ಭ್ರಷ್ಟಾಚಾರ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಯಡಿಯೂರಪ್ಪ ಮತ್ತು ಸಂಬಂಧಿಕರಿಗೆ 2 ವಾರಗಳ ಕಾಲಾವಕಾಶ ನೀಡಿದ ಹೈಕೋರ್ಟ್

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಸುವಂತೆ ಟಿ ಜೆ ಅಬ್ರಹಾಂ ಅವರು ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ.
BS Yediyurappa, Karnataka High Court
BS Yediyurappa, Karnataka High Court

ತಮ್ಮ ವಿರುದ್ಶದ ಭ್ರಷ್ಟಾಚಾರದ ತನಿಖೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಅವರ ಮಗ ಹಾಗೂ ಕುಟುಂಬ ಸದಸ್ಯರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಸೂಚಿಸಿದೆ.

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿತ್ತು.

"ಪ್ರತಿವಾದಿಗಳ ಪರವಾಗಿ ಹಾಜರಾದ ವಕೀಲರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯಾವಕಾಶ ಕೋರಿದ್ದಾರೆ. ಅವರಿಗೆ ತಮ್ಮ ಆಕ್ಷೇಪಣಾ ಹೇಳಿಕೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಮತ್ತೊಂದು ಕಡೆಯ ವಕೀಲರಿಗೆ ಮುಂಚಿತವಾಗಿ ಪ್ರತಿಗಳನ್ನು ನೀಡಿದ ಬಳಿಕ ತಮ್ಮ ವಾದಗಳನ್ನು ಒಳಗೊಂಡ ಸಾರಾಂಶವನ್ನು ಎರಡೂ ಕಡೆಯವರು ಸಲ್ಲಿಸಬೇಕು” ಎಂದು ನ್ಯಾ. ಸುನಿಲ್‌ ದತ್‌ ಅವರಿದ್ದ ಪೀಠ ತಿಳಿಸಿದೆ. ಈ ಹಿಂದೆ ಆಗಸ್ಟ್ ಮೊದಲ ವಾರದಲ್ಲಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿತ್ತು.

ಅಬ್ರಹಾಂ ಆರಂಭದಲ್ಲಿ ಯಡಿಯೂರಪ್ಪ ಹಾಗೂ ಇತರರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆದರೆ, ಭ್ರಷ್ಟಾಚಾರ ತಡೆ ಕಾಯಿದೆಯ ಅಡಿಯಲ್ಲಿ ವಿಚಾರಣೆಗೆ ರಾಜ್ಯಪಾಲರು ಅನುಮತಿ ನಿರಾಕರಿಸಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡಿದ್ದ ನ್ಯಾಯಾಲಯ 8 ಜುಲೈ, 2021ರಂದು ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಅಬ್ರಾಹಂ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನಲ್ಲಿ ಮೊದಲು ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ನ್ಯಾಯಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು. ಆದರೆ ಅರ್ಜಿದಾರರಿಗೆ ವೈಯಕ್ತಿಕ ಹಿತಾಸಕ್ತಿ ಇರುವುದರಿಂದ ಅರ್ಜಿಯನ್ನು ಪಿಐಎಲ್ ಆಗಿ ಪರಿಗಣಿಸಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತ್ತು. ಬಳಿಕ ಪ್ರಕರಣವನ್ನು ನ್ಯಾ. ಸುನಿಲ್ ದತ್‌ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಪಟ್ಟಿ ಮಾಡಲು ಸೂಚಿಸಿತು.

Also Read
ಭ್ರಷ್ಟಾಚಾರ ಪ್ರಕರಣ: ಬಿಎಸ್‌ವೈ, ಪುತ್ರ ವಿಜಯೇಂದ್ರ ಒಳಗೊಂಡು ಒಂಭತ್ತು ಮಂದಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಯಡಿಯೂರಪ್ಪ ಕುಟುಂಬ ಸದಸ್ಯರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಸತಿ ಯೋಜನೆಗೆ ಸಂಬಂಧಿಸಿದಂತೆ ಸುಮಾರು 12 ಕೋಟಿ ರೂಪಾಯಿಗಳಷ್ಟು ಲಂಚ ಪಡೆದಿದ್ದಾರೆ ಅಲ್ಲದೆ ಅಕ್ರಮವಾಗಿ ರೂ 17.5 ಕೋಟಿಗಳನ್ನು ಸಂಗ್ರಹಿಸಿದ್ದಾರೆ ಎಂದು ಅಬ್ರಾಹಂ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. 20 ನವೆಂಬರ್ 2019ರಂದು ಅಬ್ರಹಾಂ ಯಡಿಯೂರಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರನ್ನು ಸಂಪರ್ಕಿಸಿದ್ದರು. ಆದರೆ, ಅದನ್ನು ತಿರಸ್ಕರಿಸಲಾಗಿತ್ತು.

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸುವಂತೆ ಕೋರಿರುವ ಅರ್ಜಿಯು ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಮತ್ತಿತರರು ಲಂಚ ಸ್ವೀಕರಿಸಿರುವುದು ಮತ್ತು ನಗದು ಸಂಗ್ರಹಿಸಿರುವ ಆರೋಪ ಕುರಿತು ಎಫ್‌ಐಆರ್‌ ದಾಖಲಿಸಲು ಮನವಿ ಮಾಡಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 13ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com