಿಂಗ ವಿವಾಹ ಒಪ್ಪುವುದಿಲ್ಲ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

"ಸುಪ್ರೀಂಕೋರ್ಟ್‌ಗೆ ಅಪಖ್ಯಾತಿ ತರುವವರು” ಕಡಿಮೆ ಸಂಖ್ಯೆಯಲ್ಲಿದ್ದು ಅವರನ್ನು ನಿರ್ಲಕ್ಷಿಸಬೇಕು ಎಂದಿರುವ ಅವರು “ಮಾನವ ಹಕ್ಕುಗಳ ರಕ್ಷಕ ಸುಪ್ರೀಂ ಕೋರ್ಟ್‌ ಎಂದು ಬಿಂಬಿಸುವ ಬದಲು ಅದರ ಅಪಖ್ಯಾತಿಗೆ ಮುಂದಾಗುತ್ತಿದ್ದಾರೆ. ಅದನ್ನು ನಿರ್ಲಕ್ಷಿಸುವುದು ಉತ್ತಮ ಮಾರ್ಗ. ಇಲ್ಲದಿದ್ದರೆ ಸಂಖ್ಯಾತ್ಮಕವಾಗಿ ಚಿಕ್ಕದಾಗಿರುವ ಗುಂಪೊಂದು ಅದನ್ನು ವ್ಯಾಪಕಗೊಳಿಸಲು ಮುಂದಾಗುತ್ತದೆ. ದೇಶದ ಜನ ಸುಪ್ರೀಂಕೋರ್ಟ್‌ ಬಗ್ಗೆ ಅಪಾರ ನಂಬಿಕೆ ಇರಿಸಿಕೊಂಡಿದ್ದಾರೆ” ಎಂದು ಅವರು ಭಾಷಣದ ವೇಳೆ ತಿಳಿಸಿದರು. ನಾಗರಿಕ ಮೂಲಭೂತ ಹಕ್ಕುಗಳ ಸುಧಾರಣೆಗಾಗಿ ಹಲವು ವರ್ಷಗಳಿಂದ ಸುಪ್ರೀಂಕೋರ್ಟ್‌ ಜಾರಿಗೆ ತಂದಿರುವ ಮಹತ್ವದ ತೀರ್ಪುಗಳನ್ನು ಈ ಸಂದರ್ಭದಲ್ಲಿ ಅವರು ಉದಾಹರಿಸಿದರು.

ನ್ಯಾಯಮೂರ್ತಿ ಪತಂಜಲಿ ಶಾಸ್ತ್ರಿ ಅವರನ್ನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೂಪರ್‌ಸೀಡ್‌ ಮಾಡಿದ್ದು ಮತ್ತು ತುರ್ತುಪರಿಸ್ಥಿತಿಯ ದಿನಗಳು ಹೇಗೆ ಸರ್ವೋಚ್ಛ ನ್ಯಾಯಾಲಯವನ್ನು ದುರ್ಬಲಗೊಳಿಸಲು ಯತ್ನಿಸಿದವು ಎಂದು ಅವರು ವಿವರಿಸಿದರು.

“ದ್ವೇಷ ಭಾಷಣ ನಿಯಂತ್ರಿಸುವ ವಿಚಾರ ಬಂದಾಗ ಅದು ಸಹಿಷ್ಣುಗಳನ್ನು ಶಿಕ್ಷಿಸಲು ಮತ್ತು ಅಸಹಿಷ್ಣುಗಳನ್ನು ಗೌರವಿಸಲು ಅದು ಬಳಕೆಯಾಗಬಾರದು” ಎಂದು ಅವರು ಹೇಳಿದರು. ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ವಾಕ್‌ ಸ್ವಾತಂತ್ರ್ಯದ ವ್ಯಾಖ್ಯಾನ ಮತ್ತು ಅದರ ವ್ಯಾಪ್ತಿಯನ್ನು ಗುರುತಿಸಬೇಕೇ ವಿನಾ ವ್ಯಕ್ತಿಗಳ ವ್ಯಕ್ತಿನಿಷ್ಠ ಗ್ರಹಿಕೆಯ ಮೂಲಕ ಅಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.

ಸಾರ್ವಜನಿಕ ಅಭಿಪ್ರಾಯ ರೂಪಿಸುವ ಅಪಾರ ಸಾಮರ್ಥ್ಯ ಅಂತರ್ಜಾಲಕ್ಕೆ ಇದೆ ಎಂದ ಅವರು “ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದ ರೀತಿ ಇಂಟರ್‌ನೆಟ್‌ ಬಳಸುವ ಹಕ್ಕನ್ನು ತಡೆಯಬಹುದೇ ಅಥವಾ ಇಲ್ಲವೇ ಎಂದು ನಿರ್ಣಯಿಸಲು ನ್ಯಾಯಶಾಸ್ತ್ರಜ್ಞರು ಇನ್ನೂ ಹೆಣಗಾಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

Related Stories

No stories found.
Kannada Bar & Bench
kannada.barandbench.com