ನ್ಯಾಯಮೂರ್ತಿಗಳ ಮೌಖಿಕ ಅಭಿಪ್ರಾಯ ವರದಿ ವೇಳೆ ದಾವೆದಾರರಿಗೆ ಹಾನಿಯಾಗದಂತೆ ಮಾಧ್ಯಮಗಳು ಗಮನಹರಿಸಬೇಕು: ಕೇರಳ ಹೈಕೋರ್ಟ್

ಮೂಲಭೂತ ಹಕ್ಕು ಎಂದು ಗುರುತಿಸಲಾದ ಖಾಸಗಿತನದ ಹಕ್ಕು ಪತ್ರಿಕಾರಂಗ ಸೇರಿದಂತೆ ಇತರೆ ಖಾಸಗಿ ನಾಗರಿಕರ ಕ್ರಿಯೆಗಳಿಂದ ರಕ್ಷಣೆ ಪಡೆಯುವುದನ್ನೂ ಒಳಗೊಂಡಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
Media Trial
Media Trial
Published on

ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ನೀಡುವ ಮೌಖಿಕ ಹೇಳಿಕೆಗಳನ್ನು ವರದಿ ಮಾಡುವಾಗ ಎಚ್ಚರವಹಿಸುವಂತೆ ಮಾಧ್ಯಮಗಳಿಗೆ ಕೇರಳ ಹೈಕೋರ್ಟ್‌ ಗುರುವಾರ ಕಿವಿಮಾತು ಹೇಳಿದೆ [ಪ್ರಿಯಾ ವರ್ಗೀಸ್ ಮತ್ತು ಡಾ. ಜೋಸೆಫ್ ಸ್ಕಾರಿಯಾ ಇನ್ನಿತರರ ನಡುವಣ ಪ್ರಕರಣ].

ನ್ಯಾಯಾಧೀಶರ ಮೌಖಿಕ ಹೇಳಿಕೆಗಳನ್ನು ಆಧರಿಸಿ ಮಾಧ್ಯಮಗಳು ಮಾಡುವ ನ್ಯಾಯಸಮ್ಮತವಲ್ಲದ ಟೀಕೆ ಮತ್ತು ಅವಲೋಕನಗಳಿಂದ ದಾವೆದಾರರಿಗೆ ಉಂಟಾಗುವ ಹಾನಿಯ ಬಗ್ಗೆ ಪತ್ರಿಕೆಗಳು ಎಚ್ಚರವಾಗಿರಬೇಕು ಎಂದು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಮೊಹಮ್ಮದ್ ನಿಯಾಸ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

"ಸಾಮಾನ್ಯವಾಗಿ ನ್ಯಾಯಾಧೀಶರು ನ್ಯಾಯನಿರ್ಣಯ ಪ್ರಕ್ರಿಯೆಯಲ್ಲಿ ಮಾಡುವ ಮೌಖಿಕ ಹೇಳಿಕೆಗಳನ್ನು ಆಧರಿಸಿ ದಾವೆದಾರರ ಕುರಿತು ಮಾಧ್ಯಮಗಳು ಮಾಡುವ ನ್ಯಾಯಸಮ್ಮತವಲ್ಲದ ಟೀಕೆ ಮತ್ತು ಅವಲೋಕನಗಳಿಂದ ಅವರ ಘನತೆ ಮತ್ತು ಪ್ರತಿಷ್ಠೆಗೆ ಉಂಟಾಗುವ ಹಾನಿಯ ಬಗ್ಗೆ ಮಾಧ್ಯಮಗಳು ಗಮನ ಹರಿಸದೆ ಇರಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಮುಂದೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಚರ್ಚೆ ಮುಂದೂಡುವ ಮೂಲಕ ಸಂಯಮದಿಂದ ವರ್ತಿಸುವಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ನ್ಯಾಯಲಯಗಳಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್‌ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ವಿನಂತಿಸಿದ್ದಾರೆ ಎಂದು ಪೀಠ ಒತ್ತಿ ಹೇಳಿದೆ.

ಮೂಲಭೂತ ಹಕ್ಕು ಎಂದು ಗುರುತಿಸಲಾದ ಖಾಸಗಿತನದ ಹಕ್ಕು ಪತ್ರಿಕಾರಂಗ ಸೇರಿದಂತೆ ಇತರೆ ಖಾಸಗಿ ನಾಗರಿಕರು ಎಸಗುವ ಕ್ರಿಯೆಗಳಿಂದ ‌ರಕ್ಷಣೆ ಪಡೆಯುವುದನ್ನೂ ಒಳಗೊಂಡಿದೆ. ಆದ್ದರಿಂದ, ಸುದ್ದಿಗಳನ್ನು ವರದಿ ಮಾಡುವಾಗ ಜವಾಬ್ದಾರಿಯುತ ಪತ್ರಿಕೋದ್ಯಮ ನಡಾವಳಿ ಸಂಹಿತೆಯನ್ನು ಮಾಧ್ಯಮಗಳು ಅಳವಡಿಸಿಕೊಳ್ಳಬೇಕು ಎಂದು ಅದು ಅಭಿಪ್ರಾಯಪಟ್ಟಿದೆ.

ಸಹ ಪ್ರಾಚಾರ್ಯರಾಗಿ  ನೇಮಕಗೊಳ್ಳಲು ತನ್ನ ದಾಖಲೆಗಳನ್ನು ಮರುಪರಿಶೀಲಿಸುವಂತೆ ಕಣ್ಣೂರು ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಪ್ರಿಯಾ ವರ್ಗೀಸ್ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಪ್ತ ಕಾರ್ಯದರ್ಶಿಯಾಗಿರುವ ಕೆ ಕೆ ರಾಗೇಶ್ ಅವರನ್ನು ವರ್ಗೀಸ್ ವಿವಾಹವಾಗಿರುವುದರಿಂದ ಈ ಪ್ರಕರಣ ಮಾಧ್ಯಮಗಳ ಗಮನವನ್ನು ಸಾಕಷ್ಟು ಸೆಳೆದಿತ್ತು.

ಪ್ರಿಯಾ ಅವರು ಹುದ್ದೆಗೆ ನೇಮಕಗೊಳ್ಳಲು ಅಗತ್ಯವಾದ ಬೋಧನಾ ಅನುಭವ ಹೊಂದಿಲ್ಲ ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಏಕಸದಸ್ಯ ಪೀಠ ಹೇಳಿತ್ತು.  ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ರ‍್ಯಾಂಕ್ ಪಟ್ಟಿಯಲ್ಲಿ ಪ್ರಿಯಾ ನಂತರದ ಸ್ಥಾನದಲ್ಲಿರುವ ಡಾ. ಜೋಸೆಫ್ ಸ್ಕರಿಯಾ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿತ್ತು. ಪ್ರಿಯಾ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿ ಸಹ ಪ್ರಾಚಾರ್ಯ ಹುದ್ದೆಗೆ ಪ್ರಿಯಾ ಅವರ ಹೆಸರನ್ನು ಪರಿಗಣಿಸುವಂತೆ ನಿರ್ದೇಶಿಸಿತು. ಈ ತೀರ್ಪು ಬರುವ ಮುನ್ನವೇ ಮಾಧ್ಯಮಗಳು ನೀಡಿದ ಹೇಳಿಕೆಗಳ ಬಗ್ಗೆ ಹೈಕೋರ್ಟ್‌ ಈಗ ಕಿವಿಮಾತು ಹೇಳಿದೆ.

“ಶೈಕ್ಷಣಿಕ ಪ್ರಕರಣಗಳಲ್ಲಿ ಆಕ್ಷೇಪ ಎತ್ತಲಾದ ತೀರ್ಪು ಯಾವ ಕಾರಣಕ್ಕೆ ಮಾಧ್ಯಮದ ಗಮನ ಸೆಳೆದಿವೆ ಎನ್ನುವ ಸನ್ನಿವೇಶಗಳು ಭಯ ಹುಟ್ಟಿಸುತ್ತವೆ. ಆ ಬಳಿಕ ಪತ್ರಿಕೆ/ ಸುದ್ದಿವಾಹಿನಿ ಹಾಗೂ ಅಗಾಧ ರೀತಿಯಲ್ಲಿ ಬೆಳೆದಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸೃಷ್ಟಿಸುವ ಹೆಚ್ಚುವರಿ ಗೊಂದಲಗಳನ್ನು ನ್ಯಾಯಾಲಯ ಎದುರಿಸಬೇಕಾಗುತ್ತದೆ” ಎಂದು ಅದು ಹೇಳಿದೆ.

ಇದು ತೀರ್ಪು ನೀಡಲು ಮಾತ್ರವಲ್ಲದೆ ದಾವೆದಾರರ ಹಕ್ಕುಗಳಿಗೂ ಹಾನಿಯನ್ನುಂಟುಮಾಡುತ್ತದೆ ಎಂದ ಪೀಠ ಅಂತಹ ಪ್ರಕರಣಗಳ ವಿಚಾರಣೆಯನ್ನು ವರದಿ ಮಾಡುವಾಗ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ಸಲಹೆ ನೀಡಿತು.

Kannada Bar & Bench
kannada.barandbench.com