ಮುಕ್ತ ನ್ಯಾಯಾಲಯದಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆಯಡಿ ವಿಚಾರಣೆ ನಡೆಸಿದರೂ ವಿಡಿಯೋ ಚಿತ್ರೀಕರಣ ಕಡ್ಡಾಯ: ಬಾಂಬೆ ಹೈಕೋರ್ಟ್

ಎಸ್‌ಸಿ/ಎಸ್‌ಟಿ ಕಾಯಿದೆಯಡಿಯ ಅಪರಾಧಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲು ಕಾಯಿದೆಯ ಸೆಕ್ಷನ್ 15 ಎ (10) ಅವಕಾಶ ನೀಡುತ್ತದೆ. ಇದು ಕಡ್ಡಾಯ ನಿಬಂಧನೆಯೇ ವಿನಾ ಬರೀ ನಿರ್ದೇಶನವಲ್ಲ ಎಂದ ಪೀಠ.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ (ಎಸ್‌ಸಿ/ಎಸ್‌ಟಿ ಕಾಯಿದೆ) ಅಡಿಯ ಎಲ್ಲಾ ವಿಚಾರಣೆಗಳು ಮುಕ್ತ ನ್ಯಾಯಾಲಯದಲ್ಲಿ ನಡೆದರೂ ಕೂಡ ಅವುಗಳನ್ನು ವಿಡಿಯೋ ಚಿತ್ರೀಕರಣ ಮಾಡಬೇಕಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಬುಧವಾರ ತಿಳಿಸಿದೆ.

ಇದೇ ವೇಳೆ ಮಹಾರಾಷ್ಟ್ರದ ನ್ಯಾಯಾಲಯಗಳಲ್ಲಿ ವೀಡಿಯೊ ಚಿತ್ರೀಕರಣ ಸೌಲಭ್ಯಗಳ ಕೊರತೆ ಇರುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಸಾರಂಗ್ ವಿ ಕೊತ್ವಾಲ್ ಅವರಿದ್ದ ವಿಭಾಗೀಯ ಪೀಠ ಕಾಯಿದೆಯಡಿ, ಇಂತಹ ಸೌಲಭ್ಯ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಇದನ್ನು ಆದಷ್ಟು ಬೇಗ ಮಾಡಬೇಕು ಎಂದಿದೆ.

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಸಾರಂಗ್ ವಿ ಕೊತ್ವಾಲ್
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಸಾರಂಗ್ ವಿ ಕೊತ್ವಾಲ್

ಆದರೆ, ಅಂತಹ ಸೌಲಭ್ಯಗಳನ್ನು ಒದಗಿಸುವವರೆಗೆ ನ್ಯಾಯಾಲಯಗಳಲ್ಲಿ ವಿಚಾರಣೆ ನಿಲ್ಲಬಾರದು. ವಿಡಿಯೋ ರೆಕಾರ್ಡಿಂಗ್ ಇಲ್ಲದೆ ಪ್ರಕರಣಗಳ ವಿಚಾರಣೆ ಮುಂದುವರಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

"ಅಂತಹ ಸೌಲಭ್ಯ ಒದಗಿಸುವವರೆಗೆ, ಸೌಲಭ್ಯಗಳನ್ನು ಒದಗಿಸದ ನ್ಯಾಯಾಲಯಗಳು, ವಿಶೇಷವಾಗಿ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವು ಅಪಾಯದಲ್ಲಿರುವಾಗ ವಿಚಾರಣೆಯನ್ನು ವಿಡಿಯೋ ರೆಕಾರ್ಡ್ ಮಾಡದೆ ಮುಂದುವರಿಯಬಹುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಮ್ಮ ವಿರುದ್ಧದ ರ‍್ಯಾಗಿಂಗ್‌ ಮತ್ತು ವಿದ್ಯಾಥಿನಿಯ ಜಾತಿ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಸಿ/ಎಸ್‌ಟಿ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ಕೋರಿ ಟಿಎನ್ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಲ್ಲಿಸಿದ್ದ ಮೇಲ್ಮನವಿ ಇದಾಗಿದೆ.

ಎಸ್‌ಸಿ/ಎಸ್‌ಟಿ ಕಾಯಿದೆಯ ಉದ್ದೇಶವನ್ನು ಪರಿಗಣಿಸಿ ವಿಚಾರಣೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್‌ನ ಎರಡು ಏಕಸದಸ್ಯ ಪೀಠಗಳು ವ್ಯತಿರಿಕ್ತ ನಿಲುವು ತಳೆದಿದ್ದವು. ಹೀಗಾಗಿ ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿತ್ತು.

ಎಸ್‌ಸಿ/ಎಸ್‌ಟಿ ಕಾಯಿದೆಯಡಿಯ ಅಪರಾಧಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲು ಕಾಯಿದೆಯ ಸೆಕ್ಷನ್ 15 ಎ (10) ಅವಕಾಶ ನೀಡುತ್ತದೆ. ಇದು ಕಡ್ಡಾಯ ನಿಬಂಧನೆಯಾಗಿದೆಯೇ ವಿನಾ ಬರೀ ನಿರ್ದೇಶನವಲ್ಲ ಎಂದು ಬುಧವಾರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಈ ತೀರ್ಪು ಭವಿಷ್ಯದ ಪ್ರಕರಣಗಳಿಗೆ ಅನ್ವಯಿಸಲಿದ್ದು ಈ ಹಿಂದಿನ ವಿಚಾರಣೆಗಳಿಗೆ ಅಲ್ಲ ಎಂದು ಅದು ಇದೇ ವೇಳೆ ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com