ತನ್ನ ಮೊಬೈಲ್ ಆ್ಯಪ್ ಬಳಸಲು ವಿಕಲಚೇತನರಿಗೆ ಅನುವಾಗುವಂತೆ ರೂಪಿಸಲು ಖಾಸಗಿ ಕಂಪೆನಿಯೊಂದಕ್ಕೆ ದಿವ್ಯಾಂಗರ ಮುಖ್ಯ ಆಯುಕ್ತರ ನ್ಯಾಯಾಲಯ ಇತ್ತೀಚೆಗೆ ಸೂಚಿಸಿದೆ [ರಾಹುಲ್ ಬಜಾಜ್ ಮತ್ತು ಪ್ರಾಕ್ಟೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಪ್ರಸಕ್ತ ಪ್ರಕರಣದಲ್ಲಿ ಪ್ರಾಕ್ಟೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ನ್ಯಾಯಾಲಯವು ನಿರ್ದೇಶನವನ್ನು ನೀಡಿದರೂ ಎಲ್ಲಾ ಖಾಸಗಿ ಸಂಸ್ಥೆಗಳು ತಮ್ಮ ಜಾಲತಾಣಗಳು, ಅಪ್ಲಿಕೇಶನ್‌ಗಳು ಹಾಗೂ ಇತರ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವೇದಿಕೆಗಳನ್ನು ವಿಕಲಚೇತನರು ಬಳಸುವ ಕುರಿತಂತೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲು ಬದ್ಧವಾಗಿರಬೇಕು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ವಿಕಲಚೇತನರ ಹಕ್ಕುಗಳ ಕಾಯಿದೆಯ ಸೆಕ್ಷನ್ 40 ಮತ್ತು 46 ರ ಅಡಿಯಲ್ಲಿ ಎಲ್ಲಾ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸೇವಾ ಸಂಸ್ಥೆಗಳು ಅಂಗವಿಕಲರಿಗಾಗಿ ತಮ್ಮ ಸೇವೆಯನ್ನು ರೂಪುಗೊಳಿಸಿರಬೇಕು ಎಂದು ಆಯುಕ್ತರಾದ ಉಪ್ಮಾ ಶ್ರೀವಾಸ್ತವ ಹೇಳಿದರು.
ಪ್ರಾಕ್ಟೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಜಾಲತಾಣ ಮತ್ತು ಅಪ್ಲಿಕೇಶನ್ ಬಳಸಲು ತಮಗೆ ಸಾಧ್ಯವಾಗುತ್ತಿಲ್ಲ ಮತ್ತು ನಿಯಮನಾನುಸಾರ ನಿಗದಿಗೊಳಿಸಿದ ಮಾನದಂಡಗಳನ್ನು ಅದು ಪಾಲಿಸುತ್ತಿಲ್ಲ ಎಂದು ದೃಷ್ಟಿದೋಷವುಳ್ಳ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿತು. ಜಾಲತಾಣವು ಸುಮಾರು 9000ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಅನ್‌ಲೈನ್ ಮೂಲಕ ವೈದ್ಯರ ಭೇಟಿಗೆ ಸಮಯ ಹಾಗೂ ವೈದ್ಯಕೀಯ ಸೇವೆಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅನುವು ಮಾಡುತ್ತದೆ.