ಆಸ್ತಿ ವಿವಾದಕ್ಕೆ ಕ್ರಿಮಿನಲ್ ಅಸ್ತ್ರ ಸಲ್ಲದು: 73 ವರ್ಷದ ತಾಯಿ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

“ಪಾಲು ದಾವೆಯಲ್ಲಿ ಚೌಕಾಸಿ ಮಾಡಲು ಕ್ರಿಮಿನಲ್ ಕಾನೂನನ್ನು ಮೀಟುಗೋಲಾಗಿ ಬಳಸಲು ಅವಕಾಶವಿಲ್ಲ” ಎಂದು – ಸಿಂಗಪುರದಲ್ಲಿದ್ದ ಮಗಳು ಹೂಡಿದ್ದ ಪ್ರಕರಣ ವಜಾಗೊಳಿಸಿದ ನ್ಯಾ. ಎಂ ನಾಗಪ್ರಸನ್ನ.
High Court of Karnataka
High Court of Karnataka
Published on

ಕ್ರಿಮಿನಲ್ ಕಾನೂನನ್ನು ಜನರ ಹಕ್ಕುಗಳ ನೆರವಿಗೆ ಆಯುಧವಾಗಿಸಿಕೊಳ್ಳಲು ಅಥವಾ ವ್ಯಾಜ್ಯದಲ್ಲಿರುವ ಪಾಲು ದಾವೆಯಲ್ಲಿ ಚೌಕಾಸಿ ಮಾಡಿ ಪಕ್ಷಗಾರರೊಬ್ಬರು ತಮ್ಮ ಶಕ್ತಿ ವೃದ್ಧಿಸಿಕೊಂಡು ಅದನ್ನೊಂದು ಮೀಟುಗೋಲಾಗಿ ಪರಿವರ್ತಿಸಿಕೊಳ್ಳಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.

ತನ್ನ ಮತ್ತು ತನ್ನ  ಹಿರಿಯ ಪುತ್ರಿ ವಿರುದ್ಧ ಕಿರಿಯ ಪುತ್ರಿ ದಾಖಲು ಮಾಡಿರುವ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಬೆಂಗಳೂರಿನ 73 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಿದೆ.

Justice M Nagaprasanna
Justice M Nagaprasanna

ಪ್ರಕರಣದಲ್ಲಿ ಎರಡನೇ ಪ್ರತಿವಾದಿಯಾಗಿರುವ ಅರ್ಜಿದಾರ ತಾಯಿಯ ಎರಡನೇ ಮಗಳು ಸದ್ಯ ಸಿಂಗಪುರದಲ್ಲಿ ನೆಲೆಸಿದ್ದಾರೆ ಮತ್ತು ತನ್ನ ದಿವಂಗತ ತಂದೆಯ ಆಸ್ತಿಯಲ್ಲಿ ಪಾಲು ಪಡೆಯಲು ಬೆಂಗಳೂರಿನಲ್ಲೇ ಸಿವಿಲ್‌ ವ್ಯಾಜ್ಯವನ್ನೂ ನಡೆಸುತ್ತಿದ್ದಾರೆ. ಆದರೆ, ಈ ಮಧ್ಯದಲ್ಲಿ ಅವರು ಬಲವಂತವಾಗಿ ತನ್ನ ತಾಯಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರಿಗೆ ತೊಂದರೆ ಕೊಡುತ್ತಿರುವುದು ಸರ್ವಥಾ ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.

ಒಂದು ವೇಳೆ ಕಿರಿಯ ಮಗಳು ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಿದ್ದಾರೆ ಎಂದಾದರೆ, ಕಾನೂನು ಈಗಾಗಲೇ ಅವರಿಗೆ ಸೂಕ್ತವಾದ ಮಾರ್ಗವನ್ನು ಒದಗಿಸಿದೆ ಮತ್ತು ಅದನ್ನು ಅವರು ಸಿವಿಲ್‌ ದಾವೆಯ ಮುಖಾಂತರವೇ ಪಡೆಯಲಿ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿನ ವಿವಾದದ ಮೂಲ ತಿರುಳು ಸಿವಿಲ್ ಹಕ್ಕುಗಳಿಗೆ ಸಂಬಂಧಿಸಿದೆ. ಹೀಗಾಗಿ, ದಂಡನಾತ್ಮಕ ಪ್ರಕ್ರಿಯೆಯನ್ನು ಸಿವಿಲ್ ಪರಿಹಾರಗಳಿಗೆ ಪರ್ಯಾಯವಾಗಲು ಅವಕಾಶ ನೀಡಲಾಗುವುದಿಲ್ಲ ಅಥವಾ ಬಾಕಿ ಇರುವ ಆಸ್ತಿ ವಿಭಜನೆಯ ದಾವೆಯಲ್ಲಿ ಅನುಕೂಲ ಪಡೆಯುವ ಸಲುವಾಗಿ ಒತ್ತಡ ಹೇರುವ ಸಾಧನವನ್ನಾಗಿ ಬಳಸುವುದಕ್ಕೆ ಅವಕಾಶ ನೀಡುವುದು ತರವಲ್ಲ ಎಂದು ಪೀಠ ವಿವರಿಸಿದೆ.

ಕೌಟುಂಬಿಕ, ಆಸ್ತಿ ವಿವಾದಗಳಂತಹ ಖಾಸಗಿ ಜಗಳಗಳಲ್ಲಿ ಒಂದು ಪಕ್ಷದ ಪರವಾಗಿ ನ್ಯಾಯದ ತೂಕವನ್ನು ಬದಲಾಯಿಸಲು ಇದನ್ನು ರೂಪಿಸಲಾಗಿಲ್ಲ. ಉತ್ತರಾಧಿಕಾರ, ಆನುವಂಶಿಕತೆ, ಶೀರ್ಷಿಕೆ ಮತ್ತು ಅರ್ಹತೆಯ ಪ್ರಶ್ನೆಗಳು ಸಿವಿಲ್‌ ವ್ಯಾಜ್ಯದಲ್ಲೇ ಇತ್ಯರ್ಥ ಕಾಣಬೇಕು. ಇವೆಲ್ಲಾ ಶತಮಾನಗಳಿಂದ ಸಿವಿಲ್ ನ್ಯಾಯಾಲಯಗಳ ವಿಶೇಷ ವ್ಯಾಪ್ತಿಯೊಳಗಿರುವ ವಿಷಯಗಳು ಎಂದು ಉಲ್ಲೇಖಿಸಿದೆ.

ಸ್ಥಿರಾಸ್ತಿ, ಸ್ಥಿರ ಠೇವಣಿಗಳು, ಬ್ಯಾಂಕ್ ಖಾತೆಗಳು, ಅಂಚೆ ಉಳಿತಾಯ ಮತ್ತು ಮೃತ ವ್ಯಕ್ತಿ ಬಿಟ್ಟುಹೋದ ಪೂರ್ವಜರ ಒಡವೆಗಳ ಹಂಚಿಕೆಯ ಪಾಲುದಾವೆ ವಿಚಾರಣೆಗೆ ಬಾಕಿ ಇರುವಾಗ ಕ್ರಿಮಿನಲ್‌ ದಂಡ ಪ್ರಯೋಗ ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.

ಪ್ರತಿವಾದಿ ಪುತ್ರಿಯು ತಮ್ಮ 73 ವರ್ಷದ ತಾಯಿಯನ್ನು ಅನಗತ್ಯ ಕ್ರಿಮಿನಲ್ ಮೊಕದ್ದಮೆಗೆ ಗುರಿಪಡಿಸಲು ಪೊಲೀಸರ ಸಹಾಯವನ್ನು ಪಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ, ಕುಟುಂಬವೊಂದರ ಮೇಲೆ ಒತ್ತಡ ಹೇರುವ ಅಸ್ತ್ರವಾಗಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬಳಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಬೆಂಗಳೂರಿನ ಪ್ರತಿಷ್ಠಿತ ಬಡವಾಣೆಯೊಂದರಲ್ಲಿ ವಾಸವಿರುವ 73 ವರ್ಷದ ಅರ್ಜಿದಾರರು ಪತಿಯ ನಿಧನಾನಂತರ ಏಕಾಂಗಿಯಾಗಿ ವಾಸ ಮಾಡುತ್ತಿದ್ದಾರೆ. ಮೊದಲ ಪುತ್ರಿ ಬೆಂಗಳೂರಿನ ಮತ್ತೊಂದು ಪ್ರದೇಶದಲ್ಲಿ ಹಾಗೂ ಎರಡನೇ ಪುತ್ರಿ ಸಿಂಗಪುರದಲ್ಲಿ ವಾಸ ಮಾಡುತ್ತಿದ್ದಾರೆ. ಪತಿಯ ಕೋಟ್ಯಂತರ ಸ್ಥಿರ ಮತ್ತು ಚರಾಸ್ತಿಯ ಪಾಲು ದಾವೆ ಸಿವಿಲ್‌ ನ್ಯಾಯಾಲಯದಲ್ಲಿ ಬಾಕಿ ಇದೆ. ಏತನ್ಮಧ್ಯೆ, ಸಿಂಗಪುರದಲ್ಲಿರುವ ಕಿರಿಯ ಪುತ್ರಿಯು ತಾಯಿ ತನಗೆ ದಕ್ಕಬೇಕಾದ ಆಸ್ತಿಯ ದಾಖಲೆಗಳನ್ನು ತಿರುಚಿ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ತಾಯಿ ವಾಸ ಮಾಡುತ್ತಿರುವ ಪ್ರದೇಶ ವ್ಯಾಪ್ತಿಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.‌

Kannada Bar & Bench
kannada.barandbench.com