ರಾಷ್ಟ್ರೀಯ ಸ್ವಾಸ್ಥ್ಯ ವೃತ್ತಿಗಳು ಹಾಗೂ ಸಂಬಂಧಿತ ಸೇವಾ ಕಾಯಿದೆ 2021ರ (ನ್ಯಾಷನಲ್ ಅಲೈಡ್ ಅಂಡ್ ಹೆಲ್ತ್‌ಕೇರ್ ಪ್ರೊಫೆಷನ್ಸ್ ಆಕ್ಟ್ - 2021) ನಿಬಂಧನೆಗಳನ್ನು ಅಕ್ಟೋಬರ್ 12 ರೊಳಗೆ ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಾಕೀತು ಮಾಡಿದೆ [ಭಾರತದ ವೈದ್ಯಕೀಯ ತಂತ್ರಜ್ಞಾನಗಳ ಜಂಟಿ ವೇದಿಕೆ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ]
ಮೇ 2021ರಲ್ಲೇ ಕಾನೂನು ರೂಪುಗೊಂಡಿದ್ದರೂ ಅದನ್ನು ಇನ್ನೂ ಜಾರಿಗೊಳಿಸಲಾಗಿಲ್ಲ ಎಂಬ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಕಾಯಿದೆ ಜಾರಿಗೆ ಸಂಬಂಧಿಸಿದಂತೆ 14 ರಾಜ್ಯಗಳಲ್ಲಿ ಮಾತ್ರ ರಾಜ್ಯ ಸಮಿತಿಗಳನ್ನು ರಚಿಸಲಾಗಿದೆ ಎಂದು ಅದು ಹೇಳಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕುವುದು ಕಾಯಿದೆಯ ಉದ್ದೇಶವಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
“ಈ ಸಂಸ್ಥೆಗಳ ಹೆಚ್ಚಳ ಗಂಭೀರವಾದ ಕಳವಳಕಾರಿ ವಿಚಾರ. ಸಂಸತ್ತಿನ ಕಾಯಿದೆ ಅಂತಹ ಹೆಚ್ಚಳ ತಡೆಯುವುದಕ್ಕಾಗಿ ಶಾಸಕಾಂಗದ ಮೂಲಕ ಚೌಕಟ್ಟು ಹಾಕಿದೆ. ಆದರೆ, ಮೂರು ವರ್ಷ ಕಳೆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿ ನಿರ್ವಹಿಸಲು ವಿಫಲವಾಗಿವೆ” ಎಂದು ನ್ಯಾಯಾಲಯ ನುಡಿದಿದೆ.
ಕಾಯಿದೆ ಜಾರಿಗೊಳಿಸುವಂತೆ ಕೋರಿದ್ದ ಮನವಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಕೆರಳಿತು. ಕಾಯಿದೆ ಜಾರಿಗೊಳಿಸದೆ ಇರುವುದಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಸಮರ್ಥನೆ ಕಾಣುತ್ತಿಲ್ಲ ಎಂದು ಕಿಡಿಕಾರಿತು.
ಅರ್ಜಿಗೆ ಸಂಬಂಧಿಸಂತೆ ಸೆಪ್ಟೆಂಬರ್ 2023ರಲ್ಲಿ ನೋಟಿಸ್ ನೀಡಲಾಗಿದ್ದರೂ, ಕಾಯಿದೆಯ ನಿಬಂಧನೆಗಳು ಜಾರಿಯಾಗದೆ ಉಳಿದಿವೆ . ಹೀಗಾಗಿ ಕಾಯಿದೆ ಜಾರಿಗೆ ಮಾರ್ಗಸೂಚಿ ರೂಪಿಸುವುದಕ್ಕಾಗಿ ಎರಡು ವಾರಗಳಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ಕರೆಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಅದು ನಿರ್ದೇಶನ ನೀಡಿದೆ.
ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅವರಿಗೆ ಅನುಪಾಲನಾ ವರದಿ ಸಲ್ಲಿಸಬೇಕು. ಆ ವರದಿಗಳನ್ನು ಸಂಗ್ರಹಿಸಿ ಮುಂದಿನ ವಿಚಾರಣೆ ಹೊತ್ತಿಗೆ ತನಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಕಾರ್ಯ ನಿರ್ವಹಣೆ, ಸ್ವಾಯತ್ತ ಸಂಸ್ಥೆಗಳ ಸ್ಥಾಪನೆ, ಸಂಬಂಧಿತ ಕಾಲೇಜುಗಳ ಸ್ಥಾಪನೆ ಇತ್ಯಾದಿಗಳಿಗೆ ಕೇಂದ್ರ ನಿಯಮಾವಳಿ ರೂಪಿಸಿದ ಬಳಿಕ ರಾಜ್ಯಗಳು ಸಮಿತಿ ರಚಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.