ಖಾಸಗಿ ಶಾಲೆಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ನೀಡಲಾದ ಸೀಟುಗಳಲ್ಲಿ ಭರ್ತಿಯಾಗದೆ ಉಳಿದಿರುವ ಸೀಟುಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಭರ್ತಿ ಮಾಡಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಜಸ್ಟೀಸ್ ಫಾರ್ ಆಲ್ ಮತ್ತಿತರರು ಹಾಗೂ ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್ ಇನ್ನಿತರರ ನಡುವಣ ಪ್ರಕರಣ].
ಖಾಸಗಿ ಮತ್ತು ಸರ್ಕಾರಿ ಜಮೀನುಗಳಲ್ಲಿರುವ ಶಾಲೆಗಳು ಇಡಬ್ಲ್ಯೂಎಸ್ ವರ್ಗದ ವಿದ್ಯಾರ್ಥಿಗಳಿಗೆ ನೀಡಬೇಕಾದ ಪ್ರವೇಶಾತಿ ಷರತ್ತುಗಳನ್ನು ಪಾಲಿಸದಿದ್ದ ಸಂದರ್ಭಗಳಲ್ಲಿ, ಸರ್ಕಾರ ತಾನೊಂದು ಕಲ್ಯಾಣ ರಾಜ್ಯವಾಗಿ ಅಧಿಕಾರ ಚಲಾಯಿಸಬೇಕು ಎಂದು ನ್ಯಾಯಮೂರ್ತಿಗಳಾದ ನಜ್ಮಿ ವಜಿರಿ ಮತ್ತು ವಿಕಾಸ್ ಮಹಾಜನ್ ಅವರಿದ್ದ ವಿಭಾಗೀಯ ಪೀಠ ಹೇಳಿತು.
ಇಡಬ್ಲ್ಯೂಎಸ್ ವರ್ಗಕ್ಕೆ ಸಂಬಂಧಿಸಿದಂತೆ 132ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಪ್ರವೇಶಾತಿ ಅಗತ್ಯತೆಗಳನ್ನು ಉಲ್ಲಂಘಿಸುತ್ತಿವೆ. ಈ ಸಂಬಂಧ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂಬ ದೆಹಲಿ ಸರ್ಕಾರದ ಹೇಳಿಕೆ ಪರಿಗಣಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿತು.
ನ್ಯಾಯಾಲಯದ ಅವಲೋಕನಗಳು
ಇಡಬ್ಲ್ಯೂಎಸ್ ವರ್ಗದ ಅಡಿಯಲ್ಲಿ ಖಾಸಗಿ ಭೂಮಿಯಲ್ಲಿರುವ ಖಾಸಗಿ ಶಾಲೆಗಳು ಶೇ 25ರಷ್ಟು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕು. ಇದಕ್ಕಾಗಿ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗೆ ಮಾಡಿದ ವೆಚ್ಚದ ಆಧಾರದ ಮೇಲೆ ಶುಲ್ಕ ಮರುಪಾವತಿ ಇತ್ಯಾದಿಗಳನ್ನು ಮಾಡಲಾಗುತ್ತದೆ.
ಸರ್ಕಾರಿ ಭೂಮಿಯಲ್ಲಿರುವ ಖಾಸಗಿ ಶಾಲೆಗಳು ಕೂಡ ಶೇ 25ರಷ್ಟು ಇಡಬ್ಲ್ಯೂಎಸ್ ವರ್ಗದ ವಿದ್ಯಾರ್ಥಿಗಳನ್ನು ಪ್ರವೇಶ ಹಂತದಲ್ಲಿ ಸೇರಿಸಿಕೊಳ್ಳಬೇಕು. ಈ ವರ್ಗದ ಶೇಕಡಾ 5ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರ ಮರುಪಾವತಿ ಮಾಡಲಿದ್ದು ಉಳಿದ ಶೇ 20ರಷ್ಟು ಇಡಬ್ಲ್ಯೂಎಸ್ ಅಭ್ಯರ್ಥಿಗಳ ಶೈಕ್ಷಣಿಕ ವೆಚ್ಚಗಳು ಖಾಸಗಿ ಶಾಲೆಗಳ ಜವಾಬ್ದಾರಿ. ಏಕೆಂದರೆ ಇದು ಸರ್ಕಾರಿ ಭೂಮಿ ಮಂಜೂರು ಮಾಡಲು ಅವರಿಗೆ ವಿಧಿಸಲಾಗಿರುವ ಷರತ್ತು.
ಖಾಸಗಿ ಮತ್ತು ಸರ್ಕಾರಿ ಜಮೀನುಗಳಲ್ಲಿರುವ ಖಾಸಗಿ ಶಾಲೆಗಳಲ್ಲಿ ಬಾಕಿ ಉಳಿದಿರುವ ಸೀಟುಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಭರ್ತಿ ಮಾಡಲು ಸರ್ಕಾರ ಎಲ್ಲಾ ಪ್ರಯತ್ನ ಮಾಡಬೇಕಾಗಿದೆ ; ಅಂದರೆ, ಪ್ರತಿ ವರ್ಷ ಶೇ 20ರಷ್ಟು ಖಾಲಿ ಹುದ್ದೆಗಳನ್ನು, ಕಡ್ಡಾಯವಾಗಿ ಮಾಡಲೇಬೇಕಾದ ವಾರ್ಷಿಕ ಶೇ 25ರಷ್ಟು ದಾಖಲಾತಿ ಜೊತೆಗೆ ಮಾಡಬೇಕಿದೆ.
ಸಾಮಾನ್ಯ ವರ್ಗದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ನಿಜವಾದ ಸಂಖ್ಯೆಯನ್ನು ಲೆಕ್ಕಿಸದೆ ಘೋಷಿತ ಮಂಜೂರಾತಿ ಸಾಮರ್ಥ್ಯದ ಆಧಾರದ ಮೇಲೆ ಇಡಬ್ಲ್ಯೂಎಸ್ ವರ್ಗದ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಸೀಟುಗಳನ್ನು ಪ್ರವೇಶ ಹಂತದಲ್ಲಿ (ಪ್ರಿ-ಸ್ಕೂಲ್/ನರ್ಸರಿ/ಪೂರ್ವ ಪ್ರಾಥಮಿಕ/ಕೆಜಿ ಮತ್ತು ವರ್ಗ-I) ಭರ್ತಿ ಮಾಡಲಾಗಿದೆ ಎಂಬುದನ್ನು ಕೂಡ ಸರ್ಕಾರ ಖಚಿತಪಡಿಸಿಕೊಳ್ಳಬೇಕು.