ಸಂತಾನಾಭಿವೃದ್ಧಿ ಮತ್ತು ಪಾಲನೆ ಕೈದಿಗಳ ಮೂಲಭೂತ ಹಕ್ಕು: ದೆಹಲಿ ಹೈಕೋರ್ಟ್

ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಮಗು ಪಡೆಯಲು ಬಯಸಿದ 41 ವರ್ಷದ ಕೊಲೆ ಅಪರಾಧಿಗೆ ನ್ಯಾಯಾಲಯ ನಾಲ್ಕು ವಾರಗಳ ಪೆರೋಲ್ ನೀಡಿದೆ.
ಕೈದಿ
ಕೈದಿ

ಸಂತಾನಾಭಿವೃದ್ಧಿ ಮತ್ತು ಪಾಲನೆ ಅಪರಾಧಿಯ ಮೂಲಭೂತ ಹಕ್ಕಾಗಿದ್ದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ರಕ್ಷಣೆ ಒದಗಿಸಲಾಗಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ [ಕುಂದನ್ ಸಿಂಗ್ ವಿರುದ್ಧ ದೆಹಲಿ ಸರ್ಕಾರ ನಡುವಣ ಪ್ರಕರಣ].

ಈ ಹಕ್ಕು ಪರಿಪೂರ್ಣವಲ್ಲ ಆದರೆ ಸಂದರ್ಭವನ್ನು ಅವಲಂಬಿಸಿರುತ್ತದೆ ಮತ್ತು ಕೈದಿಯ ಪೋಷಕರ ಸ್ಥಾನಮಾನ ಮತ್ತು ವಯಸ್ಸಿನಂತಹ ಅಂಶಗಳನ್ನು ಪರಿಗಣಿಸುವ ಮೂಲಕ, ವೈಯಕ್ತಿಕ ಹಕ್ಕುಗಳು ಮತ್ತು ವಿಶಾಲ ಸಾಮಾಜಿಕ ಪರಿಗಣನೆಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಲು ನ್ಯಾಯಯುತ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಸ್ಪಷ್ಟಪಡಿಸಿದರು.

 “ಭಾರತದಲ್ಲಿ ಕೈದಿಗಳಿಗೆ ಯಾವುದೇ ಮೂಲಭೂತ ಹಕ್ಕುಗಳಿಲ್ಲ ಎಂದು ಹೇಳಲು ನ್ಯಾಯಾಂಗ ಹಠತೊಟ್ಟು ನಿರಾಕರಿಸಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಹಾಕಿಕೊಟ್ಟಿರುವ ಅದೇ ಪರಂಪರೆಯನ್ನು ಈ ನ್ಯಾಯಾಲಯ ಅನುಸರಿಸುತ್ತದೆ. ಜೊತೆಗೆ ಈ ನ್ಯಾಯಾಲಯ ಪಿತೃತ್ವ ಮತ್ತು ಸಂತಾನ ಪಡೆಯುವುದು ಅಪರಾಧಿಯ ಮೂಲಭೂತ ಹಕ್ಕಾಗಿದೆ ಎಂಬಂತಹ ಹೊಸ ಸನ್ನಿವೇಶಗಳು ಮತ್ತು ಸವಾಲುಗಳನ್ನು ಎತ್ತಿಹಿಡಿಯುವ ಮತ್ತು ಒಳಗೊಳ್ಳುವ ಸಾಂವಿಧಾನಿಕ ಹಕ್ಕುಗಳನ್ನು ಅರ್ಥೈಸುವ ಗುರಿಯನ್ನು ಗೌರವಯುತವಾಗಿ ಸ್ವೀಕರಿಸುತ್ತದೆ” ಎಂಬುದಾಗಿ ಪೀಠ ತಿಳಿಸಿದೆ.

ಅಪರಾಧಿಯಾಗುವುದು ಮತ್ತು ಸೆರೆವಾಸ ಅನುಭವಿಸುವುದು ವೈವಾಹಿಕ ಜೀವನದ ಅನೇಕ ಅಂಶಗಳಿಗೆ ಕಡಿವಾಣ ಹಾಕುತ್ತದೆ. ಅಪರಾಧಿ ಎಂದು ಪರಿಗಣಿಸಿದ ನಂತರ ವಿಧಿಸಲಾಗುವ ಶಿಕ್ಷೆಯು ಆತನನ್ನು ದಂಡಿಸಲಿಕ್ಕಲ್ಲ ಬದಲಿಗೆ ಸುಧಾರಣೆ ತರಲು ಎಂಬ ನಿಟ್ಟಿನಲ್ಲಿ ಅಪರಾಧಿಗೆ ಪೆರೋಲ್ ನಿರಾಕರಿಸುವುದು ಅವನ ಮುಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನ್ಯಾಯಾಲಯಗಳು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ನುಡಿಯಿತು.

ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಂದನ್ ಸಿಂಗ್ ಎಂಬಾತ ತಾನು 14 ವರ್ಷಗಳಿಂದ ಜೈಲಿನಲ್ಲಿ ಕಳೆದಿದ್ದು ತನಗೆ 41 ವರ್ಷ ಮತ್ತು ಪತ್ನಿಗೆ 38 ವರ್ಷ ವಯಸ್ಸಾಗಿದೆ. ಹೀಗಾಗಿ ಸಂತಾನಾಭಿವೃದ್ಧಿ ಮೂಲಕ ವಂಶಾವಳಿ ಉಳಿಸಿಕೊಳ್ಳಲು ಬಯಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಸಂತಾನಾಭಿವೃದ್ಧಿ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯಲು ಬಯಸಿರುವ ತಾವು ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಬೇಕಿದೆ. ಈ ಹಿಂದೆ ಪೆರೋಲ್‌ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ವಿವರಿಸಲಾಗಿತ್ತು.

ವಾದ ಪುರಸ್ಕರಿಸಿದ ನ್ಯಾ. ಶರ್ಮಾ ಸಂತಾನೋತ್ಪತ್ತಿ ಮತ್ತು ಪಿತೃತ್ವ ಆಧಾರದಲ್ಲಿ ದೆಹಲಿ ಕಾರಾಗೃಹ  ನಿಯಮಾವಳಿ- 2018 ಪೆರೋಲ್‌ ಒದಗಿಸುವುದಿಲ್ಲ.  ಆದರೆ ಅಂತಹ ಪರಿಹಾರ ನೀಡುವುದನ್ನು ಸಾಂವಿಧಾನಿಕ ನ್ಯಾಯಾಲಯದಿಂದ ಆ ನಿಯಮಾವಳಿ ತಡೆಯದು ಎಂದರು.

[ತೀರ್ಪಿನ ಪ್ರತಿ ಇಲ್ಲಿ ಲಭ್ಯ]

Attachment
PDF
Kundan Singh v The State Govt of NCT of Delhi.pdf
Preview
Kannada Bar & Bench
kannada.barandbench.com