ಶಿಕ್ಷೆಯೇ ಆದ ತನಿಖೆ: ಪತ್ರಕರ್ತ ಜುಬೈರ್‌ಗೆ ಜಾಮೀನು ನೀಡಲು ಅರ್ನಾಬ್ ತೀರ್ಪು ಅವಲಂಬಿಸಿದ ಸುಪ್ರೀಂ ಕೋರ್ಟ್‌

ನವೆಂಬರ್ 2020ರಲ್ಲಿ ಪ್ರಕಟವಾದ ಅರ್ನಾಬ್ ಗೋಸ್ವಾಮಿ ಪ್ರಕರಣದ ತೀರ್ಪಿನ ಆಧಾರದಲ್ಲಿ ಎಲ್ಲಾ ಪ್ರಕರಣಗಳನ್ನು ಒಗ್ಗೂಡಿಸಿ ಜುಬೈರ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರ್ಧರಿಸಿತು.
Mohammed Zubair and Supreme Court
Mohammed Zubair and Supreme Court

ಹಲವು ತನಿಖೆಗಳನ್ನು ಆರಂಭಿಸುವ ಮೂಲಕ ಪತ್ರಕರ್ತ, ಆಲ್ಟ್‌ನ್ಯೂಸ್‌ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ವಿರುದ್ಧ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯನ್ನು ಅವಿರತವಾಗಿ ದುಡಿಸಿಕೊಳ್ಳಲಾಗಿತ್ತು ಎಂದು ಸುಪ್ರೀಂ ಕೋರ್ಟ್‌ ಜುಬೈರ್‌ಗೆ ನೀಡಿರುವ ಜಾಮೀನು ಆದೇಶದಲ್ಲಿ ಹೇಳಿದೆ [ಮೊಹಮ್ಮದ್ ಜುಬೇರ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ]. ಆ ಮೂಲಕ ಜುಬೈರ್‌ಗೆ ತನಿಖಾ ಪ್ರಕ್ರಿಯೆಯನ್ನೇ ಒಂದು ಶಿಕ್ಷೆಯನ್ನಾಗಿ ಮಾಡಲು ಮುಂದಾದ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ಸೂಚಿಸಿದೆ.

ಇಂತಹ ಹಲವು ಎಫ್‌ಐಆರ್‌ಗಳಿಂದಾಗಿ ಜುಬೈರ್‌ ಅವರು ಒಂದೇ ವ್ಯಾಜ್ಯ ಕಾರಣಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ವಕೀಲರನ್ನು ನೇಮಿಸಿಕೊಳ್ಳುವ ಸ್ಥಿತಿ ಎದುರಾಯಿತು. ಜಾಮೀನಿಗಾಗಿ ಹಲವು ಅರ್ಜಿಗಳನ್ನು ಸಲ್ಲಿಸುವಂತಾಯಿತು, ವಿವಿಧ ಜಿಲ್ಲೆಗಳಿಗೆ ಅಲೆಯುವಂತಾಯಿತು. ತನಿಖೆಗಾಗಿ ಎರಡು ರಾಜ್ಯಗಳ ನಡುವೆ ಓಡಾಡುವಂತಾಯಿತು. ವಿವಿಧ ನ್ಯಾಯಾಲಯಗಳಲ್ಲಿ ತನ್ನನ್ನು ಸಮರ್ಥಿಸಿಕೊಳ್ಳುವಂತಾಯಿತು ಎಂದು ನ್ಯಾಯಮೂರ್ತಿಗಳಾದ ಡಾ. ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಆದೇಶದಲ್ಲಿ ತಿಳಿಸಿದೆ.

ಹೀಗಾಗಿ ನವೆಂಬರ್ 2020ರಲ್ಲಿ ನೀಡಲಾದ ಅರ್ನಾಬ್ ಗೋಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದ ತೀರ್ಪಿನ ಆಧಾರದಲ್ಲಿ ಎಲ್ಲಾ ಪ್ರಕರಣಗಳನ್ನು ಒಗ್ಗೂಡಿಸಿ ಜುಬೈರ್‌ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರ್ಧರಿಸಿತು. ಅರ್ನಾಬ್‌ ಪ್ರಕರಣದ ವಿಚಾರಣೆಯಲ್ಲೂ ನ್ಯಾ. ಚಂದ್ರಚೂಡ್‌ ಭಾಗಿಯಾಗಿದ್ದರು. ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಪತ್ರಕರ್ತರು ಪ್ರತೀಕಾರದ ಬೆದರಿಕೆಗೆ ತಣ್ಣಗಾಗದೆ ಅಧಿಕಾರರೂಢರಿಗೆ ಸತ್ಯ ತೋರಿಸುತ್ತಿರುವವರೆಗೆ ಭಾರತದ ಸ್ವಾತಂತ್ರ್ಯ ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿತ್ತು.

ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಎಲ್ಲಾ ಎಫ್‌ಐಆರ್‌ಗಳನ್ನು ಕಳೆದ ವಾರ ದೆಹಲಿ ವಿಶೇಷ ಸೆಲ್‌ಗೆ ವರ್ಗಾಯಿಸಿದ್ದ ಸುಪ್ರೀಂ ಕೋರ್ಟ್‌ ಟ್ವೀಟ್‌ ಆಧರಿಸಿ ದಾಖಲಿಸಲಾಗಿದ್ದ ಆ ಆರು ಪ್ರಕರಣಗಳಲ್ಲಿಯೂ ಜುಬೈರ್‌ ಅವರಿಗೆ ಜಾಮೀನು ನೀಡಿತ್ತು. ಸೋಮವಾರ ಜಾಮೀನು ತೀರ್ಪಿನ ವಿವರಗಳು ಹೊರಬಿದ್ದಿವೆ.

ತೀರ್ಪಿನ ಪ್ರಮುಖ ಅವಲೋಕನಗಳು

  • ತನಿಖಾ ಪ್ರಕ್ರಿಯೆಯೇ ಶಿಕ್ಷೆಯಾಗಿ ಮಾರ್ಪಟ್ಟ ಕ್ರಿಮಿನಲ್ ಪ್ರಕ್ರಿಯೆಯ ವಿಷವ್ಯೂಹದಲ್ಲಿ ಜುಬೈರ್‌ ಸಿಲುಕಿದರು. ಅರ್ಜಿದಾರರ ತೊಂದರೆಗಳು ದ್ವಿಗುಣಗೊಳ್ಳುವಂತೆ ಕೆಲವು ಕಡೆ ಹೊಸ ಎಫ್‌ಐಆರ್‌ಗಳನ್ನು ನೊಂದಾಯಿಸಿದರೆ ಇನ್ನೂ ಕೆಲವೆಡೆ 2021ರ ನಿಷ್ಕ್ರಿಯ ಎಫ್‌ಐಆರ್‌ಗಳನ್ನು ಸಕ್ರಿಯಗೊಳಿಸಲಾಯಿತು.

  • ನ್ಯಾಯಯುತ ತನಿಖಾ ಪ್ರಕ್ರಿಯೆಯಲ್ಲಿ ಎಲ್ಲಾ ಎಫ್‌ಐಆರ್‌ಗಳಲ್ಲಿ ತನಿಖೆಯ ಸಮಗ್ರತೆಯನ್ನು ಒಟ್ಟು ಸೇರಿಸಿ ಒಬ್ಬ ತನಿಖಾಧಿಕಾರಿಗೆ ನೀಡಬೇಕು. ಕಾನೂನು ಜಾರಿ ಸಂಸ್ಥೆಗಳ ವಿವಿಧ ಗುಂಪುಗಳು ನಡೆಸುವ ಪ್ರತ್ಯೇಕ ತನಿಖೆಗೆ ವಿರುದ್ಧವಾಗಿ ಅರ್ಜಿದಾರರ ಟ್ವೀಟ್‌ ಕುರಿತಂತೆಯೇ ಎಲ್ಲಾ ಎಫ್‌ಐಆರ್‌ಗಳು ಹೇಳುವುದರಿಂದ ಅವುಗಳನ್ನು ಕ್ರೋಢೀಕರಿಸುವ ಅಗತ್ಯವಿದೆ.

  • ತನಿಖಾವಧಿ ಸೇರಿದಂತೆ ಅಪರಾಧ ನ್ಯಾಯ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ವ್ಯಕ್ತಿಗಳನ್ನು ಬಂಧಿಸುವ ಅಧಿಕಾರ ಪೊಲೀಸರಿಗೆ ಇದ್ದರೂ ಅದು ಮನಸೋಇಚ್ಛೆಯಿಂದ ಕೂಡಿರುವಂತಿಲ್ಲ.

  • ಅರ್ನೇಶ್ ಕುಮಾರ್ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣದಲ್ಲಿ ತಿಳಿಸಿರುವಂತೆ ಪೊಲೀಸ್‌ ಅಧಿಕಾರಿಗಳು ತಮ್ಮೆದುರಿನ ಪ್ರಕರಣಕ್ಕೆ ವಿವೇಚನೆ ಬಳಸುವ ಕರ್ತವ್ಯ ನಿರ್ವಹಿಸಬೇಕು. ಬಂಧನಕ್ಕೂ ಮೊದಲು ಸಿಆರ್‌ಪಿಸಿ ಸೆಕ್ಷನ್ 41 ರಲ್ಲಿನ ಷರತ್ತುಗಳನ್ನು ಪೂರೈಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

  • ವಿವೇಚನೆ ಇಲ್ಲದೆ ಕಾನೂನನ್ನು ಪರಿಗಣಿಸದೇ ಬಂಧನಕ್ಕೆ ಮುಂದಾದರೆ ಅದು ಅಧಿಕಾರದ ದುರುಪಯೋಗವಾಗುತ್ತದೆ. ಕ್ರಿಮಿನಲ್‌ ಕಾನೂನು ಮತ್ತು ಅದರ ಪ್ರಕ್ರಿಯೆಗಳು ಕಿರುಕುಳದ ಸಾಧನವಾಗಬಾರದು.

  • ಜುಬೈರ್‌ ಟ್ವೀಟ್‌ಗಳನ್ನು ಮಾಡದಂತೆ ತಡೆಯಬೇಕು ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಗರಿಮಾ ಪರ್ಶದ್‌ ಅವರು ಮಾಡಿದ್ದ ಮನವಿ ಪುರಸ್ಕರಿಸಲಾಗದು.

  • ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅರ್ಹತೆ ಇರುವ ನಾಗರಿಕನೊಬ್ಬನಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸದಂತೆ ಸರಾಸಗಟಾಗಿ ಆದೇಶ ಹೊರಡಿಸುವುದು ನಿರ್ಬಂಧಿಸುವ ಆದೇಶವಾಗುತ್ತದೆ (ಗ್ಯಾಗ್‌ ಆರ್ಡರ್‌). ಇಂತಹ ಆದೇಶಗಳು ವಾಕ್‌ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.

Kannada Bar & Bench
kannada.barandbench.com