ಕೋವಿಡ್ ಚಿಕಿತ್ಸೆ ದರಕ್ಕೆ ಅಂಕುಶ ಹಾಕಿದ ಕೇರಳ; ಸರ್ಕಾರದ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ ಕೇರಳ ಹೈಕೋರ್ಟ್

ಗಂಜಿ ಊಟಕ್ಕೆ 1300 ರೂಪಾಯಿ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಜನರ ಲೂಟಿ ಮಾಡುತ್ತವೆ ಎಂದು ಕಿಡಿ ಕಾರಿದ್ದ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದೆ.
Kerala High Court and Hospital beds
Kerala High Court and Hospital beds

ಖಾಸಗಿ ಆಸ್ಪತ್ರೆಗಳ ಕೋವಿಡ್‌ ಚಿಕಿತ್ಸೆ ದರ ನಿಯಂತ್ರಿಸುವ ಕೇರಳ ಸರ್ಕಾರದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ ಸೋಮವಾರ ಸಮ್ಮತಿ ಸೂಚಿಸಿದ್ದು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶಿಸಿದೆ.

ಕೇರಳ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಎಲ್ಲಾ ಆಸ್ಪತ್ರೆಗಳು ಶೇಕಡಾ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಕಾಯ್ದಿರಿಸಬೇಕಿದೆ. ಆದೇಶದ ನಂತರ ಚಿಕಿತ್ಸೆಯ ಎಲ್ಲಾ ಶುಲ್ಕ ನಿರ್ಧಾರವೂ ಸರ್ಕಾರದ ಆದೇಶದ ವ್ಯಾಪ್ತಿಗೆ ಒಳಪಡಲಿದೆ. ಸರ್ಕಾರ ವಿಧಿಸಿರುವ ದರಗಳು ಸಮಂಜಸವಾಗಿವೆ ಎಂದು ನ್ಯಾಯಾಲಯ ತೃಪ್ತಿ ವ್ಯಕ್ತಪಡಿಸಿದೆ.

ಇದಕ್ಕೂ ಮುನ್ನ, ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ಅತಿಯಾದ ಶುಲ್ಕ ಕಂಡು ಕೇರಳ ಹೈಕೋರ್ಟ್‌ ವಿಚಾರಣೆ ವೇಳೆ ಕೆಂಡಾಮಂಡಲವಾಗಿತ್ತು. ಚಿಕಿತ್ಸೆ ಮತ್ತು ಸೇವೆಗಳಿಗೆ ಹೆಚ್ಚಿನ ದರ ವಿಧಿಸುವ ಮೂಲಕ ಆಸ್ಪತ್ರೆಗಳು ಸಾಮಾನ್ಯ ಜನರ ಲೂಟಿಯಲ್ಲಿ ತೊಡಗಿವೆ ಎಂದು ಅದು ಕಿಡಿಕಾರಿತ್ತು.

ಪಿಪಿಇ ಕಿಟ್‌ಗಳ ಬೆಲೆ ರೂ. 22,000, ಒಂದು ಡೋಲೊ ಮಾತ್ರೆಗೆ 30- 40 ರೂಪಾಯಿ ಹಾಗೂ ಗಂಜಿ ಊಟಕ್ಕೆ 1300 ರೂಪಾಯಿ ಬೆಲೆ ನಿಗದಿಪಡಿಸಿರುವುದಕ್ಕೆ ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಮತ್ತು ಕೌಸರ್ ಎಡಪ್ಪಾಗ್ತ್ ಅವರಿದ್ದ ಪೀಠ ಬೇಸರ ವ್ಯಕ್ತಪಡಿಸಿತು.

“ರೂ 1000 ದುಡಿದು 2-3 ಲಕ್ಷ ಬಿಲ್‌ ಪಾವತಿಸಬೇಕಾದ ಜನರ ದುಸ್ಥಿತಿ ಊಹಿಸಿ. ಸೋಂಕು ವೇಗವಾಗಿ ಏರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದೊಂದೇ ಪ್ರಕರಣವಲ್ಲ. ಈಗ ಯಾರಿಗೆ ಬೇಕಾದರೂ ಸೋಂಕು ತಗುಲಬಹುದು. ನೀವು ಜನರನ್ನು ಲೂಟಿ ಮಾಡುತ್ತಿದ್ದೀರಿ. ಈ ಬಗ್ಗೆ ಯೋಚಿಸಿ ಈಗ ಮಧ್ಯಪ್ರವೇಶಿಸಬೇಕಿದೆ” ಎಂದು ಅದು ಹೇಳಿತು.

“ನಮ್ಮ ಸಾಧಾರಣ ಗಂಜಿ ಊಟಕ್ಕೆ ರೂ. 1300 ಶುಲ್ಕ ವಿಧಿಸಲಾಗುತ್ತಿದೆ. ಡೋಲೊಗೆ 30- 40 ರೂಪಾಯಿ ಪಾವತಿಸಬೇಕಿದೆ”
- ಕೇರಳ ಹೈಕೋರ್ಟ್

ಕೋವಿಡ್‌ ಚಿಕಿತ್ಸೆಗೆ ಬೆಲೆ ನಿಗದಿ ಪಡಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಾಸಗಿ ಆಸ್ಪತ್ರೆಗಳು ವಿರೋಧಿಸಿದಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್‌ ಚಿಕಿತ್ಸೆಯ ಬೆಲೆ ನಿಗದಿಪಡಿಸಲು ಕೋರಿ ವಕೀಲ ಸಬು ಪಿ ಜೋಸೆಫ್‌ ಅವರು ಅರ್ಜಿ ಸಲ್ಲಿಸಿದ್ದರು.

ಸೋಮವಾರ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಾಗ ಸರ್ಕಾರದ ಪರ ವಕೀಲರು ಬೆಲೆ ನಿಯಂತ್ರಿಸಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ಸರ್ಕಾರದ ಆದೇಶದಂತೆ ನೋಂದಣಿ, ಹಾಸಿಗೆ, ಶುಶ್ರೂಷೆ, ವಸತಿ, ರಕ್ತ ಪರೀಕ್ಷೆ, ಆಮ್ಲಜನಕ ಪೂರೈಕೆ, ಎಕ್ಸ್‌ರೇ, ಸಮಾಲೋಚನೆ, ಡಯಾಗ್ನೊಸಿಸ್‌ ಇತ್ಯಾದಿಗಳೂ ಸೇರಿದಂತೆ ಸಾಮಾನ್ಯ ವಾರ್ಡ್‌ನ ಬೆಲೆ 2,645 ರೂಪಾಯಿ ನಿಗದಿಪಡಿಸಲಾಗಿದೆ ರೆಮ್‌ಡಿಸಿವಿರ್‌ ಹಾಗೂ ಆರ್‌ಟಿಪಿಸಿಆರ್‌ ಪರೀಕ್ಷೆಗೆಂದು ಪ್ರತ್ಯೇಕವಾಗಿ ತಲಾ 500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ನ್ಯಾಯಾಲಯ ತೃಪ್ತಿ ವ್ಯಕ್ತಪಡಿಸಿತು. ಹೆಚ್ಚು ಶುಲ್ಕ ನಿಗದಿಪಡಿಸಿದರೆ ಅದಕ್ಕೆ ಹತ್ತುಪಟ್ಟು ಹೆಚ್ಚು ದಂಡ ತೆರಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಲಾಯಿತು.

ಖಾಸಗಿ ಆಸ್ಪತ್ರೆಗಳ ಪರ ಹಾಜರಾದ ವಕೀಲರು ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚು ಶುಲ್ಕ ನಿಗದಿಪಡಿಸಲು ಮನಸ್ಸಿಲ್ಲದಿದ್ದರೂ ಕೋವಿಡ್‌ ನಿರ್ಬಂಧಗಳಿಂದಾಗಿ ಹೆಚ್ಚಿನ ಶುಲ್ಕ ಪಡೆಯುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು. ಆದರೆ ಸರ್ಕಾರದ ನಡೆ ಶ್ಲಾಘನೀಯ ಎಂದು ನ್ಯಾಯಾಲಯ ಹೇಳಿತು. ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನಗಳಲ್ಲಿ ಕೂಡ ಇಂತಹುದೇ ಆದೇಶ ಹೊರಡಿಸಲಾಗಿದೆ ಎಂದು ಪೀಠ ಉದಾಹರಣೆಗಳನ್ನು ನೀಡಿತು.

“ಸಾಂಕ್ರಾಮಿಕ ರೋಗ ಹಬ್ಬಿರುವ ಸಂದರ್ಭದಲ್ಲಿ ಆಸ್ಪತ್ರೆಗಳು ಶೇ ನೂರರಷ್ಟು ಭರ್ತಿಯಾಗಿವೆ. ಸಾಮಾನ್ಯ ದಿನಗಳಲ್ಲಿ ಶೇ 50-60ರಷ್ಟು ಮಂದಿ ಮಾತ್ರ ಆಸ್ಪತ್ರೆಗಳಲ್ಲಿರುತ್ತಾರೆ. ನಿಮ್ಮ ದರವನ್ನು ಈಗ ಲೆಕ್ಕಹಾಕಿ” ಎಂದು ನ್ಯಾಯಾಲಯ ಬಿಸಿಮುಟ್ಟಿಸಿತು. ಇನ್ನು ಮುಂದೆ ನೀಡಲಾಗುವ ಎಲ್ಲಾ ಬಿಲ್‌ಗಳು ಸರ್ಕಾರದ ಆದೇಶದ ಅನುಸಾರ ಇರುತ್ತದೆ. ಈ ಹಿಂದೆ ನೀಡಲಾಗಿದ್ದ ಬಿಲ್‌ಗೆ ಹಿಂದಿನ ದರ ಅನ್ವಯವಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com