ಪರಿಷತ್‌ನಲ್ಲೂ ಅಂಗೀಕಾರ ಪಡೆದ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ; ಕಾಯಿದೆ ಆಗಲು ರಾಜ್ಯಪಾಲರ ಅಂಕಿತವಷ್ಟೇ ಬಾಕಿ

ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ವಿಧಾನ ಪರಿಷತ್‌ನಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ವಿಧೇಯಕವು ಕಾಯಿದೆ ರೂಪ ಪಡೆಯಲು ರಾಜ್ಯಪಾಲರ ಅಂಕಿತ ಮಾತ್ರ ಬಾಕಿ ಇದೆ. ಇದರೊಂದಿಗೆ ರಾಜ್ಯದ ವಕೀಲರ 2 ವರ್ಷಗಳ ಹೋರಾಟ ಫಲಪ್ರದವಾಗಿದೆ.
Souvrna Soudha, Belagavi
Souvrna Soudha, Belagavi

ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಸೇರಿ ಮೂರು ಮಸೂದೆಗಳು ಬೆಳಗಾವಿ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಅಂಗೀಕಾರಗೊಂಡಿವೆ.

ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕವು ವಿಧಾನ ಪರಿಷತ್‌ನಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ವಿಧೇಯಕವು ಕಾಯಿದೆ ರೂಪ ಪಡೆಯಲು ರಾಜ್ಯಪಾಲರ ಅಂಕಿತ ಮಾತ್ರ ಬಾಕಿ ಇದೆ. ಇದರೊಂದಿಗೆ ರಾಜ್ಯದ ವಕೀಲರ ಎರಡು ವರ್ಷಗಳ ಸುದೀರ್ಘ ಹೋರಾಟ ಫಲಪ್ರದವಾದಂತಾಗಿದೆ.

ಡಿಸೆಂಬರ್‌ 11ರಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರು ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿದ್ದರು. ಡಿಸೆಂಬರ್‌ 14ರಂದು ವಿಧಾನಸಭೆಯಲ್ಲಿ ಮಸೂದೆಗೆ ಒಪ್ಪಿಗೆ ದೊರೆತಿತ್ತು. ಶಿಷ್ಟಾಚಾರದಂತೆ ಪರಿಷತ್‌ನಲ್ಲಿಯೂ ಕಾಯಿದೆ ಅಂಗೀಕಾರಗೊಂಡಿದೆ.

ಶುಕ್ರವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್‌ ಕೆ ಪಾಟೀಲ್ ಅವರು ವಿಧಾನ ಪರಿಷತ್ತಿನಲ್ಲಿ ವಿಧೇಯಕ ಮಂಡಿಸಿ ಸದನದ ಪರ್ಯಾಲೋಚನೆಗೆ ಸೂಚಿಸಿದರು. ಸದಸ್ಯರಾದ ಅರುಣ್, ಕೆ ಎ ತಿಪ್ಪೇಸ್ವಾಮಿ, ಕೇಶವ ಪ್ರಸಾದ್, ತೇಜಸ್ವಿನಿ ಗೌಡ, ಶಶಿಲ್ ನಮೋಶಿ, ಹನುಮಂತ ರುದ್ರಪ್ಪ ನಿರಾಣಿ, ನಾಗರಾಜ್ ಯಾದವ್, ಕೋಟ ಶ್ರೀನಿವಾಸ ಪೂಜಾರಿ, ಪಿ ಎಚ್. ಪೂಜಾರ್, ಪ್ರತಾಪ್ ಸಿಂಹ ನಾಯಕ್, ಅಡಗೂರು ವಿಶ್ವನಾಥ್, ಬಿ ಕೆ ಹರಿಪ್ರಸಾದ್, ಮರಿ ತಿಬ್ಬೇಗೌಡ, ಪ್ರದೀಪ್ ಶೆಟ್ಟರ್, ರವಿಕುಮಾರ್, ಎಸ್ ವಿ ಸಂಕನೂರ್, ಜಗದೀಶ್ ಶೆಟ್ಟರ್ ವಿಧೇಯಕದ ಕುರಿತು ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು.

ಉಳಿದಂತೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಎರಡನೆ ತಿದ್ದುಪಡಿ) ವಿಧೇಯಕವನ್ನು ಸಚಿವ ಎಚ್‌ ಕೆ ಪಾಟೀಲ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಸದನದ ಪರ್ಯಾಲೋಚನೆಗೆ ಸೂಚಿಸಿದರು.

ಸದಸ್ಯರಾದ ಪಿ ಎಚ್ ಪೂಜಾರ, ಕೆ ಎ ತಿಪ್ಪೇಸ್ವಾಮಿ, ಕೇಶವ ಪ್ರಸಾದ್, ನಾಗರಾಜ್ ಯಾದವ್, ಪ್ರತಾಪ್ ಸಿಂಹ ನಾಯಕ್, ಉಮಾಶ್ರೀ, ನಜೀರ್ ಅಹ್ಮದ್‌, ರವಿಕುಮಾರ್, ಕೆ ಪಿ ನಂಜುಂಡಿ, ಅಡಗೂರು ವಿಶ್ವನಾಥ್, ಮರಿತಿಬ್ಬೇಗೌಡ, ಎಂ ಆರ್‌ ಸೀತಾರಾಂ, ಹೇಮಲತಾ ನಾಯಕ್ ಅವರು ವಿಧೇಯಕದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬೆಂಬಲ ವ್ಯಕ್ತಪಡಿಸಿದರು. ಬಳಿಕ ವಿಧೇಯಕವು ವಿಧಾನ ಪರಿಷತ್ತಿನ ಸರ್ವಾನುಮತದ ಅಂಗೀಕಾರ ಪಡೆಯಿತು.

Also Read
ವಿಧಾನಸಭೆಯಲ್ಲಿ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಅಂಗೀಕಾರ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ(ತಿದ್ದುಪಡಿ) ವಿಧೇಯಕವನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಸದನದ ಪರ್ಯಾಲೋಚನೆಗೆ ಸೂಚಿಸಿದರು. ಸದಸ್ಯರಾದ ಕೆ ಎ ತಿಪ್ಪೇಸ್ವಾಮಿ, ತೇಜಸ್ವಿನಿಗೌಡ, ಪಿ ಎಚ್ ಪೂಜಾರ್, ಜಗದೀಶ್ ಶೆಟ್ಟರ್ ವಿಧೇಯಕದ ಕುರಿತು ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು.

Related Stories

No stories found.
Kannada Bar & Bench
kannada.barandbench.com