ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 43ರ ಅಡಿ ಖಾಸಗಿ ವಾಹನಗಳು ಸಾರ್ವಜನಿಕ ಸ್ಥಳವಲ್ಲ: ಸುಪ್ರೀಂ ಕೋರ್ಟ್‌

ರಸ್ತೆಯಲ್ಲಿ ನಿಲ್ಲಿಸಿರುವ ಖಾಸಗಿ ವಾಹನಗಳಿಂದ ನಿಷೇಧಿತ ವಸ್ತುವನ್ನು ವಶಪಡಿಸಿಕೊಂಡಾಗ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 43 ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.
Audi car
Audi car
Published on

ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌ ಕಾಯಿದೆ) ಸೆಕ್ಷನ್‌ 43ರ ಅಡಿ 'ಸಾರ್ವಜನಿಕ ಸ್ಥಳ'ವನ್ನು ವಿವರಿಸಿರುವುದರ ವ್ಯಾಪ್ತಿಗೆ ಖಾಸಗಿ ವಾಹನವು ಒಳಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿದೆ (ಬೂಟಾ ಸಿಂಗ್‌ ವರ್ಸಸ್‌ ಹರಿಯಾಣ ರಾಜ್ಯ).

ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಲಾಗಿರುವ ವಾಹನದಲ್ಲಿ ನಿಷೇಧಿತ ಅಮಲು ಪದಾರ್ಥ ವಶಪಡಿಸಿಕೊಂಡರೂ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 43 ಅನ್ವಯಿಸುವುದಿಲ್ಲ. ಬದಲಿಗೆ ಸೆಕ್ಷನ್‌ 42 ಅನ್ವಯಿಸಲಿದೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಮತ್ತು ಕೆ ಎಂ ಜೋಸೆಫ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

“ಸೆಕ್ಷನ್ 43ರ ವಿವರಣೆಯು ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 43ರಲ್ಲಿ ವಿವರಿಸಿದಂತೆ ಖಾಸಗಿ ವಾಹನವು ‘ಸಾರ್ವಜನಿಕ ಸ್ಥಳ’ ಎಂಬ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತದೆ. ಜಗರಾಜ್ ಸಿಂಗ್ ಅಲಿಯಾಸ್ ಹನ್ಸಾ ಪ್ರಕರಣದಲ್ಲಿ ಈ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ, ಸಂಬಂಧಿತ ನಿಬಂಧನೆಯು ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 43 ಆಗಿರುವುದಿಲ್ಲ. ಆದರೆ ಪ್ರಕರಣವು ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 42ರ ಅಡಿಯಲ್ಲಿ ಬರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಸದರಿ ಪ್ರಕರಣ ಸೆಕ್ಷನ್ 42ರ ನಿಬಂಧನೆಗಳಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯವು ಮೂವರು ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ವಜಾಗೊಳಿಸಿದೆ. ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಕಳೆದ ವರ್ಷದ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆರೋಪಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಆಧರಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

Also Read
ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್ 53ರ ಅಡಿ ಅಧಿಕಾರಿಗಳನ್ನು ಪೊಲೀಸರು ಎಂದು ಗುರುತಿಸಿ ಬಹುಮತದ ತೀರ್ಪು ನೀಡಿದ ಸುಪ್ರೀಂ

ರಸ್ತೆಯಲ್ಲಿ ನಿಲ್ಲಿಸಿದ್ದ ಜೀಪಿನಲ್ಲಿ ಅಮಲು ಪದಾರ್ಥವಾದ ಗಸಗಸೆಯೊಂದಿಗೆ (ಪಾಪ್ಪಿ ಸ್ಟ್ರಾ) ಆರೋಪಿಗಳು ಸಿಕ್ಕಿಬಿದ್ದಿದ್ದರು. ಸುಳಿವನ್ನು ಆಧರಿಸಿ ದಾಳಿ ಮಾಡಿದಾಗ ಜೀಪಿನಲ್ಲಿ ಎರಡು ಚೀಲದಷ್ಟು ನಿಷೇಧಿತ ಪದಾರ್ಥ ದೊರೆತಿತ್ತು ಎಂದು ತನಿಖಾಧಿಕಾರಿಯು ತಿಳಿಸಿದ್ದರು.

ತನ್ನ ಮುಂದೆ ಇಡಲಾದ ಸಾಕ್ಷ್ಯವನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯವು ಒಬ್ಬಾತನನ್ನು ದೋಷಮುಕ್ತಗೊಳಿಸಿ, ಮೂವರನ್ನು ದೋಷಿಗಳು ಎಂದು ತೀರ್ಪು ನೀಡಿತ್ತು. ಅವರಿಗೆ 10 ವರ್ಷ ಜೈಲು ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನು ಒಪ್ಪದ ಸುಪ್ರೀಂ ಕೋರ್ಟ್‌ ಸಾರ್ವಜನಿಕ ಸಾರಿಗೆ ವಾಹನವಾಗದಿದ್ದರೆ ಅದು ಸೆಕ್ಷನ್ 43ರ ಅಡಿಯಲ್ಲಿ “ಸಾರ್ವಜನಿಕ ಸ್ಥಳ” ಎಂಬ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದು, ಆರೋಪಿಗಳನ್ನು ಖುಲಾಸೆಗೊಳಿಸಿದೆ.

Kannada Bar & Bench
kannada.barandbench.com